ಒಟ್ಟು ೮೭ ಶಾಲೆಗಳು, ೧೫ ಪರೀಕ್ಷಾ ಕೇಂದ್ರಗಳು
ಭದ್ರಾವತಿ, ಮೇ. ೧೯: ಕೊರೋನಾ ವೈರಸ್ ಹಿನ್ನಲೆಯಲ್ಲಿ ಕಳೆದ ೨ ತಿಂಗಳುಗಳಿಂದ ಅನಿಶ್ಚಿತತೆಯಿಂದ ಕೂಡಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ಕೊನೆಗೂ ನಿಗದಿಗೊಂಡಿದ್ದು, ತಾಲೂಕಿನ ಸುಮಾರು ೪೨೦೦ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸಲಿದ್ದಾರೆ.ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ನಿಧಾರದ ಪ್ರಮುಖ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಹೇಗಾದರೂ ಮಾಡಿನಡೆಸಲೇಬೇಕೆಂಬ ಅಂತಿಮ ನಿರ್ಧಾರದೊಂದಿಗೆ ರಾಜ್ಯ ಸರ್ಕಾರ ಹಲವು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡು ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದೆ. ಜೂ.೨೮ ರಿಂದ ಜು.೪ರ ವರೆಗೆ ಪರೀಕ್ಷೆಗಳು ನಡೆಯಲಿವೆ.
ಈಗಾಗಲೇ ೧ ರಿಂದ ೯ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಸಾಮೂಹಿಕವಾಗಿ ಉತ್ತೀರ್ಣಗೊಳಿಸಿ ಮುಂದಿನ ಶಿಕ್ಷಣಕ್ಕೆ ಅನುವು ಮಾಡಿಕೊಡಲಾಗಿದೆ. ಇದೀಗ ನೂತನ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಬೇಕಾಗಿತ್ತು. ಆದರೆ ಈ ಹಂತದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿರುವುದು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ವಿಳಂಬವಾಗಲಿದೆ ಎನ್ನಲಾಗಿದೆ. ಪ್ರಸ್ತುತ ಎದುರಾಗಿರುವ ಶೈಕ್ಷಣಿಕ ಬಿಗ್ಗಟ್ಟನ್ನು ಸರ್ಕಾರ ಯಾವ ರೀತಿ ಸರಿಪಡಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ತಾಲೂಕಿನಲ್ಲಿ ಒಟ್ಟು ೮೭ ಶಾಲೆಗಳ ಸುಮಾರು ೪೨೦೦ ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಿದ್ದು, ತಾಲೂಕಿನ ೧೫ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಜಾರಿಗೆ ಬಂದ ಪರಿಣಾಮ ಶ್ರೀಸಾಮಾನ್ಯರ ಬದುಕು ಅತಂತ್ರವಾಗಿದೆ. ಕೆಲವು ಕುಟುಂಬಗಳು ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಲ್ಲಿ ಸಿಲುಕಿಕೊಂಡಿವೆ. ಅಲ್ಲದೆ ಕೊರೋನಾ ವೈರಸ್‌ಗೆ ತುತ್ತಾದವರ ಚಿಕಿತ್ಸೆಗಾಗಿ ತಾಲೂಕಿನ ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಸತಿ ಶಾಲೆಗಳಲ್ಲಿ ವ್ಯಾಸಂಗ ನಡೆಸುತ್ತಿರುವ ಸುಮಾರು ೨೨೬ ವಿದ್ಯಾರ್ಥಿಗಳು ಮತ್ತು ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಸರ್ಕಾರ ಇಂತಹ ವಿದ್ಯಾರ್ಥಿಗಳ ನೆರವಿಗೂ ಮುಂದಾಗುವುದಾಗಿ ಭರವಸೆ ನೀಡಿದೆ. ವಿದ್ಯಾರ್ಥಿಗಳು ಎಲ್ಲಿದ್ದಾರೋ ಅಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಆದೇಶ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ತಲುಪಿಲ್ಲ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ಹಿನ್ನಲೆಯಲ್ಲಿ ಈ ಬಾರಿ ೨-೩ ಬಾರಿ ಶಿಕ್ಷಣ ತಜ್ಞರು ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಅಲ್ಲದೆ ಪರೀಕ್ಷೆಗಳು ವಿಳಂಬವಾದ ಹಿನ್ನಲೆಯಲ್ಲಿ ನೇರ ಪೋನ್ ಇನ್ ಕಾರ್ಯಕ್ರಮಗಳನ್ನು ಸಹ ನಡೆಸಲಾಗಿದೆ. ಬಹುತೇಕ ವಿದ್ಯಾರ್ಥಿಗಳ ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿದಿವೆ. ಈ ನಡುವೆ ಪರೀಕ್ಷೆಗೆ ಇನ್ನೂ ಸುಮಾರು ಒಂದು ತಿಂಗಳು ಕಾಲವಕಾಶವಿದ್ದು, ಉತ್ತಮ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ.
No comments:
Post a Comment