Friday, October 2, 2020

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ೫೦೦ ರು. ದಂಡ

ಎಲ್ಲಿಬೇಕೆಂದರಲ್ಲಿ ಕಸ ಹಾಕುವಂತಿಲ್ಲ, ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ

ಭದ್ರಾವತಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ನಗರಸಭೆ ಸಿಬ್ಬಂದಿಗಳು ದಂಡ ವಿಧಿಸುತ್ತಿರುವುದು.
ಭದ್ರಾವತಿ, ಅ. ೨: ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಬರುವವರಿಗೆ ಶನಿವಾರದಿಂದ ೫೦೦ ರು. ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತ ಮನೋಹರ್ ತಿಳಿಸಿದ್ದಾರೆ.
        ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ೧೦೦ ರು. ದಂಡ ವಿಧಿಸಲಾಗುತ್ತಿದ್ದು, ಇದೀಗ ಹೊಸ ಸರ್ಕಾರಿ ಆದೇಶ ಬಂದಿದೆ. ಈ ಪ್ರಕಾರ ೫೦೦ ರು. ದಂಡ ವಿಧಿಸಲಾಗುವುದು. ಶುಕ್ರವಾರ ೧೦೦ ರು. ದಂಡ ವಿಧಿಸಲಾಗಿದ್ದು, ಒಟ್ಟು ೬,೭೦೦ ರು. ವಸೂಲಾತಿ ಮಾಡಲಾಗಿದೆ ಎಂದರು.
     ಉಳಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಹೋಟೆಲ್, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ. ಒಂದು ವೇಳೆ ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡು ಬಂದಲ್ಲಿ ನಗರಸಭೆ ಆಡಳಿತ ದಂಡ ವಿಧಿಸಲಿದೆ.
    ಇದೆ ರೀತಿ ಎಲ್ಲಿಬೇಕೆಂದರಲ್ಲಿ ಕಸ ಎಸೆಯುವುದನ್ನು ಸಹ ನಿಷೇಧಿಸಲಾಗಿದ್ದು, ಪ್ರತಿಯೊಬ್ಬರು ಕಸ ಎಸೆಯದೆ ಸಂಗ್ರಹಿಸಿಟ್ಟುಕೊಂಡು ನಗರಸಭೆ ವತಿಯಿಂದ ಕಸ ಸಂಗ್ರಹಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ನೀಡುವುದು. ಒಂದು ವೇಳೆ ಎಲ್ಲಿಬೇಕೆಂದರಲ್ಲಿ ಕಸ ಎಸೆಯುವುದು ಕಂಡು ಬಂದಲ್ಲಿ ದಂಡ ವಿಧಿಸಲಿದೆ.
     ನಗರಸಭೆ ಪರಿಸರ ಅಭಿಯಂತರ ರಕ್ಷಿತ್ ನೇತೃತ್ವದ ಹಿರಿಯ ಆರೋಗ್ಯ ನಿರೀಕ್ಷಕರಾದ ಆರ್.ಬಿ ಸತೀಶ್, ಆಶಾಲತಾ ಹಾಗು ಸೂಪರ್‌ವೈಸರ್ ಎನ್.ಗೋವಿಂದ ಸೇರಿದಂತೆ ಇನ್ನಿತರನ್ನೊಳಗೊಂಡ ತಂಡ ಈಗಾಗಲೇ ಈ ನಿಟ್ಟಿನಲ್ಲಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ.

No comments:

Post a Comment