Saturday, October 24, 2020

ಎಂಪಿಎಂ ಕಾರ್ಖಾನೆ ವಸತಿ ಗೃಹಗಳ ತೆರವಿಗೆ ನೋಟಿಸ್ : ಕಾರ್ಮಿಕ ವಲಯದಲ್ಲಿ ಆತಂಕ

ಭದ್ರಾವತಿ ಎಂಪಿಎಂ ಕಾರ್ಖಾನೆಯ ವಸತಿಗೃಹಗಳಲ್ಲಿ ವಾಸಿಸುತ್ತಿರುವ ಸರ್ಕಾರಿ ಹಾಗು ಅರೆ ಸರ್ಕಾರಿ ನೌಕರರನ್ನು ತಕ್ಷಣ ಮನೆ ಖಾಲಿ ಮಾಡುವಂತೆ ನಗರಾಡಳಿ ಇಲಾಖೆ ನೋಟಿಸ್ ನೀಡಿರುವುದು.
ಭದ್ರಾವತಿ, ಅ. ೨೪: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಸಾವಿರಾರು ವಸತಿ ಗೃಹಗಳು ಈಗಾಗಲೇ ಪಾಳು ಬಿದ್ದಿದ್ದು, ಈ ನಡುವೆ ಕೆಲವು ಮನೆಗಳಲ್ಲಿ ವಾಸಿಸುತ್ತಿರುವ ಸರ್ಕಾರಿ ಹಾಗು ಅರೆ ಸರ್ಕಾರಿ ನೌಕರರನ್ನು ಸಹ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ.
    ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಸಂಬಂಧ ಕಾರ್ಖಾನೆಯ ನಗರಾಡಳಿತ ಇಲಾಖೆ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ಎಲ್ಲರನ್ನು ಏಕಾಏಕಿ ಖಾಲಿ ಮಾಡಿಸಲು ಮುಂದಾಗಿದ್ದು, ಇದರಿಂದಾಗಿ ಕಾರ್ಮಿಕ ವಲಯದಲ್ಲಿ ಮತ್ತಷ್ಟು ಆತಂಕ ಎದುರಾಗಿದೆ. ಈ ನಡುವೆ ನಗರಾಡಳಿತ ವ್ಯಾಪ್ತಿಯಲ್ಲಿರುವ ಅಂಗಡಿಮುಂಗಟ್ಟುಗಳನ್ನು ಸಹ ತೆರವುಗೊಳಿಸಲು ಸೂಚಿಸಲಾಗಿದೆ. ಕೋವಿಡ್-೧೯ ಪರಿಣಾಮ ವ್ಯಾಪಾರ ವಹಿವಾಟು ಕುಸಿದಿದ್ದು, ಈಗಾಗಲೇ ಶ್ರೀಸಾಮಾನ್ಯರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನೋಟಿಸ್ ನೀಡಿರುವುದು ಎಷ್ಟು ಸರಿ ಎಂದು ಕಾರ್ಮಿಕ ಮುಖಂಡರು ಪ್ರಶ್ನಿಸಿದ್ದಾರೆ.
    ಕಳೆದ ಸುಮಾರು ೫ ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿದ್ದು, ಇದುವರೆಗೂ ಆರಂಭಗೊಂಡಿಲ್ಲ. ಪುನಃ ಆರಂಭಗೊಳ್ಳುವ ನಿರೀಕ್ಷೆ ಇಲ್ಲ. ಈಗಾಗಲೇ ೨೦೧೭ ವಿಶೇಷ ಸ್ವಯಂ ನಿವೃತ್ತಿ ಯೋಜನೆ ಜಾರಿಗೊಳಿಸುವ ಮೂಲಕ ಶೇ.೯೦ ರಷ್ಟು ಕಾರ್ಮಿಕರಿಗೆ ಸ್ವಯಂ ನಿವೃತ್ತಿ ನೀಡಲಾಗಿದೆ. ವಸತಿ ಗೃಹಗಳಲ್ಲಿ ವಾಸವಿದ್ದ ಕಾರ್ಮಿಕರನ್ನು ಖಾಲಿ ಮಾಡಿಸಲಾಗಿದೆ. ಇದರಿಂದಾಗಿ ೩-೪ ವರ್ಷಗಳಿಂದ ಸಾವಿರಾರು ಮನೆಗಳು ಪಾಳುಬಿದ್ದಿದ್ದು, ಸಂಪೂರ್ಣವಾಗಿ ಹಾಳಾಗಿವೆ. ಅಲ್ಲದೆ ನಗರಾಡಳಿತ ವ್ಯಾಪ್ತಿಯಲ್ಲಿನ ಆರ್ಥಿಕ ಚಟುವಟಿಕೆಗಳು ಸಹ ಸ್ಥಗಿತಗೊಂಡಿವೆ. ಇದೀಗ ಕೆಲವು ಮನೆಗಳಲ್ಲಿ ಉಳಿದುಕೊಂಡಿರುವ ಸರ್ಕಾರಿ ಹಾಗು ಅರೆ ಸರ್ಕಾರಿ ಸೇವೆಯಲ್ಲಿರುವ ಉದ್ಯೋಗಿಗಳನ್ನು ಸಹ ಖಾಲಿ ಮಾಡಲು ನೋಟಿಸ್ ನೀಡಲಾಗಿದೆ. ಇದರಿಂದಾಗಿ ಸಂಪೂರ್ಣವಾಗಿ ವಸತಿ ಗೃಹಗಳು ಹಾಳಾಗುವ ಭೀತಿ ಎದುರಾಗಿದೆ.  ಈ ಬಗ್ಗೆ ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

No comments:

Post a Comment