೭೫ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್
ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭೫ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭದ್ರಾವತಿ, ಆ. ೧೫ : ಪ್ರಕೃತಿಯ ವಿರುದ್ಧ ನಾವುಗಳು ಸಾಗುತ್ತಿರುವ ಪರಿಣಾಮ ಇಂದು ಸಂಕಷ್ಟ ಎದುರಿಸುವಂತಾಗಿದ್ದು, ಇದಕ್ಕೆ ಉದಾಹರಣೆ ಕೊರೋನಾ ಮಹಾಮಾರಿ ಎಂಬುದನ್ನು ನಾವು ಮರೆಯಬಾರದು. ಭವಿಷ್ಯದಲ್ಲಿ ನಾವೆಲ್ಲರೂ ಬದುಕಬೇಕಾದರೆ ಪ್ರಕೃತಿಯೊಂದಿಗೆ ಜೊತೆ ಜೊತೆಯಲ್ಲಿ ಸಾಗಬೇಕೆಂದು ತಹಸೀಲ್ದಾರ್ ಆರ್ . ಪ್ರದೀಪ್ ಹೇಳಿದರು.
ಅವರು ಭಾನುವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭೫ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ಪಾಲ್ಗೊಂಡಿದ್ದರು. ಅವರೆಲ್ಲರ ಹೋರಾಟದ ಪರಿಶ್ರಮದ ಫಲವಾಗಿ ನಾವೆಲ್ಲರೂ ಇಂದು ನೆಮ್ಮದಿಯಿಂದ ಬದುಕುವಂತಾಗಿದೆ. ಇಂತಹ ಮಹನೀಯರನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಹಲವಾರು ಸಮಸ್ಯೆಗಳು ಉಲ್ಬಣಗೊಂಡಿವೆ. ಮನುಷ್ಯರ ದುರಾಸೆಯ ಫಲವಾಗಿ ಪ್ರಕೃತಿ ನಾಶಗೊಳ್ಳುತ್ತಿದೆ. ಪ್ರಕೃತಿಗೆ ವಿರುದ್ಧವಾಗಿ ನಾವುಗಳು ಸಾಗುತ್ತಿದ್ದೇವೆ. ಇದರಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಮಹಾಮಾರಿ ಕೊರೋನಾ ವಿರುದ್ಧ ನಾವೆಲ್ಲರೂ ಹೋರಾಟ ನಡೆಸಬೇಕಾಗಿದೆ. ಈ ನಡುವೆ ತಾಲೂಕಿನಲ್ಲಿ ಈ ಬಾರಿ ಸಹ ಉತ್ತಮವಾಗಿ ಮಳೆಯಾಗುವ ಮೂಲಕ ನಮ್ಮೆಲ್ಲರ ಜೀವನದಿ ಭದ್ರೆ ಪೂರ್ಣಗೊಂಡಿದ್ದು, ನೆಮ್ಮದಿಯಿಂದ ಬದುಕುವಂತಾಗಿದೆ ಎಂದರು.
ಇದಕ್ಕೂ ಮೊದಲು ಧ್ವಜಾರೋಹಣ ನೆರವೇರಿಸಿ ವಂದನೆ ಸ್ವೀಕರಿಸಿದರು. ಶಾಸಕ ಬಿ ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ನಗರಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೊರೋನಾ ಸಂದರ್ಭದಲ್ಲಿ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿರುವ ತರುಣ ಭಾರತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ. ಎಂ.ಎಚ್ ವಿದ್ಯಾಶಂಕರ್, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಸೇರಿದಂತೆ ಇನ್ನಿತರ ರನ್ನು ಸನ್ಮಾನಿಸಿ ಗೌರವಿಸಲಾಯಿತು.
No comments:
Post a Comment