Sunday, December 26, 2021

ವಿಕಲಚೇತನ ಪ್ರತಿಭೆಗಳು ಹೊರಹೊಮ್ಮಲು ಕ್ರೀಡಾಕೂಟಗಳು ಸಹಕಾರಿ : ಶೇಖರ್‌ನಾಯ್ಕ್

ಭದ್ರಾವತಿ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಭಾನುವಾರ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಮತ್ತು ಬೆಂಗಳೂರಿನ ಶೇಖರ್ ನಾಯ್ಕ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಅಂಧರ ತ್ರಿಕೋನಾ ಕ್ರಿಕೆಟ್ ಪಂದ್ಯಾವಳಿಯನ್ನು ಭಾರತ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್‌ನಾಯ್ಕ್ ಉದ್ಘಾಟಿಸಿದರು.  
    ಭದ್ರಾವತಿ, ಡಿ. ೨೬: ಕ್ರಿಕೆಟ್ ತರಬೇತಿ ಹಾಗೂ ಕ್ರೀಡಾಕೂಟ ಆಯೋಜನೆಯಿಂದ ವಿಕಲಚೇತನರಿಗೆ ಸಾಕಷ್ಟು ಅನುಕೂಲವಾಗಿದ್ದು, ಭವಿಷ್ಯದಲ್ಲಿ ಸಾವಿರಾರರು ವಿಕಲಚೇತನ ಪ್ರತಿಭೆಗಳು ಹೊರಹೊಮ್ಮುವಂತಾಗಬೇಕೆಂದು ಭಾರತ ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್‌ನಾಯ್ಕ್ ಹೇಳಿದರು.
    ಅವರು ಭಾನುವಾರ ನಗರದ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಮತ್ತು ಬೆಂಗಳೂರಿನ ಶೇಖರ್ ನಾಯ್ಕ್ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಅಂಧರ ತ್ರಿಕೋನಾ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
    ಸಿದ್ದಾರ್ಥ ಅಂಧರ ಕೇಂದ್ರದ ಸಹಕಾರದೊಂದಿಗೆ ತರಬೇತಿ ಹಾಗು ಕ್ರೀಡಾಕೂಟ ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಅಂಧ ವಿಕಲಚೇತನರಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಬೇಕೆಂಬುದು ನನ್ನ ಆಶಯವಾಗಿದೆ. ಈ ನಿಟ್ಟಿನಲ್ಲಿ ಸಹಕಾರ ನೀಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಡಿಆರ್‌ಟಿ ಬೆಂಗಳೂರು ತಂಡದ ಉಪಾಧ್ಯಕ್ಷೆ ಕವಿತಾ, ಸ್ನೇಹ ದೀಪಾ ತಂಡ ವ್ಯವಸ್ಥಾಪಕ ಮಹೇಶ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಲ್. ದೇವರಾಜ್, ಅತಿಥಿ ಉಪನ್ಯಾಸಕಿ ಸೃಷ್ಟಿ ಮತ್ತು ಬಿಆರ್‌ಸಿ ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಶಿವಮೊಗ್ಗ ಶಾರದದೇವಿ ಅಂಧರ ವಿಕಾಸ ಕೇಂದ್ರದ ದೈಹಿಕ ಶಿಕ್ಷಕ ಸುರೇಶ್ ಮತ್ತು ಚಿಕ್ಕಮಗಳೂರು ಆಶಾಕಿರಣದ ದೈಹಿಕ ಶಿಕ್ಷಕ ಮಂಜುನಾಥ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಕ್ರೀಡಾಕೂಟದ ನೇತೃತ್ವ ವಹಿಸಿದ್ದರು.

No comments:

Post a Comment