Friday, October 1, 2021

ನಗರಸಭೆ ವತಿಯಿಂದ ನಾಡಹಬ್ಬ ದಸರಾ ೯ ದಿನ ಸರಳ ಆಚರಣೆ : ಬಿ.ಕೆ ಸಂಗಮೇಶ್ವರ್

ಮೆರವಣಿಗೆಯಲ್ಲಿ ಎಲ್ಲಾ ದೇವಾನು ದೇವತೆಗಳಿಗೂ ಆಹ್ವಾನ


ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಾಡಹಬ್ಬ ದಸರಾ ಪೂರ್ವಭಾವಿ ಸಭೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆಯತು
    ಭದ್ರಾವತಿ: ಕೋವಿಡ್-೧೯ರ ಹಿನ್ನಲೆಯಲ್ಲಿ ಈ ಬಾರಿ ಸಹ ನಾಡಹಬ್ಬ ದಸರಾ ಸರಳವಾಗಿ ೯ ದಿನಗಳ ಕಾಲ ಆಚರಣೆ ಮಾಡುವ ಜೊತೆಗೆ ಎಲ್ಲಾ ದೇವಾನುದೇವತೆಗಳ ಮೆರವಣಿಗೆ ನಡೆಸಲಾಗುವುದು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
    ಅವರು ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ದಸರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ನೂತನ ಸದಸ್ಯರು ಹಾಗು ವಿವಿಧ ಸಂಘ-ಸಂಸ್ಥೆಗಳ ಮುಖಂಡರು ದಸರಾ ಅದ್ದೂರಿಯಾಗಿ ಆಚರಿಸಲು ಸಲಹೆ ನೀಡಿರುವುದು ಸಂತೋಷದ ವಿಚಾರವಾಗಿದೆ. ಆದರೆ ಸರ್ಕಾರದ ಮಾರ್ಗಸೂಚಿಯನ್ವಯ ಹಾಗು ಆರ್ಥಿಕ ಸಮಸ್ಯೆಯಿಂದಾಗಿ ಅದ್ದೂರಿ ಆಚರಣೆ ನಡೆಸುವುದು ಅಸಾಧ್ಯವಾಗಿದೆ. ದಸರಾ ಆಚರಣೆ ಮೆರವಣಿಗೆಯಲ್ಲಿ ಎಲ್ಲಾ ದೇವಸ್ಥಾನಗಳ ದೇವಾನು ದೇವತೆಗಳನ್ನು ಆಹ್ವಾನಿಸುವುದರಿಂದ ಎಲ್ಲರಿಗೂ ಒಳ್ಳೆಯದಾಗಲಿದೆ. ಅಲ್ಲದೆ ಜನರು ದೇವಾನು ದೇವತೆಗಳ ದರ್ಶನ ಪಡೆಯಲು ಅನುಕೂಲವಾಗುತ್ತದೆ. ಈ ಹಿನ್ನಲೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ದೇವಸ್ಥಾನಗಳ ಸೇವಾ ಸಮಿತಿಗಳಿಗೆ ಸಾಧ್ಯವಾದಷ್ಟು ಹೆಚ್ಚಿನ ಗೌರವಧನ ನೀಡಲಾಗುವುದು ಎಂದರು.
    ಉಳಿದಂತೆ ಪ್ರತಿವರ್ಷದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಸಂಬಂಧ ಸಮಿತಿಗಳನ್ನು ರಚಿಸಲಾಗುವುದು. ಎಲ್ಲರೂ ಸೇರಿ ನಾಡಹಬ್ಬ ದಸರಾ ಯಶಸ್ವಿ ಆಚರಣೆಗೆ ಮುಂದಾಗುವಂತೆ ಕರೆ ನೀಡಿದರು.
ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ಸಹ ಸರ್ಕಾರದ ಮಾರ್ಗಸೂಚಿಯನ್ವಯ ನಾಡಹಬ್ಬ ದಸರಾ ಸರಳ ಆಚರಣೆ ಮಾಡಲಾಗುತ್ತಿದೆ. ದಸರಾ ಯಶಸ್ವಿಗೆ ಸಲಹೆ-ಸೂಚನೆಗಳನ್ನು ನೀಡಿ ಸಹಕರಿಸುವಂತೆ ಮನವಿ ಮಾಡಿದರು.
    ಪೌರಾಯುಕ್ತ ಕೆ. ಪರಮೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀರಂಗರಾಜಪುರೆ, ಪರಿಸರ ಅಭಿಯಂತರ ಪ್ರಭಾಕರ್ ಉಪಸ್ಥಿತರಿದ್ದರು.
    ನಗರಸಭೆ ನೂತನ ಸದಸ್ಯರಾದ ರೇಖಾ ಪ್ರಕಾಶ್, ಗೀತಾ ರಾಜ್‌ಕುಮಾರ್, ಜಾರ್ಜ್, ಅನುಪಮ ಚನ್ನೇಶ್, ಶಶಿಕಲಾ ನಾರಾಯಣಪ್ಪ, ಬಿ.ಎಂ ಮಂಜುನಾಥ್, ಬಷೀರ್ ಅಹಮದ್, ಚನ್ನಪ್ಪ, ಮಣಿ ಎಎನ್‌ಎಸ್, ಸುದೀಪ್‌ಕುಮಾರ್, ಅನುಸುಧಾ ಮೋಹನ್, ಬಿ.ಟಿ ನಾಗರಾಜ್, ಬಸವರಾಜ ಬಿ ಆನೇಕೊಪ್ಪ, ಜಯಶೀಲ ಸುರೇಶ್, ವಿಜಯ, ಬಿ.ಕೆ ಮೋಹನ್, ಪ್ರೇಮಾ ಬದರಿನಾರಾಯಣ, ಕೋಟೇಶ್ವರರಾವ್, ಉದಯ್‌ಕುಮಾರ್, ಸರ್ವಮಂಗಳ ಭೈರಪ್ಪ, ರೂಪಾವತಿ ಗುಣಶೇಖರ್, ಕಾಂತರಾಜ್, ನಾಗರತ್ನ ಅನಿಲ್‌ಕುಮಾರ್, ಸೈಯದ್ ರಿಯಾಜ್, ಪಲ್ಲವಿ ದಿಲೀಪ್, ಸವಿತಾ ಉಮೇಶ್, ಆರ್. ಮೋಹನ್‌ಕುಮಾರ್, ಲತಾ ಚಂದ್ರಶೇಖರ್ ಹಾಗು ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.



No comments:

Post a Comment