ಗುರುವಾರ, ಜುಲೈ 31, 2025

ಸೆಲ್ವರಾಜ್ ನಿಧನ


ಸೆಲ್ವರಾಜ್
ಭದ್ರಾವತಿ : ಹಳೇನಗರದ ಭೂತನಗುಡಿ ನಿವಾಸಿ, ಕ್ರೈಸ್ತ ಸಮುದಾಯದ ಮುಖಂಡ ಸೆಲ್ವರಾಜ್(೫೮) ಗುರುವಾರ ನಿಧನ ಹೊಂದಿದರು. 
ಪತ್ನಿ, ಪುತ್ರ ಇದ್ದಾರೆ.  ಶುಕ್ರವಾರ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತ ಸಮಾಧಿಯಲ್ಲಿ ಇವರ ಅಂತ್ಯಕ್ರಿಯೆ ನಡೆಯಲಿದೆ. ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 
 

ಶ್ರೀ ಭಗವದ್ಗೀತಾ ಅಭಿಯಾನ ಪೂರ್ವಭಾವಿ ಸಭೆ : ಮಾಹಿತಿ ಪತ್ರ ಬಿಡುಗಡೆ

 ಶ್ರೀ ಭಗವದ್ಗೀತಾ ಅಭಿಯಾನ ಸಂಬಂಧ ಭದ್ರಾವತಿ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಗುರುವಾರ ತಾಲೂಕು ಸಮಿತಿ ರಚನೆ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಅಭಿಯಾನದ ಮಾಹಿತಿ ಪತ್ರ  ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬಾರಾವ್‌ರವರು ಬಿಡುಗಡೆಗೊಳಿಸಿದರು.
    ಭದ್ರಾವತಿ: ಶ್ರೀ ಭಗವದ್ಗೀತಾ ಅಭಿಯಾನ ಸಂಬಂಧ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಗುರುವಾರ ತಾಲೂಕು ಸಮಿತಿ ರಚನೆ ಪೂರ್ವಭಾವಿ ಸಭೆ ಜರುಗಿತು. 
    ಸಭೆಯಲ್ಲಿ ಅಭಿಯಾನದ ಮಾಹಿತಿ ಪತ್ರ  ಶ್ರೀ ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬಾರಾವ್‌ರವರು ಬಿಡುಗಡೆಗೊಳಿಸಿದರು. ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಅಶೋಕ ಜಿ.ಭಟ್ಟ ಅಭಿಯಾನದ ರೂಪುರೇಷೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು. 
     ಶ್ರೀ ಮಠದ ಪ್ರಮುಖರಾದ ನಾಗರಾಜ್, ಆನಂದ್, ಡಾ. ಬಾಲಕೃಷ್ಣ ಹೆಗಡೆ, ಮಂಜುನಾಥ ಶರ್ಮಾ, ಮ.ಸ.ನಂಜುಂಡಸ್ವಾಮಿ, ಡಾ.ಸುಧೀಂದ್ರ, ಲಕ್ಷದಮಣ ಜೋಶಿ, ಡಿ.ಎಂ ಹೆಗಡೆ, ಲಲಿತಾ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಎಂಪಿಎಂ ಕಾರ್ಖಾನೆ ಪುನರ್ ಆರಂಭ ಸೇರಿದಂತೆ ವಿವಿಧ ಸಮಸ್ಯೆಗಳ ಅಹವಾಲು ಸಲ್ಲಿಕೆ

ಶಿವಮೊಗ್ಗ ಜಿಲ್ಲಾ ಶಾಸಕರ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ 

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಖುದ್ದಾಗಿ ಕ್ಷೇತ್ರದ ಶಾಸಕರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದು, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಗುರುವಾರ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. 
    ಭದ್ರಾವತಿ : ಮುಖ್ಯಮಂತ್ರಿ ಸಿದ್ದರಾಮಯ್ಯರವರು ಖುದ್ದಾಗಿ ಕ್ಷೇತ್ರದ ಶಾಸಕರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದು, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಗುರುವಾರ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. 
    ಶಿವಮೊಗ್ಗ ಜಿಲ್ಲಾ ಶಾಸಕರ ಸಭೆಯಲ್ಲಿ ಬಹುಮುಖ್ಯವಾಗಿ ಕ್ಷೇತ್ರದ ಮೈಸೂರು ಕಾಗದ ಕಾರ್ಖಾನೆ ಪುನರ್ ಆರಂಭಿಸುವಂತೆ ಶಾಸಕರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ. ಕ್ಷೇತ್ರದಲ್ಲಿ ಕಾರ್ಮಿಕರು ಹೆಚ್ಚಾಗಿದ್ದು, ಎಂಪಿಎಂ ಮತ್ತು ವಿಐಎಸ್‌ಎಲ್ ಎರಡು ಕಾರ್ಖಾನೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡು ಸುಮಾರು ೧೦ ವರ್ಷಗಳು ಕಳೆಯುತ್ತಿವೆ. ಕ್ಷೇತ್ರದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಕಾರ್ಖಾನೆ ಪುನರ್ ಆರಂಭಿಸುವ ಮೂಲಕ ಉದ್ಯೋಗ ಕಲ್ಪಿಸಿಕೊಡುವಂತೆ ಕೋರಿದ್ದಾರೆ. 
    ಉಳಿದಂತೆ ಕ್ಷೇತ್ರದಲ್ಲಿನ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಶಾಸಕರು ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಹುತೇಕ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸಿದ್ದಾರೆಂದು ತಿಳಿದು ಬಂದಿದೆ. ಸಿದ್ದರಾಮಯ್ಯರವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು. 
    ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಖುದ್ದಾಗಿ ಕ್ಷೇತ್ರದ ಶಾಸಕರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದು, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಗುರುವಾರ ತಮ್ಮ ಅಹವಾಲುಗಳನ್ನು ಸಲ್ಲಿಸುವ ಮೂಲಕ ಸಿದ್ದರಾಮಯ್ಯನವರನ್ನು ಸನ್ಮಾನಿಸಿ ಗೌರವಿಸಿದರು.  

ಅಧಿಕೃತ ಪತ್ರ ಬರಹಗಾರರಿಗೆ ಮಾತ್ರ ನೋಂದಾಣಿಗೆ ಅವಕಾಶ ಕಲ್ಪಿಸಿಕೊಡಿ


ಅನಧಿಕೃತ ಏಜೆಂಟರು, ಬ್ರೋಕರ್‌ಗಳು, ಸೈಬರ್ ಸೆಂಟರ್ ನಡೆಸುವವರು ಉಪ ನೋಂದಾಣಾಧಿಕಾರಿಗಳ ಕಚೇರಿಗೆ ಹಾಜರಾಗಿ ಪತ್ರಗಳನ್ನು ನೋಂದಾಯಿಸುತ್ತಿದ್ದು, ಇದರಿಂದ ಅಧಿಕೃತ ಪತ್ರ ಬರಹಗಾರರ ವೃತ್ತಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಭದ್ರಾವತಿ ತಾಲೂಕು ಅಧಿಕೃತ ಪರವಾನಗಿ ಪಡೆದ ಪತ್ರ ಬರಹಗಾರರ ಸಂಘ ಉಪ ನೋಂದಾಣಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿತು.
    ಭದ್ರಾವತಿ: ಅನಧಿಕೃತ ಏಜೆಂಟರು, ಬ್ರೋಕರ್‌ಗಳು, ಸೈಬರ್ ಸೆಂಟರ್ ನಡೆಸುವವರು ಉಪ ನೋಂದಾಣಾಧಿಕಾರಿಗಳ ಕಚೇರಿಗೆ ಹಾಜರಾಗಿ ಪತ್ರಗಳನ್ನು ನೋಂದಾಯಿಸುತ್ತಿದ್ದು, ಇದರಿಂದ ಅಧಿಕೃತ ಪತ್ರ ಬರಹಗಾರರ ವೃತ್ತಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ತಾಲೂಕು ಅಧಿಕೃತ ಪರವಾನಗಿ ಪಡೆದ ಪತ್ರ ಬರಹಗಾರರ ಸಂಘ ಉಪ ನೋಂದಾಣಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿತು.
    ಇತ್ತೀಚೆಗೆ ಕಾವೇರಿ ೨.೦ ತಂತ್ರಾಂಶ ಜಾರಿಗೆ ಬಂದ ನಂತರ ಸಿಟಿಜನ್ ಲಾಗಿನ್ ಮುಖಾಂತರ ಅನಧಿಕೃತ ಏಜೆಂಟರು ದಸ್ತಾವೇಜು ತಯಾರಿಸುವ ಬಗ್ಗೆ ಯಾವುದೇ ತಿಳಿವಳಿಕೆ, ಮಾಹಿತಿ ಇಲ್ಲದೆ, ಪಕ್ಷಗಾರರ ದಾಖಲಾತಿಗಳನ್ನು ಪರಿಶೀಲಿಸದೆ ದಸ್ತಾವೇಜುಗಳನ್ನು ತಯಾರಿಸಿ ಕಾವೇರಿ ೨.೦ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ದಸ್ತಾವೇಜುಗಳನ್ನು ನೋಂದಾಯಿಸಿ ಕೊಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಈ ವೃತ್ತಿಯನ್ನೇ ನಂಬಿ ಪರವಾನಗಿ ಪಡೆದು ಜೀವನ ನಡೆಸುತ್ತಿರುವವರಿಗೆ ಅನ್ಯಾಯವಾಗುತ್ತಿದೆ ಎಂದು ದೂರಲಾಗಿದೆ. 
    ಈ ಕುರಿತು ಹಲವು ಬಾರಿ ಕಚೇರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಾರ್ವಜನಿಕರ ದಾಖಲೆಗಳನ್ನು ಪಡೆದು ನೋಂದಣಿಗೆ ಬರುವ ಅನಧಿಕೃತ ವ್ಯಕ್ತಿಗಳು ಕಚೇರಿಗೆ ಬರುವುದನ್ನು ತಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ತಕ್ಷಣ ಪತ್ರ ಬರಹಗಾರರ ಸಮಸ್ಯೆಗೆ ಸ್ಪಂದಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 
ಸಂಘದ ತಾಲೂಕು ಅಧ್ಯಕ್ಷ ಮೂರ್ತಿ, ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಎಂ. ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಸತ್ಯನಾರಾಯಣ, ಪ್ರಮುಖರಾದ ನಾಗೇಂದ್ರ, ಅಶ್ವಥ್, ಶ್ರೀಧರ್, ಚಂದ್ರಶೇಖರ್, ಎಂ.ಮರುಡಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಬುಧವಾರ, ಜುಲೈ 30, 2025

ಮಾದಿಗ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕೆ.ಬಿ ಶಿವುಕುಮಾರ್ ನೇಮಕ

ಕೆ.ಬಿ ಶಿವುಕುಮಾರ್‌
    ಭದ್ರಾವತಿ: ಹಳೇನಗರದ ಭೂತನಗುಡಿ ನಿವಾಸಿ ಕೆ.ಬಿ ಶಿವುಕುಮಾರ್‌ರವರನ್ನು ಕರ್ನಾಟಕ ರಾಜ್ಯ ಮಾದಿಗ ಸಮಾಜದ ರಾಜ್ಯ ಸಂಘಟನಾ ಸಹಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಿ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ಆದೇಶ ಹೊರಡಿಸಿದ್ದಾರೆ. 
    ಜಗದ್ಗುರು ಬಸವಣ್ಣ ಮತ್ತು ವಿಶ್ವಜ್ಞಾನಿ ಡಾ. ಬಿ.ಆರ್ ಅಂಬೇಡ್ಕರ್‌ರವರ ತತ್ವಾದರ್ಶಗಳಿಗೆ ಹೊಂದಿಕೊಂಡು ಸಂಘಟನೆಯ ರೀತಿ-ನೀತಿ ನಿಯಮಗಳನ್ನು ಪಾಲನೆ ಮಾಡುವುದರ ಮೂಲಕ ಸಮಾಜದ ಅಭಿವೃದ್ಧಿಗೆ ಮತ್ತು ಸಂಘಟನೆಯ ಬಲವರ್ಧನೆಗೆ ತೊಡಗಿಸಿಕೊಂಡು ತಮ್ಮ ಸ್ಥಾನಕ್ಕೆ ಧಕ್ಕೆ ಬಾರದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. 

ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ತಕ್ಷಣ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಿ

ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಗ್ರಹ 

ಭದ್ರಾವತಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು. 
    ಭದ್ರಾವತಿ: ನಗರದ ಹೃದಯ ಭಾಗದಲ್ಲಿ, ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೀಪ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ತಕ್ಷಣ ಪೂರ್ಣಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾರ್ಪಣೆಗೊಳಿಸಬೇಕೆಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಗ್ರಹಿಸಿದರು. 
    ಅವರು ಬುಧವಾರ ಹಳೆನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು ೭ ವರ್ಷಗಳ ಹಿಂದೆ ಆರಂಭಗೊಂಡ ಕಾಮಗಾರಿ ಇನ್ನೂ ಫೂರ್ಣಗೊಳಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರದ ವಿವಿಧ ಇಲಾಖೆಗಳಿಗೆ ಸಭೆ-ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಭವನದ ಅವಶ್ಯಕತೆ ಇದೆ. ಭವನ ಕಾಮಕಾರಿ ಪೂರ್ಣಗೊಳಿಸದೆ ನಿರ್ಲಕ್ಷತನವಹಿಸುತ್ತಿರುವುದು ಖಂಡನೀಯ ಎಂದರು. 
    ಪ್ರಪಂಚದ ಮಹಾನಾಯಕ, ೩೨ ಪದವಿಗಳನ್ನು ಪಡೆದ ಮೇಧಾವಿ ಡಾ. ಬಿ.ಆರ್ ಅಂಬೇಡ್ಕರ್‌ರವರನ್ನು ವಿಶ್ವಸಂಸ್ಥೆ ಸಹ ಗೌರವಿಸುತ್ತಿದೆ. ವಿಶ್ವಜ್ಞಾನಿ ಎಂಬ ಅಭಿಮಾನದೊಂದಿಗೆ ಪ್ರಪಂಚದ ಎಲ್ಲಾ ದೇಶಗಳು ಏ. ೧೪ರಂದು ಅಂಬೇಡ್ಕರ್‌ರವರನ್ನು ಸ್ಮರಿಸುತ್ತಿವೆ. ಇಂತಹ ಮಹಾನ್ ವ್ಯಕ್ತಿಗೆ ದಲಿತ ಚಳುವಳಿ ಹುಟ್ಟಿದ ನೆಲದಲ್ಲಿ ಪದೇ ಪದೇ ಅಪಮಾನಗೊಳಿಸಲಾಗುತ್ತಿದೆ. ಅಂಬೇಡ್ಕರ್‌ರವರಿಗೆ ಗೌರವ ನೀಡುವ ನಿಟ್ಟಿನಲ್ಲಿ ತಕ್ಷಣ ಕಾಮಗಾರಿ ಪೂರ್ಣಗೊಳಿಸಿ ಭವನ ಲೋಕಾರ್ಪಣೆಗೊಳಿಸಬೇಕೆಂದು ಒತ್ತಾಯಿಸಿದರು.  
    ೨೦೧೮ರಲ್ಲಿ ಪ್ರಾರಂಭವಾದ ಭವನದ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ೨ ಕೋ.ರು., ನಂತರ ೧.೫ ಕೋ.ರು., ನಗರಸಭೆಯಿಂದ ೫೦ ಲಕ್ಷ.ರು., ಶಾಸಕರ ನಿಧಿಯಿಂದ ೩೭ ಲಕ್ಷ ರು, ಸಂಸದರ ನಿಧಿ ೨೫  ಲಕ್ಷ ರು. ಮಂಜೂರಾಗಿದೆ. ಆದರೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್‌ರವರು ರಾಜ್ಯ ಸರ್ಕಾರದಿಂದ ಮಂಜೂರಾಗಿರುವ ೧.೫ ಕೋ.ರು. ಇದುವರೆಗೂ ಬಿಡುಗಡೆ ಮಾಡದೆ ಹಾಗೂ ನಿರ್ಮಿತಿ ಕೇಂದ್ರದ ಗುತ್ತಿಗೆದಾರ ನಾಗರಾಜ್‌ರವರು ಕಾಮಗಾರಿ ಪೂರ್ಣಗೊಳಿಸದೆ ನಿರ್ಲಕ್ಷ್ಯವಹಿಸಿರುವುದು ಭವನದ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಮುಖ್ಯ ಕಾರಣವಾಗಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಜನಪ್ರತಿನಿಧಿಗಳು ಉಂಟಾಗಿರುವ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು. 
    ಅಲ್ಲದೆ ಅಂಬೇಡ್ಕರ್ ಭವನಕ್ಕೆ ಭೋಜನಾಲಯ ನಿರ್ಮಾಣ ಮತ್ತು ವಾಹನಗಳ ನಿಲುಗಡೆ ಸ್ಥಳದ ಅಭಿವೃದ್ಧಿಗೆ ೨  ಕೋ. ರು. ಅವಶ್ಯಕತೆ ಇದ್ದು, ತಕ್ಷಣ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಶಾಸಕರು, ಸಂಸದರು ಹಾಗೂ ಜಿಲ್ಲಾ ಮಂತ್ರಿಗಳು ಪತ್ರ ಬರೆಯಬೇಕೆಂದು ಆಗ್ರಹಿಸಿದರು. 
    ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅಕ್ರಮ ಖಾನ್, ಸೋಮಣ್ಣ, ವೀರೇಶ್, ಆಶಾ, ಶಶಿಕಲಾ ಸೇರಿದಂತೆ ಇನ್ನಿತರರುಉಪಸ್ಥಿತರಿದ್ದರು.



ಭದ್ರಾವತಿ ನಗರದ ಹೃದಯ ಭಾಗದಲ್ಲಿ, ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೀಪ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ.

ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ವೈದ್ಯರು-ಸಿಬ್ಬಂದಿಗಳು ಸೌಜನ್ಯತೆಯಿಂದ ನಡೆದುಕೊಳ್ಳಿ

ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್


ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆಯಿತು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಭದ್ರಾವತಿ : ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ವೈದ್ಯರು ಮತ್ತು ಸಿಬ್ಬಂದಿಗಳು ಸೌಜನ್ಯತೆಯಿಂದ ನಡೆದುಕೊಳ್ಳಬೇಕು, ರೋಗಿಗಳಿಗೆ ವಿನಾಕಾರಣ ತೊಂದರೆ ಕೊಡಬಾರದು. ಯಾವುದೇ ರೋಗದಿಂದ ಬಳಲುತ್ತಿದ್ದರೂ ಅವರಿಗೆ ಮೊದಲು ಧೈರ್ಯ ತುಂಬುವ ಕೆಲಸ ಮಾಡುವ ಮೂಲಕ ಸೂಕ್ತ ಚಿಕಿತ್ಸೆ ನೀಡಬೇಕು. ಆ ಮೂಲಕ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಜನರು ಹೊಂದಿರುವ ಭಾವನೆಗಳಿಗೆ ಧಕ್ಕೆಬಾರದಂತೆ ಕಾರ್ಯ ನಿರ್ವಹಿಸಬೇಕೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಿವಿ ಮಾತು ಹೇಳಿದರು.
    ಅವರು ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. 
    ಸುಮಾರು ೩-೪ ತಿಂಗಳ ಹಿಂದೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ರವರು ನಗರಕ್ಕೆ ಆಗಮಿಸಿ ಭದ್ರಾ ಕಾಲೋನಿಯಲ್ಲಿರುವ ೮ ಎಕರೆ ಭೂಮಿಯಲ್ಲಿ ೧೫೦ ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ ಮಾಡಲು ಪರಿಶೀಲನೆ ಮಾಡಿ ಹೋಗಿದ್ದಾರೆ. ಆದರೆ ಇಲಾಖೆ ಅಧಿಕಾರಿಗಳು ಭೂಮಿಗೆ ಸಂಬಂಧಿಸಿದಂತೆ ಇನ್ನೂ ಖಾತೆ ಮಾಡಿಸಿಲ್ಲ. ಅಧಿಕಾರಿಗಳ ನಿರ್ಲಕ್ಷತನ ಹೆಚ್ಚಾಗಿದೆ. ಜನರಿಂದ ಸಾಕಷ್ಟು ದೂರುಗಳು ಬರುತ್ತಿವೆ. ನ್ಯೂನತೆಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 
    ನಗರ ಮತ್ತು ಗ್ರಾಮಾಂತರ ಪ್ರದೇಶದದಲ್ಲಿನ ಆಸ್ಪತ್ರೆಗಳು ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಊಟ, ಸ್ವಚ್ಚತೆ ಸರಿಯಾಗಿಲ್ಲ ಎಂಬ ದೂರುಗಳು ಬಂದಿವೆ. ಇನ್ನು ಮುಂದೆ ಪ್ರತಿ ೧೫ ದಿನಕ್ಕೊಮ್ಮೆ ಸಮಿತಿ ಸಭೆ ಹಾಗೂ ವೈದ್ಯರ ಮತ್ತು ಸಿಬ್ಬಂದಿಗಳ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸಲಹೆ ವ್ಯಕ್ತಪಡಿದರು. 
     ರಕ್ಷಾ ಸಮಿತಿ ಸದಸ್ಯ ಬಿ.ಎಸ್ ಅಭಿಲಾಶ್ ಮಾತನಾಡಿ, ಆಸ್ಪತ್ರೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಿಕೊಂಡು ಹೋಗುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಜನರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ. ಆಸ್ಪತ್ರೆ ವೈದ್ಯರು ಕರ್ತವ್ಯದ ಅವಧಿಯಲ್ಲಿ ಕ್ಲಿನಿಕ್‌ನಲ್ಲಿರುತ್ತಾರೆ. ಕೇಳಿದರೆ ಕಾಫಿಗೆ ಹೋಗಿದ್ದಾರೆ. ಮತ್ತಿತರೆ ಸಬೂಬು ಹೇಳುತ್ತಾರೆ. ತೀರಾ ಒತ್ತಾಯಿಸಿದರೆ ಫೋನ್ ಮಾಡಿ ಕರೆಸುತ್ತಾರೆ. ೧೦೮ ವಾಹನ ಮತ್ತು ಆಂಬುಲೆನ್ಸ್ ಚಾಲಕರು ಕರ್ತವ್ಯದ ವೇಳೆ ಮದ್ಯ ಸೇವನೆ ಮಾಡಲು ಕುಳಿತಿರುತ್ತಾರೆ. ವೃದ್ದರು ವಯಸ್ಸಿನ ಹಾಗು ಮತ್ತಿತರೆ ದೃಢೀಕರಣಕ್ಕೆ ೫೦೦ ರು. ಲಂಚ ಪಡೆಯುತ್ತಿದ್ದಾರೆಂದು ದೂರಿದರು. 
      ಹೆರಿಗೆಗೆ ಬರುವ ಮಹಿಳೆಯರು ಕಡಿಮೆಯಾಗಿದ್ದಾರೆ. ಆರಂಭದಿಂದ ೯ ತಿಂಗಳವರೆಗೆ ಚಿಕಿತ್ಸೆಪಡೆದು ಕೊನೆ ಹಂತದಲ್ಲಿ ಇಲ್ಲಿನ ವೈದ್ಯರಿಂದ ಖಾಸಗಿ ಆಸ್ಪತ್ರೆಗೆ ಹೋಗಿ ಹೆರಿಗೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಸಕಲ ವ್ಯವಸ್ಥೆ ಹೊಂದಿರುವ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತಿದೆ. ಹೊಸ ಮಹಿಳಾ ಆಸ್ಪತ್ರೆ ನಿರ್ಮಾಣಕ್ಕೂ ಕಾನೂನು ತೊಡಕುಂಟಾಗಿದೆ. ಔಷಧಿಗಳನ್ನು ಸರಿಯಾಗಿ ತರಿಸದೆ ಚೀಟಿ ಬರೆದುಕೊಡುವುದು ವಾಡಿಕೆಯಾಗಿದೆ. ಟೆಂಡರ್ ಕರೆಯದೆ ಇಷ್ಟಬಂದಂತೆ ಔಷಧ, ಮತ್ತಿತರೆ ವಸ್ತುಗಳನ್ನು ಖರೀದಿಸುವುದು ಹೆಚ್ಚಾಗಿದೆ. ವೈದ್ಯರು ಮತ್ತು ಸಿಬ್ಬಂದಿಗಳ ಬೇಡಿಕೆಯಂತೆ ಅನುದಾನ, ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದ್ದರೂ ಸಹ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತಿದೆ ವಿಷಾದ ವ್ಯಕ್ತಪಡಿಸಿದರು.  ಇವರ ಆರೋಪಕ್ಕೆ ನಗರಸಭೆ ಸದಸ್ಯ ಬಷೀರ್ ಆಹಮದ್, ರಕ್ಷಾ ಸಮಿತಿ ಸದಸ್ಯರಾದ ರೇಷ್ಮಾಬಾನು, ಮಹಾದೇವ, ವಾಹಿದ್ ಮುಂತಾದವರು ಧ್ವನಿಗೂಡಿಸಿದರು. 
    ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಎಂ..ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಮಾಜಿ ಉಪಾಧ್ಯಕ್ಷ ಚನ್ನಪ್ಪ, ರಕ್ಷಾ ಸಮಿತಿ ಸದಸ್ಯರಾದ ಶಿವರಾಜ್, ಚಂದ್ರಶೇಖರ್, ಮೋಹನ್, ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಸಮಜಾಯಿಸಿ ನೀಡಿ ನ್ಯೂನತೆಗಳನ್ನು ಸರಿಪಡಿಸುವುದಾಗಿ ಹೇಳಿದರು.  ಸಿಬ್ಬಂದಿಗಳು, ದಾದಿಯರು, ಪಿಡಬ್ಲ್ಯೂಡಿ ಎಇಇ ಶ್ರೀನಿವಾಸ್, ಸಹಾಯಕ ಎಂಜಿನಿಯರ್ ಗಿರಿಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.