Friday, July 24, 2020

ಮದ್ಯದಂಗಡಿಯಿಂದ ನಿವಾಸಿಗಳಿಗೆ ಕಿರಿಕಿರಿ : ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ಭದ್ರಾವತಿ ನಗರಸಭೆ ಉಜ್ಜನಿಪುರ ವಾರ್ಡ್ ವ್ಯಾಪ್ತಿಗೆ ಒಳಪಡುವ ಹೊಸ ಆನೆಕೊಪ್ಪ ಗ್ರಾಮದಲ್ಲಿ ತೆರೆಯಲಾಗಿರುವ ಎಂಎಸ್‌ಐಎಲ್ ಮದ್ಯಂಗಡಿಯಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶುಕ್ರವಾರ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. 
ಭದ್ರಾವತಿ, ಜು. ೨೪: ನಗರಸಭೆ ಉಜ್ಜನಿಪುರ ವಾರ್ಡ್ ವ್ಯಾಪ್ತಿಗೆ ಒಳಪಡುವ ಹೊಸ ಆನೆಕೊಪ್ಪ ಗ್ರಾಮದಲ್ಲಿ ತೆರೆಯಲಾಗಿರುವ ಎಂಎಸ್‌ಐಎಲ್ ಮದ್ಯಂಗಡಿಯಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶುಕ್ರವಾರ ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. 
ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಡ ಕುಟುಂಬದವರು ವಾಸಿಸುತ್ತಿದ್ದು, ಮದ್ಯಂಗಡಿಯಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಅದರಲ್ಲೂ ಮಹಿಳೆಯರು ರಸ್ತೆಯಲ್ಲಿ ಸಂಚರಿಸಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಸಮೀಪದಲ್ಲಿಯೇ ದೇವಸ್ಥಾನವಿದ್ದು, ಮದ್ಯವ್ಯಸನಿಗಳು ಎಲ್ಲಿಬೇಕೆಂದರಲ್ಲಿ ಗುಂಪು ಗುಂಪಾಗಿ ಸೇರಿಕೊಂಡು ಮದ್ಯ ಸೇವನೆ ಮಾಡುತ್ತಿದ್ದಾರೆ. ಮದ್ಯ ಸೇವನೆ ನಂತರ ರಸ್ತೆಗಳಲ್ಲಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಕೂಗಾಡುವುದು, ಮನೆಗಳಿಗೆ ನುಗ್ಗುವುದು ಹಾಗೂ ಅಸಹ್ಯವಾಗಿ ವರ್ತಿಸುತ್ತಿದ್ದಾರೆ. ಮದ್ಯದ ಖಾಲಿ ಬಾಟಲಿ, ಪ್ಯಾಕೇಟ್, ಕುಡಿದ ಪ್ಲಾಸ್ಟಿಕ್ ಲೋಟಗಳನ್ನು ಎಲ್ಲಿಬೇಕೆಂದರಲ್ಲಿ ಎಸೆಯುತ್ತಿದ್ದು, ಇವುಗಳನ್ನು ಚಿಕ್ಕ ಮಕ್ಕಳು  ಆಟವಾಡಲು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಮದ್ಯ ಕುಡಿದ ಪ್ಲಾಸ್ಟಿಕ್ ಲೋಟವನ್ನು ನೀರು ಕುಡಿಯಲು ಬಳಕೆ ಮಾಡುತ್ತಿದ್ದಾರೆಂದು ನಿವಾಸಿಗಳು ಆರೋಪಿಸಿದರು. 
ಈಗಾಗಲೇ ಅತಿಯಾದ ಮದ್ಯಸೇವನೆಯಿಂದ ಜಗದೀಶ್ ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ. ತಕ್ಷಣ ಈ ಮದ್ಯದಂಗಡಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 
ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತ ಮನೋಹರ್, ಕಾಗದನಗರ ಪೊಲೀಸ್ ಠಾಣಾಧಿಕಾರಿ ಭಾರತಿ ನಿವಾಸಿಗಳ ಸಮಸ್ಯೆ ಆಲಿಸಿ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಗರಸಭಾ ಸದಸ್ಯ ವೆಂಕಟಯ್ಯ ಉಪಸ್ಥಿತರಿದ್ದರು. 
       ಜಿಲ್ಲಾಧಿಕಾರಿಗಳಿಗೆ ವರದಿ: 
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಬಕಾರಿ ನಿರೀಕ್ಷಕ ಧರ್ಮಪ್ಪ, ಮದ್ಯಂಗಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. 

No comments:

Post a Comment