ವೈದ್ಯರಾಗಿ ಉಕ್ಕಿನ ನಗರದಲ್ಲಿ ಸುಮಾರು ೫ ದಶಕಗಳಿಗೂ ಹೆಚ್ಚು ಕಾಲ ಸೇವೆ
ಡಾ. ಯು. ಕರುಣಾಕರಶೆಟ್ಟಿ
ಭದ್ರಾವತಿ, ಜು. ೮: ನಗರದ ಹಿರಿಯ ವೈದ್ಯ, ತಾಲೂಕು ತುಳು ಸಂಘ ಹಾಗು ಬಂಟರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಯು. ಕರುಣಾಕರಶೆಟ್ಟಿ(೮೩) ಬುಧವಾರ ರಾತ್ರಿ ನಿಧನ ಹೊಂದಿದರು.
ಪತ್ನಿ ವಾಸಂತಿ ಹಾಗು ೩ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ನೆರವೇರಿತು.
ಮೂಲತಃ ತುಳು ನಾಡಿನವರಾದರು ಸಹ ಭದ್ರಾವತಿಯಲ್ಲಿಯೇ ವೈದ್ಯ ವೃತ್ತಿಯನ್ನು ಆರಂಭಿಸಿದ್ದು, ನ್ಯೂಟೌನ್ ಪೊಲೀಸ್ ಠಾಣೆ ಸಮೀಪದ ಶ್ರೀರಾಮ ಕ್ಲಿನಿಕ್‌ನಲ್ಲಿ ಸುಮಾರು ೫ ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸುವ ಮೂಲಕ ಎಲ್ಲರ ಮನೆ ಮಾತಾಗಿದ್ದರು.
ವೈದ್ಯ ವೃತ್ತಿ ಜೊತೆಗೆ ತಾಲೂಕು ಬಂಟರ ಸಂಘ ಹಾಗು ತುಳು ಸಂಘಗಳ ಸ್ಥಾಪನೆಗೆ ಕಾರಣಕರ್ತರಾಗಿದ್ದರು. ಲಯನ್ಸ್, ರೋಟರಿ ಹಾಗು ಜನ್ನಾಪುರ ಮನೆ ಮಾಲೀಕರ ಸಂಘ ಸೇರಿದಂತೆ ವಿವಿದ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ವೈದ್ಯಕೀಯ ಸೇವೆಯನ್ನು ಗುರುತಿಸಿ ತಾಲೂಕು ಆಡಳಿತ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಗೌರವಿಸಿ, ಸನ್ಮಾನಿಸಿವೆ.
ಇವರ ನಿಧನಕ್ಕೆ ತಾಲೂಕು ಬಂಟರ ಸಂಘದ ಅಧ್ಯಕ್ಷ ಬಿ. ದಿವಾಕರ ಶೆಟ್ಟಿ ಹಾಗು ಪದಾಧಿಕಾರಿಗಳು, ತುಳು ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಹರೀಶ ದೇಲಂತಬೆಟ್ಟು ಹಾಗು ಪದಾಧಿಕಾರಿಗಳು, ಜನ್ನಾಪುರ ಮನೆ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ ಸತೀಶ್ ಹಾಗು ಪದಾಧಿಕಾರಿಗಳು, ಲಯನ್ಸ್ ಹಾಗು ರೋಟರಿ ಕ್ಲಬ್ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.
No comments:
Post a Comment