Tuesday, August 24, 2021

ನ್ಯಾ. ಎ.ಜೆ ಸದಾಶಿವ ಆಯೋಗ ವರದಿ ಜಾರಿ ಹೇಳಿಕೆಗೆ ಖಂಡನೆ

ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ವಿರುದ್ಧ ಬಂಜಾರ ಸಮುದಾಯ ಆಕ್ರೋಶ


ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸುವ ಸಂಬಂಧ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಹಾಗು ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಒತ್ತಾಯಿಸಿ ಭದ್ರಾವತಿಯಲ್ಲಿ ತಾಲ್ಲೂಕು ಬಂಜಾರ ( ಲಂಬಾಣಿ) ಯುವಕರ ಸಂಘ ಹಕ್ಕು ಹೋರಾಟ ಸಮಿತಿ ವತಿಯಿಂದ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸುವ ಸಂಬಂಧ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ನೀಡಿರುವ ಹೇಳಿಕೆಯನ್ನು ತಾಲ್ಲೂಕು ಬಂಜಾರ ( ಲಂಬಾಣಿ) ಯುವಕರ ಸಂಘ ಹಕ್ಕು ಹೋರಾಟ ಸಮಿತಿ ಖಂಡಿಸಿದೆ.
    ಅವರು ಮಂಗಳವಾರ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.  ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಕುರಿತು ಪರಿಶಿಷ್ಟ ಜಾತಿಯಲ್ಲಿರುವ ೧೦೧ ಜಾತಿಗಳಲ್ಲೂ ಗೊಂದಲವಿದೆ. ಶೋಷಿತ ವರ್ಗಗಳ ಜನರ ಹಿತಾಸಕ್ತಿ ಕಾಪಾಡ ಬೇಕಾಗಿರುವ ಕೇಂದ್ರ ಸಚಿವರು ಪದೆ ಪದೇ ಕೇವಲ ಒಂದು ಸಮುದಾಯವನ್ನು ಪ್ರತಿನಿಧಿಸಿರುವಂತೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  
    ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದಾಗಿ ಹೇಳಿಕೆ ನೀಡುವ ಪರಿಣಾಮ ಪರಿಶಿಷ್ಟ ಜಾತಿಯಲ್ಲಿರುವ ೧೦೧ ಜಾತಿಗಳ ಪೈಕಿ ಒಂದು ಜಾತಿ ಹೊರತು ಉಳಿದ ೧೦೦ ಜಾತಿಗಳಲ್ಲಿ ಆತಂಕ ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ ಪದೆ ಪದೇ ಹೇಳಿಕೆ ನೀಡುತ್ತಿರುವ ಸಚಿವ ನಾರಾಯಣಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡಬೇಕೆಂದರು ಆಗ್ರಹಿಸಿದರು.
    ತಕ್ಷಣ ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಅದರ ಸಾಧಕಭಾದಕಗಳನ್ನು ಸಮಗ್ರವಾಗಿ ಚರ್ಚಿಸಿ ಅಭಿಪ್ರಾಯ ಮಂಡಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಸಂಘದ ಯುವಘಟಕದ ಅಧ್ಯಕ್ಷ ಕೃಷ್ಣನಾಯ್ಕ ನೇತೃತ್ವವಹಿಸಿದ್ದರು. ಮುಖಂಡರಾದ ಮಂಜನಾಯ್ಕ,  ಹನುಮನಾಯ್ಕ, ಪ್ರವೀಣ್‌ಕುಮಾರ್, ನಾಗಾನಾಯ್ಕ, ಹೇಮಂತ್, ಭಂಜನಿನಾಯ್ಕ, ಶಂಕ್ರನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


No comments:

Post a Comment