ಕಾನೂನು ಕ್ರಮಕ್ಕೆ ಆಗ್ರಹಿಸಿ ನ.೨೯ರಂದು ಪ್ರತಿಭಟನೆ
ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಾದ್ಯ ಗೋಷ್ಠಿ ಕಲಾವಿದರು ಮತ್ತು ದಲಿತ ಮುಖಂಡರು ಮಾತನಾಡಿದರು.
ಭದ್ರಾವತಿ, ನ. ೨೬: ಕಲೆಯ ನೈಜತೆ ಉಳಿಸುವ ಜೊತೆಗೆ ರಾಜ್ಯಾದ್ಯಂತ ಗುರುತಿಸಿಕೊಂಡಿರುವ, ಸಮಾಜದಲ್ಲಿ ಗೌರವಯುತವಾಗಿ ಕಾಣುತ್ತಿರುವ ವಾದ್ಯ ಗೋಷ್ಠಿ ಸಾಂಸ್ಕೃತಿಕ ಕಲಾವಿದರನ್ನು (ಆರ್ಕೆಸ್ಟ್ರಾ) ಅಗೌರವದಿಂದ ಕಾಣುವಂತಹ ಕೃತ್ಯಗಳು ನಡೆಯುತ್ತಿದ್ದು, ಇಂತಹ ಕೃತ್ಯಗಳಿಗೆ ಕಾರಣಕರ್ತರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನ.೨೯ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ವಾದ್ಯಗೋಷ್ಠಿ ಕಲಾವಿದರು ತಿಳಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ನಿವಾಸಿ ಹರೀಶ್ ಮಾಲೀಕತ್ವದ ಸೋನಿ ಮೆಲೋಡಿ ವಾದ್ಯ ಗೋಷ್ಠಿ ತಂಡ ಇತ್ತೀಚೆಗೆ ತುರುವೇಕೆರೆಯಲ್ಲಿ ಜರುಗಿದ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಕಲಾವಿದರನ್ನು ಬಳಸಿಕೊಂಡು ತುಂಡು ಉಡುಗೆಯ ಅಶ್ಲೀಲ ನೃತ್ಯ ಪ್ರದರ್ಶನ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯಾದ್ಯಂತ ವ್ಯಾಪಾಕವಾಗಿ ಪ್ರಸಾರಗೊಳ್ಳುವ ಮೂಲಕ ಗೌರವಯುತವಾಗಿ ಗುರುತಿಸಿಕೊಂಡಿರುವ ಕಲಾವಿದರಿಗೆ ಮಸಿ ಬಳಿದಂತಾಗಿದೆ. ಕಲಾವಿದರನ್ನು ಅವಮಾನಿಸಿರುವ ಈ ಕೃತ್ಯವನ್ನು ಖಂಡಿಸುತ್ತೇವೆ ಎಂದರು.
ಈ ರೀತಿಯ ಘಟನೆ ಈ ಹಿಂದೆ ಸಹ ನಡೆದಿದ್ದು, ಈ ಸಂದರ್ಭದಲ್ಲಿ ಪುನಃ ಮರುಕಳುಹಿಸದಂತೆ ಎಚ್ಚರ ವಹಿಸುವುದಾಗಿ ಕ್ಷಮೆಯಾಚಿಸಲಾಗಿತ್ತು. ಆದರೆ ಇದೀಗ ಪುನಃ ಘಟನೆ ನಡೆದಿರುವುದು ಕಲಾವಿದರಿಗೆ ಅದರಲ್ಲೂ ಮಹಿಳಾ ಕಲಾವಿದರಿಗೆ ಹೆಚ್ಚಿನ ನೋವುಂಟು ಮಾಡಿದೆ. ಕಲೆಯನ್ನು ವೃತ್ತಿಯಾಗಿಸಿಕೊಂಡು ಬದುಕುತ್ತಿರುವ ಬಹಳಷ್ಟು ಕಲಾವಿದರಿಗೆ ಈ ಕೃತ್ಯ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ಕಲಾವಿದರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಕಲಾತಂಡಗಳಿಗೆ ಬೇಡಿಕೆ ಸಹ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಕೃತ್ಯ ನಡೆಸಿರುವುದು ಗೌರವಯುತವಾಗಿ ಗುರುತಿಸಿಕೊಂಡಿರುವ ಕಲಾವಿದರ ಬದುಕಿನ ಮೇಲೂ ದುಷ್ಪರಿಣಾಮ ಉಂಟುಮಾಡುತ್ತಿದೆ ಎಂದು ಅಳಲು ತೋರ್ಪಡಿಸಿಕೊಂಡರು.
ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ರಚಿಸಿಕೊಂಡಿರುವ ಹರೀಶ್ ಅದರ ಜಿಲ್ಲಾಧ್ಯಕ್ಷರಾಗಿದ್ದು, ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇವರ ಈ ವರ್ತನೆಯನ್ನು ಈ ಸಂಘದ ಪದಾಧಿಕಾರಿಗಳು ಸಹ ಪ್ರಶ್ನಿಸುತ್ತಿಲ್ಲ. ಹರೀಶ್ ವಿರುದ್ಧ ಜಿಲ್ಲಾಡಳಿತ ತಕ್ಷಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ಕೃತ್ಯವನ್ನು ಖಂಡಿಸಿ ನ.೨೯ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.
ಗೌರವಯುತವಾಗಿ ಬದುಕುತ್ತಿರುವ ಕಲಾವಿದರ ಮೇಲೆ ದೌರ್ಜನ್ಯ :
ಕಲಾವಿದರ ನೋವುಗಳಿಗೆ ಸ್ಪಂದಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಮುಖಂಡರು, ಕೆಲವರು ದುರುದ್ದೇಶದ ಹಿನ್ನಲೆಯಲ್ಲಿ ಸಂಘಟನೆ ಕಟ್ಟಿಕೊಂಡು ಗೌರವಯುತವಾಗಿ ಬದುಕುತ್ತಿರುವ ಕಲಾವಿದರ ಮೇಲೆ ದೌರ್ಜನ್ಯವೆಸಗುತ್ತಿರುವುದು ಸರಿಯಲ್ಲ. ಕಲಾವಿದರಿಗೆ ಹಣ ಮುಖ್ಯವಲ್ಲ ಗೌರವ ಮುಖ್ಯವಾಗಿದೆ. ತಾಲೂಕಿನ ಕಲಾವಿದರಿಗೆ ರಾಜ್ಯಾದ್ಯಂತ ದೊಡ್ಡ ದೊಡ್ಡ ನಗರಗಳಲ್ಲೂ ಬೇಡಿಕೆ ಇದೆ. ಉತ್ತಮ ಕಲಾವಿದರು ಇಲ್ಲಿದ್ದು, ತಾಲೂಕಿನ ಗೌರವ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೃತ್ಯಕ್ಕೆ ಕಾರಣರಾಗಿರುವ ಹರೀಶ್ ತಕ್ಷಣ ಕ್ಷಮೆಯಾಗಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯ ನಡೆಸಬಾರದೆಂದು ಎಚ್ಚರಿಸುವ ಮೂಲಕ ಕಲಾವಿದರ ಹೋರಾಟಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ಪಳನಿರಾಜ್, ಅನಿತಾ, ಬಿ.ಆರ್ ಗೋಪಾಲ್, ವಿಜಯ್ ದಯಾಕರ್, ನೂರುಲ್ಲಾ, ಎ. ರಾಜು, ವೆಂಕಟೇಶ್, ಪುಟ್ಟಣ್ಣ ಹಾಗು ಡಿಎಸ್‌ಎಸ್ ಮುಖಂಡರಾದ ಚಿನ್ನಯ್ಯ, ರಂಗನಾಥ್, ಈಶ್ವರಪ್ಪ, ಎನ್. ಕುಬೇಂದ್ರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment