Wednesday, October 14, 2020

ಅ.೧೫ರಿಂದ ಅಹೋರಾತ್ರಿ ಹೋರಾಟಕ್ಕೆ ಸಹಕರಿಸಲು ಜೆಡಿಯು ಮನವಿ

 

ಭದ್ರಾವತಿ: ತಾಲೂಕಿನ ಮದ್ಯದಂಗಡಿಗಳಲ್ಲಿ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಹಾಗು ಬಡ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಪೈನಾನ್ಸ್‌ಗಳ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದ್ದು, ಹೋರಾಟಕ್ಕೆ ತಾಲೂಕು ಆಡಳಿತ ಪೂರಕವಾಗಿ ಸ್ಪಂದಿಸಬೇಕೆಂದು ಜನಾತದಳ(ಸಂಯುಕ್ತ) ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಮತ್ತು ಸಂಘಟನಾ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್ ಮನವಿ ಮಾಡಿದ್ದಾರೆ.
      ತಾಲೂಕಿನ ಸಿಎಲ್ ೨ ಮದ್ಯದಂಗಡಿ ಮತ್ತು ಎಂಎಸ್‌ಐಎಲ್ ಮದ್ಯದಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಎಂಆರ್‌ಪಿ ದರ ಪಡೆಯದೆ ಹೆಚ್ಚಿನ ದರ ಪಡೆಯಲಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಅಲ್ಲದೆ ಉಜ್ಜನಿಪುರ ಆನೆಕೊಪ್ಪದಲ್ಲಿರುವ ಎಂಎಸ್‌ಐಎಲ್ ಮದ್ಯದಂಗಡಿಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಈ ಮದ್ಯದಂಗಡಿ ಸ್ಥಳಾಂತರಿಸುವಂತೆ ಒತ್ತಾಯಿಸಲಾಗಿದೆ. ಅಲ್ಲದೆ ನಿವಾಸಿಗಳು ಅರ್ನಿಷ್ಟಾವಧಿ ಧರಣಿ ಸತ್ಯಾಗ್ರಹ ಸಹ ನಡೆಸಿರುತ್ತಾರೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
        ಇದೆ ರೀತಿ ಮೈಕ್ರೋ ಫೈನಾನ್ಸ್‌ಗಳು ಸಾಲ ಪಡೆದಿರುವ ಬಡ ಮಹಿಳೆಯರಿಗೆ ತೊಂದರೆ ಕೊಡುತ್ತಿದ್ದು, ಕೊರೋನಾ ಸಂಕಷ್ಟದ ಸಮಯದಲ್ಲಿ ಒಂದೆಡೆ ಉದ್ಯೋಗವಿಲ್ಲದೆ, ಮತ್ತೊಂದೆಡೆ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿರುವ ಸಂದರ್ಭದಲ್ಲಿ ಸರ್ಕಾರದ ಆದೇಶವಿದ್ದರೂ ಸಹ ಬಲವಂತವಾಗಿ ಕಂತು ಪಾವತಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ಸಹ ಹಳೇನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.
        ಜನರ ಹಿತದೃಷ್ಟಿಯಿಂದ ಹೋರಾಟ ನಡೆಸುವುದು ಅನಿವಾರ್ಯವಾಗಿದ್ದು, ತಾಲೂಕು ಕಛೇರಿ ಮುಂಭಾಗ ಅ.೧೫ರಿಂದ ಹಮ್ಮಿಕೊಳ್ಳಲಾಗಿರುವ ಅಹೋರಾತ್ರಿ ಹೋರಾಟಕ್ಕೆ ತಹಸೀಲ್ದಾರ್‌ರವರು ಪೂರಕವಾಗಿ ಸ್ಪಂದಿಸಬೇಕು. ಇದೆ ರೀತಿ ಪೊಲೀಸ್ ನಗರ ವೃತ್ತ ನಿರೀಕ್ಷಕರು ಸಹ ಹೋರಾಟಕ್ಕೆ ಹೆಚ್ಚಿನ ಸಹಕಾರ ನೀಡಬೇಕೆಂದು ಕೋರಲಾಗಿದೆ.

No comments:

Post a Comment