ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ೬೬ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ನ. ೧: ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ನೆಲ, ಜಲ, ಭಾಷೆಯ ಮೇಲಿನ ಅಭಿಮಾನ ಹೊಂದುವವರೆಗೂ ಭಾಷೆಯ ಬೆಳವಣಿಗೆ ಅಸಾಧ್ಯ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ೬೬ನೇ ಕನ್ನಡ ರಾಜ್ಯೋತ್ಸವದಲ್ಲಿ ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ಭಾಷೆ ನಮ್ಮ ಮಾತೃ ಭಾಷೆಯಾಗಿದ್ದು, ಮೊದಲು ಈ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಂಗ್ಲ ಭಾಷೆಯ ಮೇಲಿನ ವ್ಯಾಮೋಹದಿಂದಾಗಿ ಕನ್ನಡ ಭಾಷೆಯನ್ನು ಸಮೃದ್ಧವಾಗಿ ಕಟ್ಟಿ ಬೆಳೆಸುವಲ್ಲಿ ಅನೇಕ ಮಹನೀಯರು ನಡೆಸಿರುವ ಹೋರಾಟ ವ್ಯರ್ಥವಾಗದಂತೆ ನಾವುಗಳು ಎಚ್ಚರ ವಹಿಸಬೇಕಾಗಿದೆ. ನಾವು ಯಾವುದೇ ಭಾಷೆಯನ್ನು ವಿರೋಧಿಸಬಾರದು. ಎಲ್ಲಾ ಭಾಷೆಯನ್ನು ಕಲಿಯಬೇಕು. ಆದರೆ ಮೊದಲು ಈ ನಾಡಿನ ಭಾಷೆಯನ್ನು ನಾವುಗಳು ಕಲಿತುಕೊಳ್ಳುವ ಜೊತೆಗೆ ನಮ್ಮ ಮಕ್ಕಳಿಗೂ ಕಲಿಸಬೇಕು. ಆಗ ಮಾತ್ರ ಭವಿಷ್ಯದಲ್ಲಿ ಕನ್ನಡ ಭಾಷೆ ಮತ್ತಷ್ಟು ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದರು.
ಕನಕ ಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ನಾಡು ಉದಯಿಸಲು ಕಾರಣಕರ್ತರಾದ ಎಲ್ಲಾ ಮಹನೀಯರನ್ನು ಸ್ಮರಿಸುವ ಮೂಲಕ ಪ್ರತಿಯೊಬ್ಬರೂ ನೆಲ, ಜಲ, ಭಾಷೆಯ ಮೇಲಿನ ಅಭಿಮಾನ ಬೆಳೆಸಿಕೊಳ್ಳಬೇಕೆಂದು ಕೆರೆ ನೀಡಿದರು.
ಇದಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಅಂಬೇಡ್ಕರ್ ವೃತ್ತದಿಂದ ತಾಯಿ ಶ್ರೀ ಭುವನೇಶ್ವರಿ ದೇವಿ ಭಾವಚಿತ್ರದೊಂದಿಗೆ ಹಾಗು ಡೊಳ್ಳು ಕುಣಿತ, ವೀರಗಾಸೆ ಹಾಗು ಶಾಲಾ ಮಕ್ಕಳೊಂದಿಗೆ ಕನಕ ಮಂಟಪ ಮೈದಾನದವರೆಗೂ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ತಹಸೀಲ್ದಾರ್ ಆರ್. ಪ್ರದೀಪ್ ಚಾಲನೆ ನೀಡಿದರು.
ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಎಪಿಎಂಸಿ ಅಧ್ಯಕ್ಷ ಲವೇಶ್‌ಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ಪೊಲೀಸ್ ಉಪಾಧೀಕ್ಷಕ ಸಾಹಿಲ್ ಬಾಗ್ಲ, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಸದಸ್ಯರಾದ ಸರ್ವಮಂಗಳ, ಬಿ.ಕೆ ಮೋಹನ್, ಕಾಂತರಾಜ್, ಲತಾ ಚಂದ್ರಶೇಖರ್, ಶೃತಿ ವಸಂತ್, ಮಂಜುಳ ಸುಬ್ಬಣ್ಣ, ಅನುಪಮ ಚನ್ನೇಶ್, ಉದಯಕುಮಾರ್, ಬಿ.ಎಂ ಮಂಜುನಾಥ್, ಸುದೀಪ್ ಕುಮಾರ್, ಎಸ್.ಎಸ್ ಭೈರಪ್ಪ, ಮೋಹನ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಸ್ವಾಗತಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ನಿರೂಪಸಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ಪ್ರದರ್ಶನ ನಡೆಯಿತು.
No comments:
Post a Comment