Sunday, December 20, 2020

ಇಂದು ೪೦೦ ವರ್ಷಗಳಿಗೊಮ್ಮೆ ಕಂಡು ಬರುವ ಆಕಾಶ ಕಾಯಗಳ ವಿಸ್ಮಯ

೪೦೦ ವರ್ಷಗಳಿಗೊಮ್ಮೆ ಕಂಡು ಬರುವ ಆಕಾಶ ಕಾಯಗಳ ವಿಸ್ಮಯ ಟೆಲಿಸ್ಕೋಪ್ ಮೂಲಕ ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸಿಕೊಟ್ಟಿರುವ ಖಗೋಳ ವೀಕ್ಷಕ ಹರೋನಹಳ್ಳಿ ಸ್ವಾಮಿ.
   ಭದ್ರಾವತಿ, ಡಿ. ೨೦:  ೪೦೦ ವರ್ಷಗಳಿಗೊಮ್ಮೆ ಆಕಾಶ ಕಾಯಗಳಲ್ಲಿ ಕಂಡು ಬರುವ ವಿಸ್ಮಯಗಳಲ್ಲಿ ಒಂದಾಗಿರುವ ಗುರು ಮತ್ತು ಶನಿ ಗ್ರಹಗಳ ಸನಿಹ ಸಮಾಗಮ ಡಿ.೨೧ರಂದು ಕಂಡು ಬರಲಿದ್ದು, ಈ ಶತಮಾನದ ಅಪರೂಪದ ವಿಶೇಷಗಳಲ್ಲಿ ಒಂದಾಗಿರುವ ಈ ವಿಸ್ಮಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಜೊತೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡುವಲ್ಲಿ ನಗರದ ಹವ್ಯಾಸಿ ಖಗೋಳ ವೀಕ್ಷಕ, ಶಿಕ್ಷಕ ಹರೋನಹಳ್ಳಿ ಸ್ವಾಮಿ ಮುಂದಾಗಿದ್ದಾರೆ.
    ಗುರು ಮತ್ತು ಶನಿ ಈ ಎರಡು ದೈತ್ಯ ಗ್ರಹಗಳು ಅತಿ ಸಮೀಪದಲ್ಲಿರುವಂತೆ ಭೂಮಿಯಿಂದ ನೋಡುವ ವೀಕ್ಷಕರಿಗೆ ಕಂಡು ಬರುತ್ತದೆ. ಈ ವಿಸ್ಮಯ ೪೦೦ ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ವಿಸ್ಮಯವನ್ನು ಬರಿಗಣ್ಣಿನಿಂದಲೂ, ಬೈನಾಕ್ಯುಲರ್ ಮತ್ತು ಟೆಲಿಸ್ಕೋಪ್‌ಗಳ ಮೂಲಕವೂ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.
    ಭೂಮಿ, ಗುರು ಮತ್ತು ಶನಿ ಗ್ರಹಗಳು ಒಂದೇ ನೇರದಲ್ಲಿ ಕಂಡು ಬರುತ್ತಿರುವುದೇ ಈ ವಿಸ್ಮಯಕ್ಕೆ ಕಾರಣವಾಗಿದ್ದು, ಚಲನೆ, ಅವುಗಳ ದೀರ್ಘವೃತ್ತಾಕಾರದ ಪಥ, ಆ ಕಕ್ಷೆಗಳಿಗೆ ಗ್ರಹಗಳ ಓರೆ ಇವೆಲ್ಲ ಅಂಶಗಳೂ ಸಹ ಕಾರಣವಾಗಿವೆ ಎನ್ನುತ್ತಾರೆ ಹರೋನಹಳ್ಳಿ ಸ್ವಾಮಿ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: ೯೮೮೦೪೯೮೩೦೦ ಅಥವಾ ೭೮೯೨೧೫೪೬೯೫ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

No comments:

Post a Comment