ಅಶ್ಲೀಲ ನೃತ್ಯ ಪ್ರದರ್ಶನ ಮಾಡಿಸುವ ವಾದ್ಯಗೋಷ್ಠಿ ಕಲಾತಂಡ(ಆರ್ಕೆಸ್ಟ್ರಾ)ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಭದ್ರಾವತಿಯಲ್ಲಿ ವಾದ್ಯಗೋಷ್ಠಿ ಕಲಾವಿದರು ಹಾಗು ದಲಿತ ಸಂಘರ್ಷ ಸಮಿತಿ ಸೇರಿದಂತೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೨೯: ಅಶ್ಲೀಲ ನೃತ್ಯ ಪ್ರದರ್ಶನ ಮಾಡಿಸುವ ವಾದ್ಯಗೋಷ್ಠಿ ಕಲಾತಂಡ(ಆರ್ಕೆಸ್ಟ್ರಾ)ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ವಾದ್ಯಗೋಷ್ಠಿ ಕಲಾವಿದರು ಹಾಗು ದಲಿತ ಸಂಘರ್ಷ ಸಮಿತಿ ಸೇರಿದಂತೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ದಲಿತ ಸಂಘರ್ಷ ಸಮಿತಿ ಪ್ರಮುಖರು, ಪ್ರಗತಿಪರರು ಹಾಗು ಕಲಾವಿದರು ಮಾತನಾಡಿ, ನಗರದ ನಿವಾಸಿ ಹರೀಶ್ ಮಾಲೀಕತ್ವದ ಸೋನಿ ಮೆಲೋಡಿ ವಾದ್ಯ ಗೋಷ್ಠಿ ತಂಡ ಇತ್ತೀಚೆಗೆ ತುರುವೇಕೆರೆ ತಾಲೂಕಿನ ಗ್ರಾಮವೊಂದರಲ್ಲಿ ಆಯೋಜಿಸಲಾಗಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಮಹಿಳಾ ಕಲಾವಿದರನ್ನು ಬಳಸಿಕೊಂಡು ತುಂಡು ಉಡುಗೆಯ ಅಶ್ಲೀಲ ನೃತ್ಯ ಪ್ರದರ್ಶನ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯಾದ್ಯಂತ ವ್ಯಾಪಾಕವಾಗಿ ಪ್ರಸಾರಗೊಳ್ಳುವ ಮೂಲಕ ಗೌರವಯುತವಾಗಿ ಗುರುತಿಸಿಕೊಂಡಿರುವ ಕಲಾವಿದರಿಗೆ ಮಸಿ ಬಳಿದಂತಾಗಿದ್ದು, ಕಲಾವಿದರನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿಯ ಘಟನೆ ಈ ಹಿಂದೆ ಸಹ ನಡೆದಿದ್ದು, ಈ ಸಂದರ್ಭದಲ್ಲಿ ಪುನಃ ಮರುಕಳುಹಿಸದಂತೆ ಎಚ್ಚರ ವಹಿಸುವುದಾಗಿ ಕ್ಷಮೆಯಾಚಿಸಲಾಗಿತ್ತು. ಆದರೆ ಇದೀಗ ಪುನಃ ಘಟನೆ ನಡೆದಿರುವುದು ಕಲಾವಿದರಿಗೆ ಅದರಲ್ಲೂ ಮಹಿಳಾ ಕಲಾವಿದರಿಗೆ ಹೆಚ್ಚಿನ ನೋವುಂಟು ಮಾಡಿದೆ. ಕಲೆಯನ್ನು ವೃತ್ತಿಯಾಗಿಸಿಕೊಂಡು ಬದುಕುತ್ತಿರುವ ಬಹಳಷ್ಟು ಕಲಾವಿದರಿಗೆ ಈ ಕೃತ್ಯ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ಕಲಾವಿದರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಕಲಾತಂಡಗಳಿಗೆ ಬೇಡಿಕೆ ಸಹ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಕೃತ್ಯ ನಡೆಸಿರುವುದು ಗೌರವಯುತವಾಗಿ ಗುರುತಿಸಿಕೊಂಡಿರುವ ಕಲಾವಿದರ ಬದುಕಿನ ಮೇಲೂ ದುಷ್ಪರಿಣಾಮ ಉಂಟುಮಾಡುತ್ತಿದೆ ಎಂದು ಅಳಲು ತೋರ್ಪಡಿಸಿಕೊಂಡರು.
ಅಶ್ಲೀಲ ನೃತ್ಯ ಮಾಡಿಸುವ ವಾದ್ಯಗೋಷ್ಠಿ ಕಲಾ ತಂಡಗಳನ್ನು ತಕ್ಷಣ ರದ್ದುಗೊಳಿಸಿ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸುವ ಜೊತೆಗೆ ರಾಜ್ಯದಲ್ಲಿರುವ ವಾದ್ಯಗೋಷ್ಠಿ ಕಲಾವಿದರಿಗೆ ಸರ್ಕಾರ ಪ್ರತಿವರ್ಷ ಸಾಲಸೌಲಭ್ಯ ಕಲ್ಪಿಸಿಕೊಡಬೇಕು. ಹಿರಿಯ ಕಲಾವಿದರಿಗೆ ಸಮರ್ಪಕವಾಗಿ ಮಾಸಾಶನ ವಿತರಿಸಬೇಕು ಮತ್ತು ನಿರ್ಗತಿಕ ಕಲಾವಿದರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ವಾದ್ಯಗೋಷ್ಠಿ ಕಲಾವಿದರಾದ ಶಾಲಿನಿ, ಬಿ.ಆರ್ ಗೋಪಾಲ್, ವಿಜಯ್ ದಯಾಕರ್, ನೂರುಲ್ಲಾ, ಎ. ರಾಜು, ವೆಂಕಟೇಶ್, ಕಣ್ಣಪ್ಪ ಮತ್ತು ದಾಮೋಜಿ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕೆ. ರಂಗನಾಥ್, ಸಂಘಟನಾ ಸಂಚಾಲಕ ಸುರೇಶ್, ಜಿಲ್ಲಾ ಸಂಘಟನಾ ಸಂಚಾಲಕ ಈಶ್ವರಪ್ಪ, ಮುಖಂಡರಾದ ಕುಪೇಂದ್ರಪ್ಪ, ಪಳನಿರಾಜ್, ಹಾಗು ಡಿಎಸ್‌ಎಸ್ ಮುಖಂಡರಾದ ಚಿನ್ನಯ್ಯ, ರಂಗನಾಥ್, ಈಶ್ವರಪ್ಪ, ಎನ್. ಕುಬೇಂದ್ರಪ್ಪ, ನ್ಯಾಷನಲ್ ಹ್ಯೂಮನ್ ರೈಟ್ಸ್ ಪ್ಯಾನಲ್ ಅಧ್ಯಕ್ಷ ಡಿ.ಜೆ ಪ್ರಭು, ಮೋಸಸ್, ದೀಪು, ನೂರುಲ್ಲಾ ಖಾನ್, ಶ್ರಮಿಕ್, ಮಾರ್ಟಿಸ್, ಶೃತಿ ಮೇರಮ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment