Monday, June 2, 2025

ಪುರಾಣ ಪ್ರಸಿದ್ದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛದ ಕಾರ್ಯ

ಮೇಲ್ಭಾಗದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳ ತೆರವು 

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರ ಪಾಲಕ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಸಂಪೂರ್ಣ ಶಿಲಾಮಯವಾಗಿರುವ ವೆಂಕಿಪುರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಮೇಲ್ಭಾಗದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ತೆರವುಗೊಳಿಸಲಾಯಿತು. 
    ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರ ಪಾಲಕ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಸಂಪೂರ್ಣ ಶಿಲಾಮಯವಾಗಿರುವ ವೆಂಕಿಪುರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಮೇಲ್ಭಾಗದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ತೆರವುಗೊಳಿಸಲಾಯಿತು. 
    ಹಲವಾರು ವರ್ಷಗಳಿಂದ ದೇವಸ್ಥಾನದ ಮೇಲ್ಭಾಗದಲ್ಲಿ ಗಿಡಗಂಟಿ ಬೆಳೆದು ಬೇರುಗಳು ಬಿಟ್ಟಿದ್ದು, ಇದರಿಂದಾಗಿ ದೇವಸ್ಥಾನ ಶಿಥಿಲಗೊಳ್ಳುವ ಆತಂಕ ಎದುರಾಗಿದ್ದು, ಈ ಸಂಬಂಧ ಹಲವಾರು ಬಾರಿ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ದೇವಸ್ಥಾನದ ಅರ್ಚಕರು, ಭಕ್ತರು ಸಂರಕ್ಷಣಾ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿದ್ದರು. 
    ಈ ನಡುವೆ ಇದೀಗ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಗಿಡಗಂಟಿಗಳನ್ನು ತೆರವುಗೊಳಿಸಲಾಗಿದೆ. ಪುರಾತತ್ವ ಇಲಾಖೆ ಅಧಿಕಾರಿಗಳು, ಸಿಬ್ಬಿಂದಿಗಳ ಕಾರ್ಯಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮಾರುತಿ, ಮಾಜಿ ಸದಸ್ಯ ವಿಶ್ವನಾಥ್, ನರಸೇಗೌಡ, ಸುಬ್ರಹ್ಮಣ್ಯ, ವೈಶಾಖ್, ನಿಖಿಲ್, ಹರ್ಷ, ಪ್ರವೀಣ್ ಸೇರಿದಂತೆ ಸ್ಥಳೀಯ ಭಕ್ತರು ಸಹ ಕೈಜೋಡಿಸುವ ಮೂಲಕ ಯಶಸ್ವಿಗೊಳಿಸಿದ್ದಾರೆ. 

ಸಿಂಗನಮನೆ ಗ್ರಾಮ ಪಂಚಾಯಿತಿ ಅಕ್ರಮ : ಕರವೇ ಹೋರಾಟ ೧೦ನೇ ದಿನಕ್ಕೆ ಅಂತ್ಯ

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ 

ಭದ್ರಾವತಿ ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಹಲವು ಅಕ್ರಮಗಳನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ವತಿಯಿಂದ ಕಳೆದ ೧೦ ದಿನಗಳಿಂದ ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಸೋಮವಾರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಈ ಹಿನ್ನಲೆಯಲ್ಲಿ ಹೋರಾಟ ಅಂತ್ಯಗೊಂಡಿದೆ. 
    ಭದ್ರಾವತಿ : ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಹಲವು ಅಕ್ರಮಗಳನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ವತಿಯಿಂದ ಕಳೆದ ೧೦ ದಿನಗಳಿಂದ ನಡೆಸುತ್ತಿರುವ ಹೋರಾಟ ಸೋಮವಾರ ಅಂತ್ಯಗೊಂಡಿದೆ. 
    ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮಶೇಖರ್ ಹಾಗೂ ಶೇಖರ್‌ನಾಯ್ಕ್‌ರವರ ಅವಧಿಯಲ್ಲಿ ಹೆಚ್ಚುವರಿ ಸಿಬ್ಬಂದಿಗಳು ಹಾಗು ಅಧಿಕಾರಿಗಳು ಮಾಸಿಕ ಸಾಮಾನ್ಯ ಸಭಾ ನಡವಳಿಕೆಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿರುವುದು ಸೇರಿದಂತೆ ಹಲವು ಅಕ್ರಮಗಳನ್ನು ನಡೆಸಿದ್ದು, ಇದನ್ನು ವಿರೋಧಿಸಿ ತಕ್ಷಣ ತಪ್ಪಿತಸ್ಥ ಹೆಚ್ಚುವರಿ ಸಿಬ್ಬಂದಿಗಳು ಹಾಗು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಪಂಚಾಯಿತಿ ಮುಂಭಾಗ ಮೇ.೨೦ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿತ್ತು.
    ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಂ. ಗಂಗಣ್ಣರವರು ಹೋರಾಟಗಾರರ ಮನವೊಲಿಸಿ ಅವರಿಂದ ಮನವಿ ಸ್ವೀಕರಿಸಿ, ಈಗಾಗಲೇ ಬೇಡಿಕೆಯಂತೆ ಹೆಚ್ಚುವರಿ ಸಿಬಂದಿಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ಇನ್ನುಳಿದ ಸರ್ಕಾರಿ ನಿವೇಶನ ಮಾರಾಟದ ಬಗ್ಗೆ ತನಿಖೆ ನಡೆಸುವುದಾಗಿ ಹಾಗೂ ಖಾಸಗಿ ಬಡಾವಣೆಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಪಂಚಾಯಿತಿ ಕಛೇರಿಗೆ ಬಿಡಬೇಕಾದ ಖಾಲಿ ನಿವೇಶನವನ್ನು ಬಿಡದೆ ಇರುವ ಬಗ್ಗೆ ಹಾಗೂ ಸರ್ಕಾರಿ ಗ್ರಾಮಠಾಣ ಒತ್ತುವರಿಮಾಡಿ ಬಡಾವಣೆ ನಿರ್ಮಿಸಿರುವ ಸಂಬಂಧ ತಹಸೀಲ್ದಾರ್ ಹಾಗೂ ಎಡಿಎಲ್‌ಆರ್ ಅವರಿಂದ ಅಳತೆ ನಡೆಸಿ ಜಾಗವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 
ತಿಳಿಸಿದ್ದಾರೆ.
    ಒಂದು ವೇಳೆ ಹೋರಾಟಕ್ಕೆ ನ್ಯಾಯ ಸಿಗದಿದ್ದರೆ ಜು.೧೦ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ, ಪಿಡಿಒ ಹಾಗೂ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಅಧಿಕಾರಿಗಳ ವಿರುದ್ದ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು. 

Sunday, June 1, 2025

ವಿಜೃಂಭಣೆಯಿಂದ ಜರುಗಿದ ಗಂಗಮ್ಮ ಕರಗ ಮಹೋತ್ಸವ

ಭದ್ರಾವತಿ ಜನ್ನಾಪುರ ಹಾಲಪ್ಪ ಶೆಡ್ ಶ್ರೀ ಗಂಗಮ್ಮ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೫ ವರ್ಷದ ಕರಗ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ: ಜನ್ನಾಪುರ ಹಾಲಪ್ಪ ಶೆಡ್ ಶ್ರೀ ಗಂಗಮ್ಮ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೫ ವರ್ಷದ ಕರಗ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. 
    ಶನಿವಾರ ಬೆಳಿಗ್ಗೆ ಅಮ್ಮನವರಿಗೆ ವಿಶೇಷ ಪೂಜೆ ಹಾಗು ಹೋಮ ನೆರವೇರಿತು. ಭಾನುವಾರ ಮಧ್ಯಾಹ್ನ  ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ರಾತ್ರಿ ರಾಜಬೀದಿಯಲ್ಲಿ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು. 


    ಹಾಲಪ್ಪ ಶೆಡ್, ಜನ್ನಾಪುರ, ಗಣೇಶ್ ಕಾಲೋನಿ, ವಿದ್ಯಾಮಂದಿರ, ನ್ಯೂಟೌನ್, ಆಂಜನೇಯ ಅಗ್ರಹಾರ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಕರಗ ಉತ್ಸವದಲ್ಲಿ ಪಾಲ್ಗೊಂಡಿದ್ದರು. 

ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಹೂವು, ಸಿಹಿ ನೀಡಿ ಆರತಿ ಬೆಳಗಿ ಅದ್ದೂರಿ ಸ್ವಾಗತ

ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ವತಿಯಿಂದ ಸ್ತ್ರೀ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ಭದ್ರಾವತಿ ನಗರದ ನ್ಯೂಟೌನ್ ಸೈಂಟ್ ಚಾರ್ಲ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಸಲಾಯಿತು. 
    ಭದ್ರಾವತಿ: ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ವತಿಯಿಂದ ಸ್ತ್ರೀ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಕಾರದೊಂದಿಗೆ ನಗರದ ನ್ಯೂಟೌನ್ ಸೈಂಟ್ ಚಾರ್ಲ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಸಲಾಯಿತು. 
    ಶಾಲಾ ಮಕ್ಕಳಿಗೆ ಹೂವು ಮತ್ತು ಸಿಹಿ ನೀಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು. ವಿಶೇಷ ಎಂದರೆ ಶಾಲಾ ಮಕ್ಕಳ ಜೊತೆಗೆ ಶಿಕ್ಷಕ ವೃಂದದವರಿಗೂ ಕಿರುಕಾಣಿಕೆ ನೀಡುವ ಮೂಲಕ ಆರತಿ ಬೆಳಗಿ ವಿನೂತನವಾಗಿ ಬರಮಾಡಿಕೊಳ್ಳಲಾಯಿತು.   
    ಮೊದಲ ದಿನ ಮಕ್ಕಳಿಗೆ ಪೆನ್ನು, ಪೆನ್ಸಿಲ್, ರಬ್ಬರ್, ನೋಟ್ ಪುಸ್ತಕ ಸೇರಿದಂತೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಶಾಲಾ ಆಡಳಿತ ಮಂಡಳಿಯವರು, ಒಕ್ಕೂಟದ ಸದಸ್ಯೆಯರು ಉಪಸ್ಥಿತರಿದ್ದರು. 

ಶಾಸಕರ ಭರವಸೆ ಮೇರೆಗೆ ೩ನೇ ದಿನಕ್ಕೆ ಅನಿರ್ಧಿಷ್ಟಾವಧಿ ಮುಷ್ಕರ ತಾತ್ಕಾಲಿಕ ಮುಂದೂಡಿಕೆ

ಭದ್ರಾವತಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೌರಕಾರ್ಮಿಕರು ನಗರಸಭೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ೩ನೇ ದಿನ ಭಾನುವಾರ ಸಹ ನಡೆಯಿತು. ಈ ನಡುವೆ ಶಾಸಕರ ಭರವಸೆ ಮೇರೆಗೆ ಮುಷ್ಕರ ತಾತ್ಕಾಲಿಕವಾಗಿ ಮುಂದೂಡಲಾಯಿತು. 
ಭದ್ರಾವತಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೌರಕಾರ್ಮಿಕರು ನಗರಸಭೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ೩ನೇ ದಿನ ಭಾನುವಾರ ಸಹ ನಡೆಯಿತು. ಈ ನಡುವೆ ಶಾಸಕರ ಭರವಸೆ ಮೇರೆಗೆ ಮುಷ್ಕರ ತಾತ್ಕಾಲಿಕವಾಗಿ ಮುಂದೂಡಲಾಯಿತು. 
    ಮುಷ್ಕರ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಹಿರಿಯ ಸದಸ್ಯ, ಶಾಸಕರ ಸಹೋದರ ಬಿ.ಕೆ ಮೋಹನ್ ಮಾತನಾಡಿ, ಪ್ರಸ್ತುತ ಶಾಸಕರು ತಮ್ಮ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಅವರ ಭರವಸೆ ಮೇಲೆ ನಂಬಿಕೆ ಹೊಂದುವ ಮೂಲಕ ಮುಷ್ಕರ ಕೈಬಿಡುವಂತೆ ಮನವಿ ಮಾಡಿದರು. 
    ನಾವು ಸಹ ಪೌರಕಾರ್ಮಿಕರ ಬೇಡಿಕೆಗಳ ಪರವಾಗಿದ್ದೇವೆ. ನಾವು ಬೇಡಿಕೆಗಳನ್ನು ವಿರೋಧಿಸುವುದಿಲ್ಲ. ನಮ್ಮ ಸರ್ಕಾರ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ವಿಶ್ವಾಸವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನ ಸೆಳೆಯುವ ನಿಟ್ಟಿನಲ್ಲಿ ಹೋರಾಟ ರೂಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಶಾಸಕರು ಸಹ ನಿಮ್ಮ ಪರವಾಗಿದ್ದು, ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಿದ್ದಾರೆ. ಹೋರಾಟ ಒಂದೆಡೆ ಇರಲಿ ನಮ್ಮ ನಿಮ್ಮ ನಡುವೆ ಪ್ರೀತಿ, ವಿಶ್ವಾಸ, ನಂಬಿಕೆ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್ ಮಾತನಾಡಿ, ನಮ್ಮ ಸರ್ಕಾರ ಪೌರಕಾರ್ಮಿಕ ಬೇಡಿಕೆಗಳನ್ನು ಈಡೇರಿಸಲಿದೆ. ಕಾಂಗ್ರೆಸ್ ಪಕ್ಷ ನಿಮ್ಮ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತದೆ. ಪೌರಕಾರ್ಮಿಕರ ಹಿತ ಪಕ್ಷದ ಹಿತವಾಗಿದೆ. ಹೋರಾಟಕ್ಕೆ ಬೆಂಬಲ ನೀಡುವ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಯಾವುದೇ ರೀತಿಯ ಹೋರಾಟಕ್ಕೂ ಪಕ್ಷ ಬೆಂಬಲ ನೀಡಲಿದೆ ಎಂದರು. 
    ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ತಾಲೂಕು ಶಾಖೆ ಅಧ್ಯಕ್ಷ ಎಸ್. ಚೇತನ್‌ಕುಮಾರ್ ಮಾತನಾಡಿ, ಶಾಸಕರ ಮೇಲೆ ನಂಬಿಕೆ ಇದೆ. ಹೋರಾಟವನ್ನು ತಾತ್ಕಲಿಕವಾಗಿ ಮುಂದೂಡಲಾಗುವುದು. ನಮ್ಮ ಬೇಡಿಕೆಗಳನ್ನು ನಾವು ಹಿಂಪಡೆಯಲು ಸಾಧ್ಯವಿಲ್ಲ. ಸರ್ಕಾರ ತಕ್ಷಣ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. 
    ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಪ್ರಭಾರ ಪೌರಾಯುಕ್ತರಾದ ಸುನಿತಾಕುಮಾರಿ, ಸದಸ್ಯರಾದ ಚನ್ನಪ್ಪ, ಬಿ.ಎಂ ಮಂಜುನಾಥ್, ಮುಖಂಡರಾದ ಅಮೀರ್‌ಜಾನ್, ಶ್ರೀನಿವಾಸ್, ಮೋಹನ್, ರಂಗನಾಥ್(ಕಬಡ್ಡಿ), ರಾಜೇಂದ್ರ ಸೇರಿಂದ ಇನ್ನಿತರರು ಪಾಲ್ಗೊಂಡಿದ್ದರು.  
    ಪ್ರಧಾನ ಕಾರ್ಯದರ್ಶಿ ಸಿ. ರವಿಪ್ರಸಾದ್, ಜಿಲ್ಲಾಧ್ಯಕ್ಷ ಡಿ.ಎಸ್ ಹೇಮಂತ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ನರಸಿಂಹಮೂರ್ತಿ ಸೇರಿದಂತೆ ನಗರಸಭೆ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಉಪಸ್ಥಿತರಿದ್ದರು. 

Saturday, May 31, 2025

ಪ್ರಾಂಶುಪಾಲ ಡಾ. ಸಿದ್ದಲಿಂಗಮೂರ್ತಿ ನಿವೃತ್ತಿ

ಡಾ. ಸಿದ್ದಲಿಂಗಮೂರ್ತಿ 
    ಭದ್ರಾವತಿ: ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪಾಂಶುಪಾಲರಾದ ಡಾ. ಸಿದ್ದಲಿಂಗಮೂರ್ತಿಯವರು ಶನಿವಾರ ನಿವೃತ್ತಿ ಹೊಂದಿದರು. 
    ಸುಮಾರು ೩೨ ವರ್ಷ ಕರ್ತವ್ಯ ನಿರ್ವಹಿಸಿದ್ದು, ವಿಶೇಷ ಎಂದರೆ ಇಲ್ಲಿಯೇ ಕರ್ತವ್ಯಕ್ಕೆ ಸೇರ್ಪಡೆಗೊಂಡು ಇಲ್ಲಿಯೇ ನಿವೃತ್ತಿ ಹೊಂದಿದ್ದಾರೆ. ಉಪನ್ಯಾಸಕ ವೃತ್ತಿಗೆ ೧೯೯೩ರಲ್ಲಿನೇಮಕಗೊಂಡು ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ ಸುಮಾರು ೨೪ ವರ್ಷ ಬೋಧನೆಯಲ್ಲಿ ತೊಡಗಿಕೊಂಡಿದ್ದು, ನಂತರ ಪ್ರಾಂಶುಪಾಲರ ಹುದ್ದೆಗೆ ಮುಂಬಡ್ತಿ ಪಡೆದು ನ್ಯೂಟೌನ್ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೩ ವರ್ಷ ಹಾಗು ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ೫ ವರ್ಷ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. 
    ಇವರು ತಮ್ಮ ಕರ್ತವ್ಯದ ಅವಧಿಯಲ್ಲಿ ಕಾಲೇಜಿನ ಸಹದ್ಯೋಗಿಗಳು ಹಾಗು ಸಿಬ್ಬಂದಿ ವರ್ಗದವರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಜೊತೆಗೆ ಕಾಲೇಜಿಗೆ ಉತ್ತಮ ಫಲಿತಾಂಶ ತಂದುಕೊಡುವ ನಿಟ್ಟಿನಲ್ಲಿ ಹಾಗು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ಇವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಸಹದ್ಯೋಗಿಗಳು, ಸಿಬ್ಬಂದಿಗಳು, ಹಿತೈಷಿಗಳು, ಸ್ಹೇಹಿತರು ಹಾರೈಸಿದ್ದಾರೆ. 

ಶರಣರ ಬದುಕಿನ ಪರಿಕಲ್ಪನೆ ಅರಿತು ವಚನಗಳನ್ನು ಕಲಿತು ಇತರರಿಗೆ ಪ್ರೇರೇಪಿಸಿ : ಮಹಾಂತಸ್ವಾಮೀಜಿ

ಭದ್ರಾವತಿ ನಗರದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಹಾಗು ಬಸವಾಭಿಮಾನಿಗಳ ಸಹಕಾರದೊಂದಿಗೆ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ಗುರು ಬಸವಣ್ಣನವರ ಜಯಂತ್ಯೋತ್ಸವ ಸಮಾರಂಭ ಕುವೆಂಪು ವಿಶ್ವ ವಿದ್ಯಾಲಯದ  ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ, ತಿಪ್ಪಾಯಿಕೊಪ್ಪದ ಶ್ರೀಗುರು ಮೂಕಪ್ಪ ಶಿವಯೋಗಿಗಳ ಮಠದ ಶ್ರೀ ಮ.ನಿ.ಪ್ರ. ಮಹಾಂತಸ್ವಾಮೀಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಈ ನಾಡಿನ ಪ್ರತಿಯೊಬ್ಬರು ಶರಣರ ಬದುಕಿನ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಜೊತೆಗೆ ಅವರ ವಚನಗಳನ್ನು ಕಲಿತು ಇತರರಿಗೆ ಪ್ರೇರೇಪಿಸಬೇಕೆಂದು ತಿಪ್ಪಾಯಿಕೊಪ್ಪದ ಶ್ರೀಗುರು ಮೂಕಪ್ಪ ಶಿವಯೋಗಿಗಳ ಮಠದ ಶ್ರೀ ಮ.ನಿ.ಪ್ರ. ಮಹಾಂತಸ್ವಾಮೀಜಿಯವರು ಹೇಳಿದರು. 
    ಅವರು ನಗರದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಸಿದ್ದಾರೂಢ ನಗರದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಹಾಗು ಬಸವಾಭಿಮಾನಿಗಳ ಸಹಕಾರದೊಂದಿಗೆ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ಗುರು ಬಸವಣ್ಣನವರ ಜಯಂತ್ಯೋತ್ಸವ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ಗುಡಿ ಗುಂಡಾರಗಳನ್ನು ವಿರೋಧಿಸಿದ ಬಸವಣ್ಣನವರು ಇಷ್ಟಲಿಂಗದ ಪರಿಕಲ್ಪನೆಯನ್ನು ನೀಡಿ ದೇಹವೇ ದೇಗುಲವನ್ನಾಗಿಸಿದರು. ಇಂತಹ ಶರಣ ಧರ್ಮ ಪರಂಪರೆಯನ್ನು ಉಳಿಸಿಕೊಳ್ಳಬೇಕು. ಶರಣರ ವಚನಗಳು ಪ್ರತಿಯೊಬ್ಬರಿಗೂ ದಾರಿ ದೀಪಗಳಾಗಿವೆ. ನಾವುಗಳೇ ವಚನಗಳನ್ನು ಕಲಿತು ಪಾಲಿಸದಿದ್ದರೆ ಬೇರೆ ಯಾರು ಕಲಿಯುತ್ತಾರೆಂದು ಪ್ರಶ್ನಿಸಿದರು.  
    ಕುವೆಂಪು ವಿಶ್ವ ವಿದ್ಯಾಲಯದ  ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರು ಯಾವುದೇ ಧರ್ಮ, ಜಾತಿಯ ಹಿನ್ನಲೆಯಲ್ಲಿ ಕಾಣುವುದಿಲ್ಲ. ಎಲ್ಲಾ ಜಾತಿ-ಜನಾಂಗಕ್ಕೂ ಸಮಾನತೆ ಬೋಧಿಸಿ ಸಮಾಜದಲ್ಲಿ ನಾವು ಹೇಗೆ ವರ್ತಿಸಬೇಕು, ಹೇಗೆ ಬದುಕಬೇಕು ಎಂಬುದರ ಬಗ್ಗೆ ತಮ್ಮ ವಚನಗಳ ಮೂಲಕ ಸಮಾಜಕ್ಕೆ ತಿಳಿಸಿಕೊಟ್ಟ ಮಹಾನ್ ದಾರ್ಶನಿಕ ಎಂದರು.
    ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಸಂಘರ್ಷ ಉಂಟಾಗಿ ಆಶಾಂತಿ ತಾಂಡವಾಡುತ್ತಿದೆ. ಇದರಿಂದ ಸಮಾಜದಲ್ಲಿ ಸಾಮರಸ್ಯ ಇಲ್ಲದೆ ಜೀವನ ನಲುಗುತ್ತಿದೆ. ಬಸವಣ್ಣನವರು ಸಮಾಜದಲ್ಲಿನ ತಳ ಸಮುದಾಯಗಳ ಬಗ್ಗೆ, ಅವರ ನೋವು, ಸಂಕಟಗಳ ಬಗ್ಗೆ ಅರಿತಷ್ಟು ಅಂಬೇಡ್ಜರ್ ಹೊರತು ಪಡಿಸಿದರೆ ಬೇರೆ ಯಾರೂ ಅರಿಯಲಿಲ್ಲ. ಹಾಗಾಗಿ ಜಗತ್ತಿನ ವಿಸ್ಮಯ ಬಸವಣ್ಣ. ಮಾತು, ಕೃತಿ, ನಡೆ, ನುಡಿಗಳು ಒಂದಾಗಿ ಅದರಂತೆ ನಡೆದು ಸಮಾಜ ಸಹ ಅದೇ ದಾರಿಯಲಿ, ಅದೇ ರೀತಿಯಲ್ಲಿ ನಡೆಯಬೇಕು ಎಂದರು.
ಇಂದಿನ ಬಹಳಷ್ಟು ಸಮಸ್ಯೆಗಳಿಗೆ, ಪ್ರಶ್ನೆಗಳಿಗೆ ವಚನಗಳಲ್ಲಿ ಸ್ಪಷ್ಟ ಉತ್ತರ ಇದೆ. ಇಂತಹ ವಚನಗಳ ನೈಜತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಬರಿ ಸ್ವಾರ್ಥವೇ ತುಂಬಿರುವ ಈ ಜಗತ್ತಿನಲ್ಲಿ ಹೊಸ ಆಲೋಚನೆಗಳ ಮೂಲಕ ಹೊಸ ಜಗತ್ತನ್ನು ನಿರ್ಮಿಸಬೇಕಿದೆ ಎಂದರು. 
    ಹೊನ್ನಾವರ ಕವಲಕ್ಕಿಯ ಡಾ. ಎಚ್.ಎಸ್ ಅನುಪಮ ಉಪನ್ಯಾಸಕಾರರಾಗಿ ಆಗಮಿಸಿ ಮಾತನಾಡಿ, ವಚನಗಳು ಪಠ್ಯಗಳಲ್ಲ ಅಚರಣಾ ತತ್ವಗಳು. ಇದನ್ನು ಮನೆಯಲ್ಲಿ ಪ್ರತಿ ದಿನ ಓದಿ ಮನನ ಮಾಡಿಕೊಳ್ಳುವ ಮೂಲಕ ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳಬೇಕು. ಇಲ್ಲದಿದ್ದೆರ ವಚನಗಳು ಸಹ ಮಂತ್ರಗಳ ಪಟ್ಟಿಗೆ ಸೇರಿಕೊಳ್ಳುತ್ತವೆ ಎಂದು ಎಚ್ಚರಿಸಿದರು.
    ಬುಧ್ಧನ ನಂತರ ಭಿನ್ನ ಪರಂಪರೆ ನೀಡಿದ್ದು ಶರಣಪರಂಪರೆ. ಒಂದರ್ಥದಲ್ಲಿ ಬುಧ್ಧನ ಬೌಧ್ಧ ಧರ್ಮಕ್ಕೂ ಶರಣಪರಂಪರೆಗೂ ಸಾಮ್ಯತೆ ಇದೆ. ಇದರ ಬಗ್ಗೆ ವಿಸ್ತೃತವಾದ ತುಲನಾತ್ಮಕ ಅಧ್ಯಯನದ ಅವಶ್ಯಕತೆ ಹಾಗು ಆದ್ಯತೆ ಇದೆ ಎಂದರು. 
    ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಟಿ.ಜೆ. ನಾಗರತ್ನ ಗಾಯನ ಸಾರಥ್ಯದಲ್ಲಿ ನಗರದ ೧೦೮ ಗಾಯಕರಿಂದ ನೂರೆಂಟು ಕಂಠದಲ್ಲಿ ಹಾಡಿದ ಸಾಮೂಹಿಕ ವಚನ ಗಾಯನ ಸಮಾರಂಭದ ವಿಶೇಷ ಆಕರ್ಷಣೆಯಾಗಿ ಕಂಡು ಬಂದಿತು. 
     ಮಹಿಳಾ ಸದಸ್ಯೆಯರು ವಚನ ಗಾಯನ ಮಾಡಿದರು. ಶಂಕರ ಮೂರ್ತಿ ಸ್ವಾಗತಿಸಿದರು. ಎಚ್.ಎನ್.ಮಹಾರುದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಿರಣ್ ಅತಿಥಿ ಪರಿಚಯ ನಡೆಸಿ ಕೊಟ್ಟರು. ನಂದಿನಿ ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿ, ಕತ್ತಲಗೆರೆ ತಿಮ್ಮಪ್ಪ ವಂದಿಸಿದರು.