ಭದ್ರಾವತಿ: ಜಲ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಕಂಬದಲ್ಲಿ ಅಳವಡಿಸಲಾಗಿದ್ದ ಸುಮಾರು ೪೫೦ ಮೀಟರ್ ಉದ್ದದ ವಿದ್ಯುತ್ ತಂತಿಯನ್ನು ಕಳವು ಮಾಡಿರುವ ಘಟನೆ ನಡೆದಿದೆ.
ನವದೆಹಲಿಯ ಕುಂದನ್ ಹೈಡೋಗ್ಯಾಂಗ್ ಟಾಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ತಾಲೂಕಿನ ಚಿಕ್ಕಗೊಪ್ಪೇನಹಳ್ಳಿ ಗ್ರಾಮದಲ್ಲಿ ೩ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಲುವಾಗಿ ಜಲ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಿದ್ದು, ಇಲ್ಲಿ ವಿದ್ಯುತ್ ಉತ್ಪಾದಿಸಿ ಜೆಪಿಎಸ್ ಕಾಲೋನಿಯಲ್ಲಿರುವ ಮೆಸ್ಕಾಂ ಉಪ ವಿತರಣಾ ಕೇಂದ್ರಕ್ಕೆ ವಿದ್ಯುತ್ ಪ್ರಸಾರ ಮಾಡುವ ಸಲುವಾಗಿ ೩೩ ಕಿಲೋ ವ್ಯಾಟ್ ೩ ವಿದ್ಯುತ್ ತಂತಿ(ಕಂಡೆಕ್ಟರ್)ಗಳನ್ನು ಉತ್ಪಾದನಾ ಕೇಂದ್ರ ಚಿಕ್ಕಗೊಪ್ಪೇನಹಳ್ಳಿಯಿಂದ ಕಂಬದ ಮೂಲಕ ಎಳೆಯುವ ಕೆಲಸ ಪ್ರಗತಿಯಲ್ಲಿರುತ್ತದೆ. ಚಿಕ್ಕಗೊಪ್ಪೇನಹಳ್ಳಿಯಿಂದ ಗೊಂದಿ, ಅರಳಿಕೊಪ್ಪ, ತಾರಿಕಟ್ಟೆ, ಹಳೇ ಹಿರಿಯೂರು, ತಿಮ್ಲಾಪುರ, ಬುಳ್ಳಾಪುರದ ಕಾರ್ಮಿಕರ ಸಮುದಾಯ ಭವನದವರೆಗೆ ಪ್ರಸ್ತುತ ಕಾಮಗಾರಿ ಮುಗಿದಿದ್ದು, ಜು. ೨೨ರಂದು ಸಂಜೆ ಕಂಪನಿಯ ಕೆಲಸಗಾರ ಉಮೇಶ್ ರವರು ಪರಿಶೀಲನೆಯಲ್ಲಿದ್ದಾಗ ಬುಳ್ಳಾಪುರದ ಕಾರ್ಮಿಕರ ಸಮುದಾಯ ಭವನದ ಕಾಂಪೌಂಡ್ ಪಕ್ಕದಲ್ಲಿ ಹಾದುಹೋಗಿರುವ ಕಂಬಗಳಲ್ಲಿ ಒಟ್ಟು ೫ ಕಂಬಗಳಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ಕಳುವಾಗಿರುವುದು ಕಂಡು ಬಂದಿದೆ.
೧೫೦ ಮೀಟರ್ ಉದ್ದದ ೩ ಎಳೆಯ ವಿದ್ಯುತ್ ತಂತಿಗಳು ಒಟ್ಟು ೪೫೦ ಮೀಟರ್ ವಿದ್ಯುತ್ ತಂತಿ ಸುಮಾರು ೯೦,೦೦೦ ರು. ಮೌಲ್ಯದ ತಂತಿ ಕಳವು ಮಾಡಲಾಗಿದೆ. ಈ ಸಂಬಂಧ ಕಂಪನಿಯ ಲೈಸೆನ್ ಅಧಿಕಾರಿ ಕುಂದನ್ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಜು.೩೦ರಂದು ಪ್ರಕರಣ ದಾಖಲಿಸಿದ್ದಾರೆ.