Tuesday, August 17, 2021

ವೈದ್ಯರು, ಸಿಬ್ಬಂದಿಗಳ ಕರ್ತವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ : ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಹಾಗು ದಿನಸಿ ಸಾಮಗ್ರಿ ವಿತರಣೆ ಸಿಬ್ಬಂದಿಗಳಿಗೆ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಆ. ೧೭: ಕೋವಿಡ್-೧೯ ಸಂಕಷ್ಟದ ಸಮಯದಲ್ಲೂ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗು ಸಿಬ್ಬಂದಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ವೈದ್ಯರು ಹಾಗು ಸಿಬ್ಬಂದಿಗಳ ಕರ್ತವ್ಯಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು.
     ಅವರು ಮಂಗಳವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಹಾಗು ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುವ ಜೊತೆಗೆ ಆರೈಕೆಯ ವಾತ್ಸಲ್ಯದೊಂದಿಗೆ ರೋಗಿಗಳ ಜೊತೆ ತಾಳ್ಮೆ, ಸಹನೆಯಿಂದ ವರ್ತಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಿಮ್ಮ ಕರ್ತವ್ಯವನ್ನು ಸಮಾಜದ ಎಲ್ಲರೂ ಅಭಿನಂದಿಸಬೇಕಾಗಿದೆ ಎಂದರು.
    ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯವಾಗಿದೆ. ಆರೋಗ್ಯವಿಲ್ಲದೆ ಏನನ್ನು ಸಹ ಸಾಧಿಸಲು ಸಾಧ್ಯವಿಲ್ಲ.  ಇದೀಗ ಕೋವಿಡ್ ೨ನೇ ಅಲೆ ಮುಗಿವಷ್ಟರಲ್ಲಿ ೩ನೇ ಅಲೆ ಕಾಣಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಾಗಿದೆ. ಇದಕ್ಕೆ ಪೂರಕವಾಗಿ ಆರೋಗ್ಯ ಇಲಾಖೆ ಸಹ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ನಮ್ಮ ಪ್ರಯತ್ನಕ್ಕೆ ಫಲ ಸಿಗುವ ವಿಶ್ವಾಸವಿದೆ ಎಂದರು.
    ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸುಂದರ್‌ಬಾಬು ಮಾತನಾಡಿ, ಕೊರೋನಾ ಸಂಕಷ್ಟದ ಸಮಯದಲ್ಲಿ ಶಾಸಕರು ಕ್ಷೇತ್ರದಲ್ಲಿ ಎಲ್ಲಾ ವರ್ಗದ ಶ್ರಮ ಜೀವಿಗಳನ್ನು ಗುರುತಿಸಿ ಅವರ ನೆರವಿಗೆ ಧಾವಿಸುತ್ತಿದ್ದಾರೆ. ಅಲ್ಲದೆ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿಕೊಡುವಲ್ಲಿ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ ಎಂದರು.
    ಆಸ್ಪತ್ರೆಯ ವೈದ್ಯರು ಹಾಗು ಅಧಿಕಾರಿಗಳಿಗೆ ಪುಸ್ತಕ ನೀಡಿ ಹಾಗು ಸಿಬ್ಬಂದಿಗಳಿಗೆ ದಿನಸಿ ಸಾಮಗ್ರಿ ವಿತರಿಸಿ ಅಭಿನಂದಿಸಲಾಯಿತು. ವೈದ್ಯರ ದಿನಾಚರಣೆ ಅಂಗವಾಗಿ  ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ನೀಡಲಾದ ಕೋವಿಡ್ ವಾರಿಯರ್ಸ್ ಅವಾರ್ಡ್ ಆಸ್ಪತ್ರೆಯ ವೈದ್ಯೆ ಡಾ. ಎ. ಕವಿತಾ ಅವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ವಿತರಿಸಿ ಅಭಿನಂದಿಸಿದರು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಆಸ್ಪತ್ರೆ ಮುಖ್ಯ ವ್ಯದ್ಯಾಧಿಕಾರಿ ಡಾ. ಶಂಕರಪ್ಪ, ಸರ್ಜನ್ ಶಿವಪ್ರಸಾದ್, ಕಾಂಗ್ರೆಸ್ ಮುಖಂಡ ಮೋಹನ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ನಾಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ವೈದ್ಯರ ದಿನಾಚರಣೆ ಅಂಗವಾಗಿ  ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ನೀಡಲಾದ ಕೋವಿಡ್ ವಾರಿಯರ್ಸ್ ಅವಾರ್ಡ್ ಭದ್ರಾವತಿ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ. ಎ. ಕವಿತಾ ಅವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ವಿತರಿಸಿ ಅಭಿನಂದಿಸಿದರು.

No comments:

Post a Comment