ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ
ಭದ್ರಾವತಿ, ಜು. ೨೬: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ೪ ಬಾರಿ ಮುಖ್ಯಮಂತ್ರಿಯಾದರೂ ಸಹ ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಮಾತ್ರ ಅಭಿವೃದ್ಧಿ ಕಾಣಲಿಲ್ಲ. ಕೊನೆಗೂ ಕಾರ್ಮಿಕರ ಬೇಡಿಕೆ ಈಡೇರಲಿಲ್ಲ.
ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗು ಸರ್ ಮಿರ್ಜಾ ಇಸ್ಮಾಯಿಲ್‌ರವರ ಪರಿಶ್ರಮದ ಫಲವಾಗಿ ೧೯೩೬ರಲ್ಲಿ ಆರಂಭಗೊಂಡ ಕಾರ್ಖಾನೆ ೮ ದಶಕಗಳನ್ನು ಪೂರೈಸಿದೆ. ಕಳೆದ ೬ ವರ್ಷಗಳಿಂದ ಕಾರ್ಖಾನೆ ಯಂತ್ರಗಳು ಸ್ಥಗಿತಗೊಂಡಿದ್ದು, ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಕಾರ್ಖಾನೆಯನ್ನು ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ಕಾರ್ಖಾನೆಯನ್ನು ಪುನಃ ಆರಂಭಿಸುವಂತೆ ಒತ್ತಾಯಿಸಿ ಹಲವು ರೀತಿಯ ಹೋರಾಟಗಳು ನಡೆದಿವೆ. ಆದರೆ ಹೋರಾಟಗಳಿಗೆ ಇದುವರೆಗೂ ಯಾವುದೇ ಪ್ರತಿಫಲ ಲಭಿಸಿಲ್ಲ.
ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಸಾವಿರಾರು ಕೋ. ರು. ವೆಚ್ಚದ ಹಲವಾರು ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೆ ರೀತಿ ಸರ್ಕಾರಿ ಸ್ವಾಮ್ಯದಲ್ಲಿ ಅಥವಾ ಖಾಸಗಿ ಸಹಭಾಗಿತ್ವದ ಮೂಲಕ ಎಂಪಿಎಂ ಕಾರ್ಖಾನೆಯನ್ನೂ ಸಹ ಹಂತ ಹಂತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಂದಾಗಿದ್ದರು. ಆದರೆ ಅವರ ಪ್ರಯತ್ನಕ್ಕೆ ಇದೀಗ ಹಿನ್ನಡೆ ಎದುರಾಗಿದೆ.
ಒಂದು ಕಾಲದಲ್ಲಿ ಸುಮಾರು ೫,೦೦೦ಕ್ಕೂ ಅಧಿಕ ಕಾಯಂ ಕಾರ್ಮಿಕರು, ೪,೦೦೦ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರನ್ನು ಹೊಂದಿದ್ದ ಕಾರ್ಖಾನೆಯಲ್ಲಿ ಇದೀಗ ಮಾನವ ಸಂಪನ್ಮೂಲ ಶೂನ್ಯಕ್ಕೆ ಬಂದು ತಲುಪಿದೆ. ಕಾರ್ಖಾನೆ ಯಂತ್ರಗಳು ತುಕ್ಕು ಹಿಡಿದಿವೆ. ಸಾವಿರಾರು ವಸತಿ ಗೃಹಗಳು ಪಾಳು ಬಿದ್ದಿವೆ. ನೆಡುತೋಪುಗಳು ಲೂಟಿಯಾಗಿವೆ. ಕಾರ್ಮಿಕ ಕುಟುಂಬಗಳು ಅತಂತ್ರವಾಗಿವೆ. ಕಾರ್ಖಾನೆಯನ್ನು ನಂಬಿಕೊಂಡಿದ್ದ ಕೃಷಿಕರು ಕೃಷಿ ಚಟುವಟಿಕೆಗಳಿಂದ ವಿಮುಖರಾಗಿದ್ದಾರೆ. ನಗರದ ಆರ್ಥಿಕ ಬೆಳವಣಿಗೆ ಕುಸಿತಗೊಂಡಿದೆ. ಇಂತಹ ಸಂದರ್ಭದಲ್ಲಿ ಪುನಃ ಕಾರ್ಖಾನೆ ಆರಂಭಗೊಳ್ಳುವ ನಿರೀಕ್ಷೆಯಲ್ಲಿದ್ದ ಕ್ಷೇತ್ರದ ಜನತೆಗೆ ಯಡಿಯೂರಪ್ಪನವರ ರಾಜೀನಾಮೆ ದಿಗ್ಭ್ರಮೆಯನ್ನುಂಟು ಮಾಡಿದೆ ಎಂದರೆ ತಪ್ಪಾಗಲಾರದು.
No comments:
Post a Comment