ಭದ್ರಾವತಿ ವಿಐಎಸ್‌ಎಲ್ ಅತಿಥಿಗೃಹದಲ್ಲಿ ಪತ್ರಕರ್ತರೊಂದಿಗೆ ಕ್ಯಾನ್ಸರ್ ಚಿಕಿತ್ಸೆ, ಪರಿಣಾಮ, ಅದರ ನಿಯಂತ್ರಣ. ಜೀವನ ನಿರ್ವಹಣೆಗಳ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ವೈದ್ಯ ಡಾ.ಬಿ.ಎಸ್ ಶ್ರೀನಾಥ್ ಭಾಗವಹಿಸಿ ಮಾತನಾಡಿದರು.
ಭದ್ರಾವತಿ: ಕುಟುಂಬ ವೈದ್ಯರುಗಳು ರೋಗಿಗಳ ರೋಗ ಪತ್ತೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಮೂಲಕ ಅವರ ಚಿಕಿತ್ಸೆಗೆ ಸರಿಯಾದ ಮಾರ್ಗದರ್ಶನ ಹಾಗು ವೆಚ್ಚ ಕಡಿತ ಮಾಡುವ ವಿಚಾರದಲ್ಲಿ ಸೂಕ್ತ ಮಾಹಿತಿ ನೀಡುತ್ತಾರೆಂದು ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ವೈದ್ಯ ಡಾ.ಬಿ.ಎಸ್ ಶ್ರೀನಾಥ್ ಹೇಳಿದರು.
ಅವರು ನಗರದ ವಿಐಎಸ್‌ಎಲ್ ಅತಿಥಿಗೃಹದಲ್ಲಿ ಪತ್ರಕರ್ತರೊಂದಿಗೆ ಕ್ಯಾನ್ಸರ್ ಚಿಕಿತ್ಸೆ, ಪರಿಣಾಮ, ಅದರ ನಿಯಂತ್ರಣ. ಜೀವನ ನಿರ್ವಹಣೆಗಳ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಾರಂಭಿಕ ಹಂತದಲ್ಲಿಯೇ ಶೇ.೬೦ರಷ್ಟು ರೋಗದ ಮೂಲವನ್ನು ಪತ್ತೆಹಚ್ಚಿ ದೇಹದಲ್ಲಿ ಉಂಟಾಗುವ ಬದಲಾವಣೆಗಳನ್ನು ಗಮನಿಸಿ ಸೂಕ್ತ ಚಿಕಿತ್ಸೆ ನೀಡಿ ರೋಗವನ್ನು ಗುಣಪಡಿಸಬಹುದು. ಆದರೆ ಚಿಕಿತ್ಸೆ ಪಡೆಯುವ ವಿಚಾರದಲ್ಲಿ ರೋಗಿಗಳು ತಾಳ್ಮೆವಹಿಸುವುದು ಬಹಳ ಮುಖ್ಯವಾಗಿದೆ. ರೋಗ ಗುಣಮುಖವಾಗಿಲ್ಲ ಎಂದು ಪದೇ ಪದೇ ವೈದ್ಯರುಗಳನ್ನು ಬದಲಾಯಿಸಿದರೆ ರೋಗದ ಸಮಗ್ರ ಮಾಹಿತಿ ಅರಿಯಲು ಸಾಧ್ಯವಾಗದ ಕಾರಣ ಚಿಕತ್ಸೆ ವಿಳಂಬ ಹಾಗು ದುಬಾರಿಯಾಗುತ್ತಾ ಹೋಗುತ್ತದೆ ಎಂದರು.
ಸಾಮಾನ್ಯ ವರ್ಗದ ಜನರು ತಮ್ಮ ಆರೋಗ್ಯದ ಬಗ್ಗೆ ತಾವೇ ಮೊದಲು ಕಾಳಜಿ ವಹಿಸಬೇಕು. ಆರೋಗ್ಯವಂತ ಜೀವನ ನಡೆಸಬೇಕು. ಆರೋಗ್ಯದ ಬಗೆಗಿನ ಸಾಮಾನ್ಯ ತಿಳುವಳಿಕೆ ಹೆಚ್ಚಿಸಿಕೊಳ್ಳಬೇಕು. ರೋಗ ಕಾಣಿಸಿಕೊಂಡ ನಂತರ ಚಿಕಿತ್ಸೆ ದುಬಾರಿ ಎಂದು ನರಳುವುದು ಸರಿಯಲ್ಲ. ಹಣವಂತರೂ ಸಹ ಹಣ ಇದ್ದರೂ ಸರಿಯಾದ ಚಿಕಿತ್ಸೆ ಪಡೆಯಯುವಲ್ಲಿ ಹಿಂದೇಟು ಹಾಕುತ್ತಾರೆ. ಒಟ್ಟಾರೆ ಎಲ್ಲರೂ ಆರೋಗ್ಯದ ಬಗ್ಗೆ ಜಾಗೃತರಾದಾಗ ಮಾತ್ರ ಎಲ್ಲಾ ರೀತಿಯ ರೋಗಗಳನ್ನು ನಿಯಂತ್ರಿಸಲು ಸಾಧ್ಯ ಎಂದರು.
ವ್ಯಕ್ತಿಯ ದೇಹದಲ್ಲಿನ ಜೀವಕೋಶಗಳು ಆರೋಗ್ಯಕರ ನಿಯಂತ್ರಣದಲ್ಲಿ ಬೆಳೆದು ವಿಭಜಿಸುತ್ತವೆ, ಸಾಯುತ್ತವೆ. ಈ ಪ್ರಕ್ರಿಯೆಯಲ್ಲಿ ಲೋಪವಾಗಿ ಅಸಹಜ ಕೋಶಗಳ ಅನಿಯಂತ್ರಿತ ಬೆಳವಣಿಗೆ ಉಂಟಾಗಿ ಅದರ ಹರಡುವಿಕೆ ಕಾರ್ಯ ನಡೆದಾಗ ಕೆಟ್ಟ ಕಣಗಳಿಂದ ಕ್ಯಾನ್ಸರ್ ಉಂಟಾಗುತ್ತದೆ. ಇದನ್ನು ಕೂಡಲೆ ಪತ್ತೆಹಚ್ಚಿ ಸರಿಯಾದ ಚಿಕಿತ್ಸೆ ಪಡೆಯದಿದ್ದಲ್ಲಿ ಅದು ದೇಹದ ಇತರ ಹತ್ತಿರದ ಅಂಗಾಂಶಗಳನ್ನು ಆಕ್ರಮಿಸಬಹುದು ಅಥವಾ ದೂರದ ಅಂಗಗಳಿಗೂ ಹರಡುವ ಮೂಲಕ ಕ್ಯಾನ್ಸರ್ ಉಂಟಾಗಿ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟಾಗುತ್ತದೆ ಎಂದರು.
ಬೆಂಗಳೂರಿನ ಶಂಕರಪುರಂನಲ್ಲಿ ಶೃಂಗೇರಿ ಶ್ರೀ ಶಂಕರ ಮಠದ ಸಹಕಾರದೊಂದಿಗೆ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿತವಾಗಿದೆ. ಇಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಆಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ಅತ್ಯತ್ತಮ ಗುಣಮಟ್ಟದ ಕೈಗೆಟಕುವ ದರದಲ್ಲಿ ವಿಶ್ವದರ್ಜೆಯ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಕ್ಯಾನ್ಸರ್ ಅರಿವು ಮತ್ತು ತಪಾಸಣೆ ಮೂಲಕ ೬.೫ ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗಿದೆ. ೨.೫ ಲಕ್ಷ ಉಚಿತ ಸ್ಕ್ರೀನಿಂಗ್ ಮತ್ತು ೧೪೬ ಸಂಪೂರ್ಣ ಉಚಿತ ಚಿಕಿತ್ಸೆ ನೀಡಿದೆ. ೮೩ ಬೆಂಬಲಿತ ಪ್ರಕರಣಗಳು ಸೇರಿದಂತೆ ೩೬.೩೮೭ ಶಸ್ತ್ರಚಿಕಿತ್ಸೆಗಳು, ೧೫೭ ಬಿಎಂಟಿನಡೆಸಲಾಗಿದೆ ಎಂದರು.
ಸಂಶೋಧನೆ ಜೊತೆಗೆ ಶ್ರೀ ಶಂಕರ ನ್ಯಾಷನಲ್ ಸೆಂಟರ್ ಫಾರ್ ಕ್ಯಾನ್ಸರ್ ಪ್ರಿವೆಂಕ್ಷನ್ ಅಂಡ್ ರಿಸರ್ಚ್ ಮೂಲಕ ಅನ್ವಯಿಕ ರೋಗ ನಿರ್ಣಯ, ಆರಂಭಿಕ ಪತ್ತೆ ಕಾರ್ಯ ಗ್ರಾಮೀಣ ಮಾದರಿಗಳಲ್ಲಿ ಬೆಂಚ್ ಟು ಬೆಡ್ ಸೈಡ್ ಅವಿಷ್ಕಾರ ನಿರಂತರವಾಗಿ ನಡೆಸುತ್ತಿದೆ. ಇದಕ್ಕೆ ಅಮೇರಿಕ ಮೇಯೋ ಕ್ಲಿನಿಕ್, ಲಂಡನ್ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗಳ ಜೊತೆಗಿನ ಸಹಕಾರ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಜಾಗತೀಕ ಹೆಜ್ಜೆ ಗುರುತನ್ನು ಮೂಡಿಸುವ ಮೂಲಕ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ ಎಂದರು.
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಭವಿಷ್ಯ ರೂಪಿಸಲಾಗುತ್ತಿದೆ. ಕೇವಲ ಔಷಧ ಚಿಕಿತ್ಸೆ ಮಾತ್ರ ನೀಡದೆ, ಅಪ್ತ ಸಮಾಲೋಚನೆ, ಧ್ಯಾನ, ಯೋಗ, ಪ್ರಾಣಾಯಾಮ ಇತ್ಯಾದಿಗಳನ್ನು ಹೇಳಿಕೋಡುವ ಮೂಲಕ ರೋಗಿಗೆ ಆತ್ಮಸ್ಥೈರ್ಯ ತುಂಬುವ ಮಾನವೀಯ ಕಾರ್ಯ ಮಾಡುತ್ತಿದೆ. ಆ ಮೂಲಕ ಕ್ಯಾನ್ಸರ್ ರೋಗಿಗೆ ತನ್ನ ಬದುಕಿನಲ್ಲಿ ಭವಿಷ್ಯದ ಬಗ್ಗೆ ಹೊಸ ಆಶಾಕಿರಣ ಮೂಡಿಸುತ್ತಿದೆ ಎಂದರು.
ಎಲ್ಲದಕ್ಕಿಂತ ಬಹುಮುಖ್ಯವಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹಾಗು ಇದರ ಇತ್ತೀಚಿನ ಅವಿಷ್ಕಾರಗಳ ಬಗ್ಗೆ ವೈದ್ಯರುಗಳಿಗೆ ಸಾಕಷ್ಟು ತಿಳುವಳಿಕೆ ಇರಬೇಕು. ಕ್ಯಾನ್ಸರ್ ತಂತ್ರಜ್ಞಾನದ ಬಗ್ಗೆ, ಅದರ ಪರಿಕರಗಳ ಬಗ್ಗೆ, ನಿರ್ವಹಣೆಯ ಬಗ್ಗೆ, ಆಸ್ಪತ್ರೆಯ ಪರಿಸರ, ಸ್ವಚ್ಚತೆ, ರೋಗ ಹರುಡುವ ಬಗ್ಗೆ ಮುಂಜಾಗ್ರತೆ ಎಷ್ಟು ಎಚ್ಚರವಹಿಸಿದರೂ ಸಾಲುತ್ತಿಲ್ಲ. ಐಸಿಯುನಂತಹ ಘಟಕಗಳಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುವ ಮೂಲಕ ಸೋಂಕು ಉಂಟಾಗಿ ರೋಗಿಗೆ ಖಾಯಿಲೆ ಉಲ್ಬಣ ಮಾಡುತ್ತದೆ. ಈ ಕಾರಣ ಚಿಕಿತ್ಸೆ ನೀಡಿದರೂ ರೋಗ ಸರಿಯಾಗಿ ನಿರ್ಮೂಲನೆಯಾಗುತ್ತಿಲ್ಲ. ಸೋಂಕುಗಳು ಉತ್ಪತ್ತಿಯಾಗಿ ಹರಡುತ್ತದೆ. ಬೇರೆ ಆಸ್ಪತ್ರೆಯಲ್ಲಿ ಈ ಪ್ರಮಾಣ ೮ ರಿಂದ ೧೬ರಷ್ಟು ಇದ್ದರೆ ಈ ಆಸ್ಪತ್ರೆಯಲ್ಲಿ ಶೇ.೧ರಷ್ಟು ಇದೆ. ಇದಕ್ಕೆ ಮುಖ್ಯ ಕಾರಣ ಸೋಂಕುಗಳು ಹರಡದಂತೆ ತೆಗೆದುಕೊಂಡ ಕ್ರಮಗಳು ಮುಖ್ಯ ಕಾರಣ. ಈ ಸ್ವಚ್ಚತಾ ಕಾರ್ಯಕ್ಕೆ ಹಣ ಹೆಚ್ಚು ಖರ್ಚಾಗುತ್ತದೆ. ಆದರೂ ರೋಗಿಯ ಹಿತದೃಷ್ಟಿಯಿಂದ ಇದು ಅನಿವಾರ್ಯ. ಇದರಿಂದ ಪರೋಕ್ಷವಾಗಿ ರೋಗಿಯ ಚಿಕಿತ್ಸೆಯ ವೆಚ್ಚದಲ್ಲಿ ಖರ್ಚಿನ ಹೊರೆ ಕಡಿಮೆಯಾಗುತ್ತದೆ ಎಂದರು.
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಹುಹಂತದ ಪರೀಕ್ಷೆಗಳನ್ನು ನಡೆಸಬೇಕು. ಕೇವಲ ಒಬ್ಬ ತಜ್ಞ ವೈದ್ಯರಿಂದ ಇದಕ್ಕೆ ಚಿಕಿತ್ಸೆ ನೀಡುವುದಿಲ್ಲ. ಅದರಲ್ಲಿ ಆಂಕೋಲೋಜಿಸ್ಟ್, ರೇಡಿಯಾಜಿಸ್ಟ್, ಪೆಥಾಲಜಿಸ್ಟ್, ಶಸ್ತ್ರ ಚಿಕಿತ್ಸಕರ ಟ್ಯೂಮರ್ ಬೋರ್ಡ್ ತಂಡಗಳ ವೈದ್ಯರುಗಳು ಸೇರಿ ರೋಗಿಯ ರೋಗದ ಬಗ್ಗೆ ಚರ್ಚೆ ನಡೆಸಿ ಅಂತಿಮವಾಗಿ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂದು ತೀರ್ಮನಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಚಿಕಿತ್ಸಾ ವಿಧಾನ ತಿಳಿಸಿದರು.
ತಜ್ಞ ವೈದ್ಯರುಗಳಾದ ಡಾ. ರೇಖಾ, ಡಾ. ವಿನಾಯಕ, ಡಾ. ಎಂ. ರವೀಂದ್ರನಾಥ ಕೋಠಿ, ಡಾ. ರಾಮಕೃಷ್ಣ, ಡಾ. ಸ್ವರ್ಣಲತಾ, ಡಾ. ಪ್ರೀತಿ ಹಾಗು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.