ನಿಗಮ ಮಂಡಳಿಗಳು ಸೂಚಿಸುವ ಸ್ಥಳದಲ್ಲಿಯೇ ಕರ್ತವ್ಯ ನಿರ್ವಹಿಸುವ ಷರತ್ತು
ಭದ್ರಾವತಿ ಮೈಸೂರು ಕಾರ್ಖಾನೆ
ಭದ್ರಾವತಿ, ಫೆ. ೬: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿ ಹೊಂದದೆ ಉಳಿದುಕೊಂಡಿರುವ(ಮಸ್ಟರ್ ರೋಲ್‌ನಲ್ಲಿರುವ) ಉದ್ಯೋಗಿಗಳನ್ನು ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿಯೋಜನೆಗೊಳಿಸಲು ಸರ್ಕಾರ ಆದೇಶಿಸಿದೆ.
ಮಾರ್ಚ್ ೨೦೧೬ರಿಂದ ಎಂಪಿಎಂ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಂಡಿದ್ದು, ಆ ನಂತರ ಕಾರ್ಖಾನೆಯಲ್ಲಿ ಮಾನವ ಸಂಪನ್ಮೂಲ ಶೂನ್ಯಗೊಳಿಸುವ ಹಿನ್ನಲೆಯಲ್ಲಿ ಸರ್ಕಾರ ಡಿಸೆಂಬರ್ ೨೦೧೭ರಲ್ಲಿ ಕಾಯಂ ಹಾಗು ಗುತ್ತಿಗೆ ಉದ್ಯೋಗಿಗಳಿಗೆ ಪ್ರತ್ಯೇಕವಾಗಿ ವಿಶೇಷ ಸ್ವಯಂ ನಿವೃತ್ತಿ ಯೋಜನೆಗೆ ಆದೇಶಿಸಿತು. ಈ ಯೋಜನೆಯಡಿ ಒಟ್ಟು ೭೭೩ ಕಾಯಂ ಉದ್ಯೋಗಿಗಳು ಸ್ವಯಂ ನಿವೃತ್ತಿ ಪಡೆದಿದ್ದರು. ಉಳಿದಂತೆ ೯೨ ಉದ್ಯೋಗಿಗಳು ಸ್ವಯಂ ನಿವೃತ್ತಿ ಪಡೆಯದೆ ಉಳಿದುಕೊಂಡಿದ್ದರು. ಈ ಉದ್ಯೋಗಿಗಳನ್ನು ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ನಿಯೋಜನೆ ಮೇರೆಗೆ ಉದ್ಯೋಗ ಕಲ್ಪಿಸಿಕೊಡುವಂತೆ ಒತ್ತಾಯಿಸಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಜ.೨೭ರಂದು ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಈ ಉದ್ಯೋಗಿಗಳಿಗೆ ನಿಗಮ ಮಂಡಳಿಗಳಲ್ಲಿ ನಿಯೋಜನೆ ಮೇರೆಗೆ ಉದ್ಯೋಗ ಕಲ್ಪಿಸಿಕೊಡಲು ತೀರ್ಮಾನ ಕೈಗೊಳ್ಳಲಾಗಿದೆ.
ಈ ಕುರಿತು ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿಗಳು ಉದ್ಯೋಗಿಗಳಿಗೆ ಸುತ್ತೋಲೆ ಹೊರಡಿಸಿದ್ದು, ನಿಗಮ ಮಂಡಳಿಗಳಲ್ಲಿ ನಿಯೋಜನೆಗೆ ಮೇರೆಗೆ ಕರ್ತವ್ಯ ನಿರ್ವಹಿಸಲು ಇಚ್ಛಿಸುವ ಉದ್ಯೋಗಿಗಳು ಕಡ್ಡಾಯವಾಗಿ ಆಯಾ ನಿಗಮ ಮಂಡಳಿಗಳು ಸೂಚಿಸುವ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಸಂಬಂಧ ಲಿಖಿತವಾಗಿ ಒಪ್ಪಿಗೆ ಸೂಚಿಸುವಂತೆ ಸೂಚಿಸಿದ್ದಾರೆ.
ಭದ್ರಾವತಿ ಎಂಪಿಎಂ ಕಾರ್ಖಾನೆಯಲ್ಲಿ ಉಳಿದುಕೊಂಡಿರುವ ಕಾರ್ಮಿಕರನ್ನು ನಿಗಮ ಮಂಡಳಿಗಳಲ್ಲಿ ನಿಯೋಜನೆಗೊಳಿಸುವ ಸಂಬಂಧ ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿಗಳು ಹೊರಡಿಸಿರುವ ಸುತ್ತೋಲೆ.
ಎಂಪಿಎಂ ಕಾರ್ಖಾನೆ ನಷ್ಟ ೧೧೯೪.೧೭ ಕೋ. ರು. :
ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಂಡು ಸುಮಾರು ೫ ವರ್ಷಗಳು ಕಳೆದಿವೆ. ಇದೀಗ ಕಾರ್ಖಾನೆಯ ನಷ್ಟ ೧೧೯೪.೧೭ ಕೋ. ರು. ತಲುಪಿದೆ. ಕಾರ್ಖಾನೆಯ ಸಂಪೂರ್ಣ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಮಾರ್ಚ್ ೨೦೧೯ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಡುವೆ ಈ ವಿಚಾರಕ್ಕೆ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಉಳಿದುಕೊಂಡಿವೆ. ಈ ನಡುವೆ ಸರ್ಕಾರ ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸಲು ಮುಂದಾಗಿದೆ. ಈಗಾಗಲೇ ಕಾರ್ಖಾನೆ ಕಾರ್ಯಚಟುವಟಿಕೆಗಳ ನಿರ್ವಹಣೆಗಾಗಿ ೨ ಬಾರಿ ಟೆಂಡರ್ ಸಹ ಕರೆಯಲಾಗಿದೆ. ಈ ಪ್ರಕ್ರಿಯೆ ಸಹ ಪ್ರಗತಿಯಲ್ಲಿದೆ. ಇದೀಗ ಕಾರ್ಖಾನೆಯಲ್ಲಿನ ಎಲ್ಲಾ ಉದ್ಯೋಗಿಗಳನ್ನು ಬಿಡುಗಡೆಗೊಳಿಸುವ ಮೂಲಕ ನಷ್ಟದಿಂದ ಹೊರಬರುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಹಾಕಿರುವಂತೆ ಕಂಡು ಬರುತ್ತಿದೆ.
No comments:
Post a Comment