ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಮಾಹಿತಿ
ಭದ್ರಾವತಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಮಾತನಾಡಿದರು.
ಭದ್ರಾವತಿ, ಜೂ. ೩೦: ತಾಲೂಕಿನಲ್ಲಿ ಜು.೧ರಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಲಿದ್ದು, ಮಕ್ಕಳು ಶಾಲೆಗಳಿಗೆ ಹಾಜರಾಗದೆ ಮನೆಗಳಲ್ಲಿಯೇ ಕಲಿಕೆಗೆ ಅಗತ್ಯವಿರುವ ವ್ಯವಸ್ಥೆಗಳನ್ನು ರೂಪಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ತಿಳಿಸಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್-೧೯ರ ಹಿನ್ನಲೆಯಲ್ಲಿ ಶಾಲೆಗಳಲ್ಲಿ ಭೌತಿಕವಾಗಿ ತರಗತಿಗಳನ್ನು ಆರಂಭಿಸುತ್ತಿಲ್ಲ. ಪೋಷಕರು ದಾಖಲಾತಿ ಪ್ರಕ್ರಿಯೆಗೆ ಮಾತ್ರ ಮಕ್ಕಳನ್ನು ಶಾಲೆಗಳಿಗೆ ಕರೆತರಬೇಕಾಗಿದೆ. ಉಳಿದಂತೆ ಮಕ್ಕಳ ಕಲಿಕೆಗೆ ಸಂಬಂಧಿಸಿದಂತೆ ೨ ಹಂತದ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ಮಕ್ಕಳು ಮನೆಗಳಲ್ಲಿಯೇ ಇದ್ದು ಕಲಿಕೆ ಆರಂಭಿಸಬೇಕಾಗಿದೆ. ಈಗಾಗಲೇ ಕಳೆದ ೧೫ ದಿನಗಳಿಂದ ತಾಲೂಕಿನಾದ್ಯಂತ ಟಿ.ವಿ, ಮೊಬೈಲ್ ಸೌಲಭ್ಯಗಳನ್ನು ಹೊಂದಿರುವ ಹಾಗು ಯಾವುದೇ ಸೌಲಭ್ಯಗಳನ್ನು ಹೊಂದಿಲ್ಲದ ಮಕ್ಕಳನ್ನು ಗುರುತಿಸಲಾಗಿದೆ. ಈ ಮಕ್ಕಳಿಗೆ ೨ ರೀತಿಯ ಯೋಜನೆ ಮೂಲಕ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಯೋಜನೆ-೧ರಲ್ಲಿ ಯಾವುದೇ ಸೌಲಭ್ಯ ಹೊಂದಿಲ್ಲದ ಮಕ್ಕಳಿಗೆ ಕಲಿಕೆಗೆ ಅಗತ್ಯವಿರುವ ಅಭ್ಯಾಸ ಚಟುವಟಿಕೆಗಳ ನಕಲು ಪ್ರತಿಗಳನ್ನು ಆಯಾ ಶಾಲೆಗಳ ಶಿಕ್ಷಕರು ಮಕ್ಕಳ ಮನೆಗಳಿಗೆ ತಲುಪಿಸಲಿದ್ದಾರೆ. ಯೋಜನೆ ೨ರಲ್ಲಿ ಟಿ.ವಿ, ಮೊಬೈಲ್ ಹೊಂದಿರುವ ಮಕ್ಕಳಿಗೆ ಆನ್‌ಲೈನ್ ಮೂಲಕ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ದೂರದರ್ಶನ ಚಂದನ ವಾಹಿನಿಲ್ಲಿ ೧ ರಿಂದ ೧೦ನೇ ತರಗತಿ ವರೆಗಿನ ಮಕ್ಕಳಿಗೆ ಪ್ರತಿದಿನ ಸಂವೇದ ಕಾರ್ಯಕ್ರಮದಡಿ ಪಾಠಗಳು ಪ್ರಸಾರವಾಗಲಿದ್ದು, ಮಕ್ಕಳು ಮನೆಗಳಲ್ಲಿಯೇ ಇದ್ದು ಕಲಿಯಬಹುದಾಗಿದೆ ಎಂದರು.
ಮಕ್ಕಳ ದಾಖಲಾತಿಗೆ ಮನವಿ :
ತಾಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಹಾಗು ಪ್ರೌಡಶಾಲೆಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ದಾಖಲಾತಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಈ ಬಾರಿ ಕೇವಲ ಶೇ.೪೦ರಷ್ಟು ದಾಖಲಾತಿ ನಡೆದಿದೆ. ನಿಗದಿತ ಅವಧಿಯಲ್ಲಿ ಮಕ್ಕಳನ್ನು ಶಾಲೆಗಳಿಗೆ ಕರೆತಂದು ದಾಖಲಾತಿ ಮಾಡುವಂತೆ ಟಿ.ಎನ್ ಸೋಮಶೇಖರಯ್ಯ ಪೋಷಕರಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಶಿವಪ್ರಸಾದ್, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವೈ. ಗಣೇಶ್, ಶಿಕ್ಷಣ ಸಂಯೋಜಕರಾದ ರವಿಕುಮಾರ್, ತಿಪ್ಪಮ್ಮ, ಸಿ.ಆರ್.ಪಿ ಚನ್ನಪ್ಪ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಪಂಚಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment