Saturday, December 25, 2021

ಮತಾಂತರ ಕಾಯ್ದೆ ಭೀತಿ ನಡುವೆಯೂ ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ

ಭದ್ರಾವತಿ ನ್ಯೂಟೌನ್ ವೇನ್ಸ್ ಮೆಮೋರಿಯಲ್ ಚರ್ಚ್ ಮುಂಭಾಗ ನಿರ್ಮಿಸಲಾಗಿರುವ ಏಸುಕ್ರಿಸ್ತನ ಜನ್ಮ ವೃತ್ತಾಂತ ಸಾರುವ ಆಕರ್ಷಕ ಗೋದೋಲಿ.
    ಭದ್ರಾವತಿ, ಡಿ. ೨೫: ನಗರದೆಲ್ಲೆಡೆ ಏಸುಕ್ರಿಸ್ತನ ಜನ್ಮದಿನ ಶನಿವಾರ ಕ್ರೈಸ್ತ ಸಮುದಾಯದವರು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
    ರಾಜ್ಯದಲ್ಲಿ ಒಂದೆಡೆ ಮತಾಂತರ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಮತಾಂತರ ಕಾಯ್ದೆಗೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದೆ. ಆದರೆ ವಿಧಾನಪರಿಷತ್‌ನಲ್ಲಿ ಅನುಮೋದನೆ ಬಾಕಿ ಉಳಿದಿದೆ. ಆತಂಕದ ನಡುವೆಯೂ ಏಸುಕ್ರಿಸ್ತನ ಜನ್ಮದಿನ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುವ ಮೂಲಕ ಶಾಂತಿ ಸಂದೇಶ ಸಾರಿದರು. ಶುಕ್ರವಾರ ರಾತ್ರಿಯೇ ನಗರದ ಪ್ರಮುಖ ಚರ್ಚ್‌ಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂದಿತು. ಏಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಿದರು. ಚರ್ಚ್‌ಗಳ ಬಳಿ ಏಸುಕ್ರಿಸ್ತನ ಜನ್ಮ ವೃತ್ತಾಂತ ಸಾರುವ ಆಕರ್ಷಕವಾದ ಗೋದೋಲಿ ನಿರ್ಮಾಣ ಮಾಡಿರುವುದು ಕಂಡು ಬಂದಿತು. ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಕೆಲವು ಚರ್ಚ್‌ಗಳಲ್ಲಿ ಒಳಭಾಗದಲ್ಲಿ ಗೋದೋಲಿ ನಿರ್ಮಾಣ ಮಾಡಿದರೆ, ಬಹುತೇಕ ಚರ್ಚ್‌ಗಳಲ್ಲಿ ಹೊರಭಾಗದಲ್ಲಿ ಗೋದೋಲಿಗಳನ್ನು ನಿರ್ಮಾಣ ಮಾಡಲಾಗಿತ್ತು.
    ಶನಿವಾರ ಬೆಳಿಗ್ಗೆ ಸಹ ಏಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಅನ್ಯಧರ್ಮಿಯರೊಂದಿಗೆ ಸೌಹಾರ್ದತೆಯಿಂದ ಹಬ್ಬದ ಸಂಭ್ರಮ ಹಂಚಿಕೊಂಡರು.

No comments:

Post a Comment