ಮಂಗಳವಾರ, ಜುಲೈ 22, 2025

ವೇತನ ಪರಿಷ್ಕರಣೆ ಯಥಾಸ್ಥಿತಿ ಮುಂದುವರೆಸಲು ಒತ್ತಾಯಿಸಿ ಪ್ರತಿಭಟನೆ

ನಿವೃತ್ತ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಈ ಹಿಂದಿನಂತೆ ಯಥಾಸ್ಥಿತಿ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಭದ್ರಾವತಿ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ನಿವೃತ್ತ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಈ ಹಿಂದಿನಂತೆ ಯಥಾಸ್ಥಿತಿ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು. 
    ಪ್ರಧಾನ ಕಾರ್ಯದರ್ಶಿ ಎಚ್.ಎನ್ ಮಹಾರುದ್ರ ಮಾತನಾಡಿ,  ಮಾರ್ಚ್ ತಿಂಗಳಿನಲ್ಲಿ ಲೋಕಸಭೆಯಲ್ಲಿ ಹೊಸ ಪಿಂಚಣಿ ಹಾಗೂ ಹಳೇ ಪಿಂಚಣಿ  ಪರಿಷ್ಕರಣೆ ಮಾಡುವ ವಿಷಯ ಮಂಡಿಸಲಾಗಿದೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರು ಆರ್ಥಿಕ ಬಿಲ್ ಮಂಡಿಸುವಾಗ ೦೧.೦೪.೨೦೨೬ಕ್ಕೆ ಮೊದಲು ನಿವೃತ್ತಿಯಾಗುವ ಸರ್ಕಾರಿ ನೌಕರರಿಗೆ ಪಿಂಚಣಿ, ಕುಟುಂಬ ಪಿಂಚಣಿ ಹಾಗೂ ತುಟ್ಟಿ ಭತ್ಯೆ ಪರಿಷ್ಕರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಇದು ನಿವೃತ್ತ ನೌಕರರಿಗೆ ಅಘಾತ ಉಂಟುಮಾಡಿದೆ.  ಅಲ್ಲದೆ ಇದು ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
    ಸರ್ಕಾರಿ ನೌಕರರು ತಮ್ಮ ಕರ್ತವ್ಯದ ಅವಧಿಯಲ್ಲಿ ನೌಕರಿಯನ್ನೇ ನಂಬಿ ಬಂದವರು. ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಎಲ್ಲಾ ಯೋಜನೆಗಳನ್ನು ಪ್ರ್ರಾಮಾಣಿಕವಾಗಿ ಜನರಿಗೆ ಮುಟ್ಟಿಸುವ ಕಾರ್ಯ ನಿರ್ವಹಿಸಿರುತ್ತೇವೆ. ಕರ್ತವ್ಯದ ಅವಧಿಯಲ್ಲಿ ಕರ್ತವ್ಯವೇ ದೇವರೆಂದು ನಂಬಿ ಜೀವವನ್ನು ಮುಡುಪಾಗಿಟ್ಟಿದ್ದೇವೆ.  ನಿವೃತ್ತಿಯಾದ ಮೇಲೆ ಬರುವ ಪಿಂಚಣಿಯನ್ನು ನಂಬಿ ಇಳಿವಯಸ್ಸಿನಲ್ಲಿ ಬದುಕು ಕಟ್ಟಿಕೊಂಡವರು. ಇಂತಹ ಹಿರಿಯ ಜೀವಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜೀವನೋಪಾಯಕ್ಕೆ ಬೇಕಾದ ಸೌಲತ್ತುಗಳನ್ನು ಕೊಡುವ ಬದಲು ಕತ್ತರಿ ಹಾಕುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು. ತಹಸೀಲ್ದಾರ್-ಗ್ರೇಡ್-೨ ಮಂಜಾನಾಯ್ಕರವರ ಮೂಲಕ  ಮನವಿ ಸಲ್ಲಿಸಿಲಾಯಿತು. 
    ಸಂಘದ ಅಧ್ಯಕ್ಷ ಬಿ.ಎಲ್.ರಂಗಸ್ವಾಮಿ ಪ್ರಭಟನೆ ನೇತೃತ್ವ ವಹಿಸಿದ್ದರು. ಪ್ರಮುಖರಾದ ಟಿ.ಜಿ ಚಂದ್ರಪ್ಪ, ಶಿವಲಿಂಗಪ್ಪ, ಚಂದ್ರಶೇಖರ ಚಕ್ರಸಾಲಿ, ಕಾಂತಪ್ಪ, ಸಿ. ಜಯಪ್ಪ, ಬಲರಾಮಗಿರಿ, ಶಿವೇಗೌಡ, ಚಿದಾನಂದ, ರಂಗಸ್ವಾಮಿ, ರಾಧಾಕೃಷ್ಣ ಭಟ್, ಮೋಹನ್‌ಕುಮಾರ್, ತಿಪ್ಪಮ್ಮ, ಸರೋಜಮ್ಮ ಸೇರಿದಂತೆ ನಿವೃತ್ತ ಸರ್ಕಾರಿ ನೌಕರರು ಪಾಲ್ಗೊಂಡಿದ್ದರು. 

ಅನನ್ಯ ಎಜ್ಯುಕೇಷನ್ ಟ್ರಸ್ಟ್‌ನಿಂದ ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ

ಭದ್ರಾವತಿ ನಗರದ ಅಪ್ಪರ್ ಹುತ್ತಾ, ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಶಿವಮೊಗ್ಗ ಆಶೀರ್ವಾದ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಮಂಗಳವಾರ ಅನನ್ಯ ಪ್ರೌಢಶಾಲಾ ಆವರಣದಲ್ಲಿ ೩ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. 
    ಭದ್ರಾವತಿ: ನಗರದ ಅಪ್ಪರ್ ಹುತ್ತಾ, ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಶಿವಮೊಗ್ಗ ಆಶೀರ್ವಾದ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಮಂಗಳವಾರ ಅನನ್ಯ ಪ್ರೌಢಶಾಲಾ ಆವರಣದಲ್ಲಿ ೩ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. 
    ನೇತ್ರ ತಜ್ಞ ಡಾ. ಅರುಣ್ ನೇತೃತ್ವದಲ್ಲಿ  ನಡೆದ ಶಿಬಿರದಲ್ಲಿ ೩ ರಿಂದ ೧೦ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೂ ತಪಾಸಣೆ ನಡೆಸುವ ಜೊತೆಗೆ ಕಣ್ಣಿನ ದೃಷ್ಠಿ ಸಮಸ್ಯೆ ಹೊಂದಿರುವ ಮಕ್ಕಳ ಪೋಷಕರನ್ನು ಕರೆಸಿ ಅವರಿಗೆ ಅವರ ಮಕ್ಕಳ ಕಣ್ಣಿನ ದೃಷ್ಠಿ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಯಿತು. 
    ಡಾ.ಅರುಣ್ ಮಾತನಾಡಿ, ಒಳ್ಳೆಯ ಆಹಾರ ಸ್ವೀಕರಿಸುವುದರಿಂದ ಕಣ್ಣಿನ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಮಿತಿಮೀರಿದ ಮೊಬೈಲ್ ವೀಕ್ಷಣೆಯು ನಮ್ಮ ಕಣ್ಣಿಗೆ ಸಮಸ್ಯೆಯುಂಟು ಮಾಡುತ್ತದೆ. ಈ ಹಿನ್ನಲೆಯಲ್ಲಿ ಮೊಬೈಲ್ ವೀಕ್ಷಣೆ ನಿರ್ಧಿಷ್ಟ ಸಮಯಕ್ಕೆ ಮಾತ್ರ ಮೀಸಲಿರಿಸಿಕೊಳ್ಳಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು. 
    ಅನನ್ಯ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್ ಅನಿಲ್ ಕುಮಾರ್ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ರಾಧಿಕಾ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.  
    ಆಡಳಿತಾಧಿಕಾರಿ ವೇಣುಗೋಪಾಲ್, ಮುಖ್ಯ ಶಿಕ್ಷಕ ಕೆ. ಕಲ್ಲೇಶ್ ಕುಮಾರ್, ಉಪ ಮುಖ್ಯೋಪಾಧ್ಯಾಯಿನಿ ಆರ್. ಸುನಿತಾ, ಅನನ್ಯ ಹ್ಯಾಪಿ ಹಾರ್ಟ್‌ನ ಮುಖ್ಯ ಶಿಕ್ಷಕಿ ತನುಜ ಅನಿಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜು.೨೭ರಂದು ಸಂಗ್ಯಾ-ಬಾಳ್ಯಾ ನಾಟಕ ಪ್ರದರ್ಶನ

    ಭದ್ರಾವತಿ: ನಗರದ ಮಿತ್ರ ಕಲಾ ಮಂಡಳಿ ವತಿಯಿಂದ ಸಂಘದ ಸಹಾಯಾರ್ಥ ನಾಟಕ ಪ್ರದರ್ಶನ ಜು.೨೭ರ ಭಾನುವಾರ ಸಂಜೆ ೬ ಗಂಟೆಗೆ ನ್ಯೂಟೌನ್ ಶಾರದ ಮಂದಿರದಲ್ಲಿ ಆಯೋಜಿಸಲಾಗಿದೆ. 
    ರಂಗಕರ್ಮಿ, ಕಿರುತೆರೆ, ಚಲನಚಿತ್ರ ನಟ ಅಪರಂಜಿ ಶಿವರಾಜ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರರ ಜಾನಪದ ನಾಟಕ `ಸಂಗ್ಯಾ ಬಾಳ್ಯಾ' ಪ್ರದರ್ಶನಗೊಳ್ಳಲಿದೆ. ಸಂಗ್ಯಾ-ಜೆ. ಭಾನುಪ್ರಕಾಶ್, ಬಾಳ್ಯಾ-ಎ.ಜಿ ಫ್ರಾನ್ಸಿಸ್, ಮೇಟಿತಾಳ-ವಿ. ಹಿರೇಮಠ್, ಈರ್‍ಯಾರಗಳೆ-ಭಾನುಪ್ರಕಾಶ್ ಬಾಬು, ಇರಪಕ್ಷಿ-ಎಸ್.ದೀಪಕ್, ಬಸವಂತ-ಬಿ.ಎಸ್ ಮಲ್ಲಿಕಾರ್ಜುನ್, ಮಾರವಾಡಿ-ಶಿವಮಹಾದೇವ, ಪೋಸ್ಟ್‌ಮ್ಯಾನ್-ಎಂ.ಎ ಬೆನಕೇಗೌಡ, ಬ್ಯಾಗರಿ-ಎಂ.ಕೆ ರಾಘವೇಂದ್ರ, ಆಳು-ಜಗದೀಶ್ವರಚಾರಿ, ಗಂಗಾ-ಪ್ರಿಯಾ ನಾಗರಾಜ್, ಪರಮ್ಮ-ಎಸ್. ಸರೋಜಮ್ಮ ಹಾಗು ಮಾಸ್ಟರ್ ಪ್ರತೀಕ್ ಡಿ. ಪ್ರಾತಧಾರಿಗಳಾಗಿದ್ದಾರೆ. 
    ಬಿ.ಕೆ ಮೋಹನ್ ಕುಮಾರ್ ಮತ್ತು ಡಿ.ಆರ್ ಹರೀಶ್-ಸಂಗೀತ, ಜಗದೀಶ್ವರಚಾರಿ-ಬೆಳಕು, ಎಂ.ಕೆ ರಾಘವೇಂದ್ರ ಮತ್ತು ವಿ. ಹಿರೇಮಠ್-ಅಲಂಕಾರ, ಮೇಳ-ಜಿ. ದಿವಾಕರ, ವಿ.ಎ ಮಾರ್ಟಿನ್, ಕೆ.ಕೆ ಸಾಯಿಕೃಷ್ಣ, ಜಿ.ಆರ್ ಭಾರ್ಗವಿ, ಸಿ.ಎಚ್ ಪುಷ್ಪಲತಾ ಮತ್ತು ಎಚ್.ಆರ್ ಸುಧಾ ಕಾರ್ಯ ನಿರ್ವಹಿಸಲಿದ್ದಾರೆ.  
    ಶಾಸಕ ಬಿ.ಕೆ ಸಂಗಮೇಶ್ವರ್ ನಾಟಕ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ಪ್ರಭಾಕರ ಬೀರಯ್ಯ, ಬಿಜೆಪಿ ಯುವ ಮುಖಂಡ ಮಂಗೋಟೆ ರುದ್ರೇಶ್, ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಕ ಬಿ.ಎಲ್ ಚಂದ್ವಾನಿ, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಎಚ್. ಉಮೇಶ್, ನವೋದಯ ಕಲಾ ಸಂಘದ ಅಧ್ಯಕ್ಷ ಡಾ. ಜಿ.ಎಂ ನಟರಾಜ್, ಸಮಾಜ ಸೇವಕ ಪೊಲೀಸ್ ಉಮೇಶ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮಿತ್ರ ಕಲಾ ಮಂಡಳಿ ಕೋರಿದೆ. 

ಸೋಮವಾರ, ಜುಲೈ 21, 2025

ಸಮಾಜಕ್ಕೆ ಡಾ. ಎಚ್.ಎಸ್.ವಿ ಕೊಡುಗೆ ಅನನ್ಯ : ಡಾ. ಕೃಷ್ಣ ಎಸ್. ಭಟ್

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹಿಂಭಾಗದ ಶ್ರೀ ಗಾಯಿತ್ರಿ ಧರ್ಮ ಶಾಲಾ ಸಭಾಂಗಣದಲ್ಲಿ ದಿವಂಗತ ಡಾ. ಎಚ್.ಎಸ್ ವೆಂಕಟೇಶ್ ಮೂರ್ತಿರವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ  ಭಾವ-ಗಾನ-ಗೌರವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಭೂಮಿಕಾ ವೇದಿಕೆ ಆಧ್ಯಕ್ಷ, ವೈದ್ಯ ಡಾ. ಕೃಷ್ಣ ಎಸ್. ಭಟ್ ಮಾತನಾಡಿದರು.
    ಭದ್ರಾವತಿ: ಪ್ರಮುಖ ವ್ಯಕ್ತಿಗಳ ಸಂಸ್ಮರಣೆ ಮಾಡುವುದು ಎಂದರೆ ಆ ಪ್ರಸಿದ್ಧ ವ್ಯಕ್ತಿಗಳ ವ್ಯಕ್ತಿತ್ವ, ಜೀವನ ಶೈಲಿ, ಅವರು ಸಮಾಜಕ್ಕೆ ಹಾಗು ತಾವು ಇರುವ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯವಾಗಿದೆ ಎಂದು ಭೂಮಿಕಾ ವೇದಿಕೆ ಆಧ್ಯಕ್ಷ, ವೈದ್ಯ ಡಾ. ಕೃಷ್ಣ ಎಸ್. ಭಟ್ ಹೇಳಿದರು.
    ಅವರು ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹಿಂಭಾಗದ ಶ್ರೀ ಗಾಯಿತ್ರಿ ಧರ್ಮ ಶಾಲಾ ಸಭಾಂಗಣದಲ್ಲಿ ದಿವಂಗತ ಡಾ. ಎಚ್.ಎಸ್ ವೆಂಕಟೇಶ್ ಮೂರ್ತಿರವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ  ಭಾವ-ಗಾನ-ಗೌರವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
    ವೆಂಕಟೇಶ್‌ಮೂರ್ತಿಯವರ ಕವಿತೆ, ಕವನಗಳಲ್ಲಿ ಆಯಾಯ ಕಾಲಘಟ್ಟದಲ್ಲಿ ಆಯಾಯ ವಯೋಮಾನದವರು ಅನುಭವಿಸಿದ ಸಂಗತಿಗಳ ಹಾಡನ್ನು ರಚಿಸಿರುವುದು ಅವರ ವ್ಯಕ್ತಿತ್ವದ ವಿಶೇಷವಾಗಿದೆ. ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ರಚಿಸಿದ ಕವನ, ಕವಿತೆಗಳ ಮೂಲಕ ಸದಾ ಕನ್ನಡಿಗರ ಮನದಲ್ಲಿ ಉಳಿದುಕೊಂಡಿದ್ದಾರೆ ಎಂದರು.
    ಭೂಮಿಕಾ ವೇದಿಕೆ ಸದಸ್ಯರು ವೆಂಕಟೇಶ್ ಮೂರ್ತಿಯವರು ರಚಿಸಿರುವ ಆಯ್ದ ಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು.
    ಎಸ್.ಜಯಾ ಹೆಗಡೆ ವೇದಿಕೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ವೇದಿಕೆ ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್, ಕೋಶಾಧ್ಯಕ್ಷ ಮುನಿರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಶಾಮಲ ಮತ್ತು ವೀಣಾ ಪ್ರಾರ್ಥಿಸಿ, ಅಪರಂಜಿ ಶಿವರಾಜ್ ಸ್ವಾಗತಿಸಿದರು. ಆನಂದ್ ಕಾರ್ಯಕ್ರಮ ನಿರೂಪಿಸಿದರು. ಉಷಾ ಶಶಿಧರ ಎಚ್.ಎಸ್ ವೆಂಕಟೇಶ್ ಮೂರ್ತಿಯವರ ಜೀವನ ಪರಿಚಯ ಮಾಡಿದರು. ನಿವೃತ್ತ ಪ್ರಾಂಶುಪಾಲ ಬಿ.ಕಾಂತಪ್ಪ ನುಡಿ ನಮನ ಸಲ್ಲಿಸಿ, ರಮೇಶ್ ವಂದಿಸಿದರು. 

ಜು.೨೩ರಂದು ಪ್ರತಿಭಾ ಪುರಸ್ಕಾರ

    ಭದ್ರಾವತಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಶಾಖೆ ವತಿಯಿಂದ ಜು.೨೩ರಂದು ಬೆಳಿಗ್ಗೆ ೧೦.೩೦ಕ್ಕೆ ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. 
    ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ ವಹಿಸಲಿದ್ದು, ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು. 
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಹಾಸಭಾ ತಾಲೂಕು ಶಾಖೆ ಅಧ್ಯಕ್ಷ ಕೆ.ಎಸ್ ವಿಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ಅಣಬೇರು ರಾಜಣ್ಣ, ಎಸ್.ಎಸ್ ಗಣೇಶ್ ಮತ್ತು ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. 
    ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಪ್ರತಿಭಾ ಪುರಸ್ಕಾರ ವಿತರಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ನಗರಸಭೆ ಅಧ್ಯಕ್ಷೆ ಗೀತಾ ರಾಜ್ ಕುಮಾರ್ ಮತ್ತು ಮಾಜಿ ಸದಸ್ಯ ಎಸ್. ರುದ್ರೇಗೌಡ ಅವರಿಗೆ ಸನ್ಮಾನ ನಡೆಯಲಿದೆ.  
    ಎಚ್.ಎಂ ರೇಣುಕ ಪ್ರಸನ್ನ, ನಟರಾಜ ಸಾಗರನಹಳ್ಳಿ, ಎಂ.ಜಿ ಶಶಿಕಲಾಮೂರ್ತಿ, ಡಿ.ಬಿ ಗಿರೀಶ್ ಕುಮಾರ್, ಎನ್.ವಿ ಈರೇಶ್, ರುದ್ರಮುನಿ ಎನ್. ಸಜ್ಜನ್, ಬಳ್ಳೇಕೆರೆ ಸಂತೋಷ್, ಬಿ.ಎಂ ಮಲ್ಲಿಕಾರ್ಜುನಸ್ವಾಮಿ, ಪ್ರವೀಣ್, ಗುರುಕುಮಾರ್ ಪಾಟೀಲ್, ಸುಧೀರ್, ಉಮೇಶ್ ಮತ್ತು ಶಿವಕುಮಾರ್ ಹಾಗು ಹಿರಿಯ ಗಣ್ಯರಾದ ಎಚ್.ವಿ ಶಿವರುದ್ರಪ್ಪ, ವಿಶ್ವನಾಥ ಕೋಠಿ, ಡಾ. ವಿಜಯದೇವಿ, ಜಿ.ಕೆ ನವಿಲಪ್ಪ, ಕೆ.ಬಿ ಪರಮೇಶ್ವರಪ್ಪ ಮತ್ತು ಎಚ್.ಎಸ್ ಮಲ್ಲೇಶಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 

ದ್ವಿಚಕ್ರ ವಾಹನ ಅಪಘಾತ : ಅರ್ಚಕ ಸಾವು

ಭದ್ರಾವತಿ: ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದ ನಗರಸಭೆ ವ್ಯಾಪ್ತಿಯ ಹನುಮಂತಪ್ಪ ಕಾಲೋನಿಯ ಅರ್ಚಕರೊಬ್ಬರು ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.   
ಬಿ.ಕೆ ಲಕ್ಷ್ಮೀಕಾಂತ(೫೦) ಮೃತಪಟ್ಟ ಅರ್ಚಕರಾಗಿದ್ದು, ಇವರು ಪ್ರತಿ ದಿನ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕೃಷ್ಣ ದೇವಸ್ಥಾನ ಹಾಗು ಹುಣಸೇಕಟ್ಟೆ ಜಂಕ್ಷನ್, ರಂಗನಾಥಪುರ ಬಿ.ಬಿ ಮೈನ್ಸ್ ಹತ್ತಿರದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಇವರು ಜು.೧೯ರಂದು ಮಧ್ಯಾಹ್ನ ೨.೩೦ರ ಸಮಯದಲ್ಲಿ ಪೂಜೆ ಮುಗಿಸಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದಾಗ ರಾಮಿನಕೊಪ್ಪ ಕ್ರಾಸ್ ಮತ್ತು ರಂಗನಾಥಪುರ ಮಧ್ಯೆ ಶಿವಮೊಗ್ಗ ಮಾರ್ಗದಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಲಕ್ಷ್ಮೀಕಾಂತ್‌ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಲಕ್ಷ್ಮೀಕಾಂತ್‌ರವರ ಸಹೋದರ ರಂಗನಾಥ್‌ರವರು ಕಾರು ಚಾಲಕನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಭಾನುವಾರ, ಜುಲೈ 20, 2025

ವಿಶೇಷ ಚೇತನ ಮಕ್ಕಳ ಸೇವೆ ಪುಣ್ಯದ ಕೆಲಸ : ಎ.ಕೆ ನಾಗೇಂದ್ರಪ್ಪ

ಭದ್ರಾವತಿ ಮಾಚೇನಹಳ್ಳಿ ಡೈರಿ ಸಮೀಪದ ಮದರ್ ತೆರೇಸಾ ವಸತಿ ಶಾಲೆಯ ೧ ರಿಂದ ೧೦ನೇ ತರಗತಿ ಶ್ರವಣ ನ್ಯೂನ್ಯತೆಯುಳ್ಳ ವಿಶೇಷ ಚೇತನ ಮಕ್ಕಳಿಗೆ ಹಾಸಿಗೆ ಹೊದಿಕೆ(ಬೆಡ್ ಶೀಟ್), ಛತ್ರಿ ಹಾಗು ಬ್ಯಾಗ್ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ಭದ್ರಾವತಿ: ವಿಶೇಷ ಚೇತನ ಮಕ್ಕಳ ಸೇವೆ ಮಾಡುವುದು ಪುಣ್ಯದ ಕೆಲಸವಾಗಿದ್ದು, ಇಂತಹ ಮಕ್ಕಳ ಬೆಳವಣಿಗೆಗೆ ಸಮಾಜದ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು. 
    ಅವರು ಮಾಚೇನಹಳ್ಳಿ ಡೈರಿ ಸಮೀಪದ ಮದರ್ ತೆರೇಸಾ ವಸತಿ ಶಾಲೆಯ ೧ ರಿಂದ ೧೦ನೇ ತರಗತಿ ಶ್ರವಣ ನ್ಯೂನ್ಯತೆಯುಳ್ಳ ವಿಶೇಷ ಚೇತನ ಮಕ್ಕಳಿಗೆ ಹಾಸಿಗೆ ಹೊದಿಕೆ(ಬೆಡ್ ಶೀಟ್), ಛತ್ರಿ ಹಾಗು ಬ್ಯಾಗ್ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 
    ವಿಶೇಷ ಚೇತನ ಮಕ್ಕಳ ಶ್ರೇಯೋಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸುವ ಮೂಲಕ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕೆಂದರು. 
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜೋಸ್ ಮ್ಯಾಥೋ ಮಾತನಾಡಿ, ವಿಶೇಷ ಚೇತನ ಮಕ್ಕಳನ್ನು ಗುರುತಿಸಿ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗುವಂತೆ ನೆರವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
      ಬೆಂಗಳೂರಿನ ದಾನಿಗಳಾದ ಪಲ್ಲವಿ-ಸಾಗರ್ ದಂಪತಿ ಮತ್ತು ಅಮೂಲ್ಯ ಮಕ್ಕಳಿಗೆ ಹಾಸಿಗೆ ಹೊದಿಕೆ (ಬೆಡ್ ಶೀಟ್), ಛತ್ರಿ ಮತ್ತು ಬ್ಯಾಗ್ ವಿತರಿಸಿದರು. ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಶಾಲೆಯ ಅಧ್ಯಕ್ಷರಾದ ಫಾದರ್ ಎನ್.ಎಸ್ ಜೋಸೆಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೀತ ಸ್ವಾಗತಿಸಿ ನಿಶಾ ವಂದಿಸಿದರು. ಮಕ್ಕಳ ಪಟ್ಟಿಯನ್ನು ರೂಪ ವಾಚಿಸಿದರು.