ಜಮೀನು ಬಿಟ್ಟುಕೊಡಲು ಅರಣ್ಯ ಇಲಾಖೆ ಮೀನಾಮೀಷ : ಹೋರಾಟಕ್ಕೆ ಮುಂದಾದ ಕುಟುಂಬಸ್ಥರು
ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ, ಎಮ್ಮೆದೊಡ್ಡಿ ಗ್ರಾಮದ ಸರ್ವೆ ನಂ.೮ರಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಾದ ಸೀತಾರಾಮ್ ಬಿನ್ ಮಂಜಪ್ಪ ಕುಟುಂಬಸ್ಥರು ಸರ್ಕಾರದಿಂದ ತಮಗೆ ಮಂಜೂರಾಗಿರುವ ಜಮೀನು ಸ್ವಾಧೀನಕ್ಕೆ ಬಿಟ್ಟುಕೊಡಬೇಕೆಂದು ಆಗ್ರಹಿಸಿ ಅರಣ್ಯ ಇಲಾಖೆ ವಿರುದ್ಧ ಹೋರಾಟ ನಡೆಸುತ್ತಿರುವುದು.
ಭದ್ರಾವತಿ, ಜ. ೧೧: ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಭೂಮಿಯನ್ನು ಕಳೆದಕೊಂಡ ಶರಾವತಿ ಮುಳುಗಡೆ ಸಂತ್ರಸ್ಥರು ಇಂದಿಗೂ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರ ಜಮೀನು ಮಂಜೂರು ಮಾಡಿದರೂ ಸಹ ಅನುಭೋಗಕ್ಕೆ ಬಂದಿಲ್ಲ. ಭವಿಷ್ಯದ ಬದುಕಿಗೆ ಎದುರು ನೋಡುತ್ತಿರುವ ಸಂತ್ರಸ್ಥರು ಇದೀಗ ವಿಧಿ ಇಲ್ಲದೆ ಹೋರಾಟದ ಮೊರೆ ಹೋಗಬೇಕಾಗಿದೆ.
ತಾಲೂಕಿನ ಕೂಡ್ಲಿಗೆರೆ ಹೋಬಳಿ, ಎಮ್ಮೆದೊಡ್ಡಿ ಗ್ರಾಮದ ಸರ್ವೆ ನಂ.೮ರಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಾದ ಸೀತಾರಾಮ್ ಬಿನ್ ಮಂಜಪ್ಪ ಎಂಬುವರಿಗೆ ೪ ಎಕರೆ ಜಮೀನು ಸರ್ಕಾರದಿಂದ ೨೦೧೮ರಲ್ಲಿ ಮಂಜೂರಾಗಿದೆ. ಆದರೆ ಈ ಜಮೀನು ಅರಣ್ಯ ಇಲಾಖೆ ಸಂತ್ರಸ್ಥರಿಗೆ ನೀಡಲು ಮೀನಾಮೇಷ ಎಣಿಸುತ್ತಿದೆ. ಇದರಿಂದಾಗಿ ಕುಟುಂಬಸ್ಥರು ಕಂಗಲಾಗಿದ್ದು, ಜಮೀನಿನಲ್ಲಿಯೇ ಹೋರಾಟಕ್ಕೆ ಮುಂದಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಮಂಗಳವಾರ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಸ್ಥಳಕ್ಕೆ ಯಾರು ಬಂದಿಲ್ಲ ಎಂದು ಸಂತ್ರಸ್ಥರು ತಮ್ಮ ಅಳಲು ತೋರ್ಪಡಿಸಿಕೊಂಡಿದ್ದಾರೆ.
ನಮ್ಮ ಕುಟುಂಬದಲ್ಲಿ ಒಟ್ಟು ೯ ಜನರಿದ್ದು, ನಮಗೆ ಇರುವುದು ಈ ಜಮೀನು ಮಾತ್ರ. ಇದನ್ನು ನಂಬಿಕೊಂಡಿರುವ ನಮನ್ನು ಇಲ್ಲಿಂದ ಉದ್ದೇಶ ಪೂರ್ವಕವಾಗಿ ಖಾಲಿ ಮಾಡಿಸುವ ಹುನ್ನಾರ ನಡೆಸಲಾಗುತ್ತಿದೆ. ಅಕ್ಕಪಕ್ಕದ ಜಮೀನಿನವರಿಗೆ ಅನ್ವಯವಾಗದ ಕಾಯ್ದೆಯನ್ನು ನಮಗೆ ಮಂಜೂರಾಗಿರುವ ಜಮೀನಿಗೆ ಮಾತ್ರ ಅರಣ್ಯ ಇಲಾಖೆಯವರು ಅನ್ವಯಿಸಲು ಮುಂದಾಗುತ್ತಿದ್ದು, ಜಮೀನು ಕಸಿದು ಕೊಳ್ಳಲು ಕುತಂತ್ರ ನಡೆಸಲಾಗುತ್ತಿದೆ.
- ಮಹಾದೇವಪ್ಪ, ಸಂತ್ರಸ್ಥ ಕುಟುಂಬದ ಹಿರಿಯ ಪುತ್ರ
ನಮಗೆ ಮಂಜೂರಾಗಿರುವ ೪ ಎಕೆರೆ ಜಮೀನಿನಲ್ಲಿ ಅಕೇಶಿಯಾ ಮರಗಳು ಬೆಳೆದಿದ್ದು, ಅರಣ್ಯ ಇಲಾಖೆಯವರು ಈ ಜಾಗ ದೊಡ್ಡೇರಿ ಮೈನರ್ ಫಾರೆಸ್ಟ್‌ಗೆ ಸೇರಿದೆ ಎಂದು ಹೇಳುವ ಮೂಲಕ ಸ್ವಾಧೀನಕ್ಕೆ ಕೊಡಲು ಮೀನಾಮೇಷ ಮಾಡುತ್ತಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಫೆಬ್ರವರಿ ೨೦೧೯ರಂದು ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಸೀತಾರಾಮ್ ಬಿನ್ ಮಂಜಪ್ಪ ಅವರಿಗೆ ಮಂಜೂರಾಗಿರುವ ಜಮೀನು ಸರ್ಕಾರಿ ಬಂಜರು ಜಮೀನಾಗಿದೆ. ಅಲ್ಲದೆ ಮಂಜೂರಾತಿರಾಗಿರುವುದು ಖಾತೆ ಪಹಣಿಯಲ್ಲಿ ಸಹ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿಗಳು ತಹಸೀಲ್ದಾರ್‌ಗೆ ಪತ್ರ ಬರೆದಿದ್ದು, ಸರ್ವೆ ನಂ.೮ರ ಒಟ್ಟು ೪೦೪.೩೪ ಎಕರೆಯಲ್ಲಿ ೩೨೫ ಎಕರೆ ದೊಡ್ಡೇರಿ ಮೈನರ್ ಫಾರಸ್ಟ್‌ಗೆ ಒಳಪಟ್ಟಿದೆ. ಈ ಹಿನ್ನಲೆಯಲ್ಲಿ ಸರ್ಕಾರಿ ಬಂಜರು ಜಮೀನು ಮತ್ತು ಮೈನರ್ ಫಾರೆಸ್ಟ್ ಎರಡನ್ನು ಪ್ರತ್ಯೇಕಿಸಬೇಕಿದ್ದು, ಸರ್ವೆ ಕಾರ್ಯ ನಡೆಸುವಂತೆ ತಿಳಿಸಿದ್ದಾರೆ. ಇದರಂತೆ ತಹಸೀಲ್ದಾರ್‌ರವರು ಸರ್ವೆ ನಡೆಸಿದ್ದು, ಮಂಜೂರಾಗಿರುವ ಜಾಗ ಅರಣ್ಯ ಇಲಾಖೆಗೆ ಸೇರಿಲ್ಲ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿಗಳು ಹಿಂಬರಹ ನೀಡಿದ್ದಾರೆ. ಆದರೂ ಸಹ ಜಮೀನು ಬಿಟ್ಟುಕೊಡಲು ಅರಣ್ಯ ಇಲಾಖೆ ಮೀನಾಮೇಷ ಎಣಿಸುತ್ತಿದೆ. ಈ ಹಿನ್ನಲೆಯಲ್ಲಿ ವಿಧಿ ಇಲ್ಲದೆ ಹೋರಾಟ ನಡೆಸಬೇಕಾಗಿದೆ ಎಂದರು.
ಸೀತಾರಾಮ್ ಅವರ ಪತ್ನಿ ಲಲಿತಮ್ಮ ಮಾತನಾಡಿ, ಈಗಾಗಲೇ ನಾವು ಎಲ್ಲವನ್ನು ಕಳೆದುಕೊಂಡಿದ್ದೇವೆ. ಸಾಲಸೋಲ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಇಡೀ ಕುಟುಂಬ ಸಂಕಷ್ಟಕ್ಕೆ ಒಳಗಾಗಿದೆ. ನಮ್ಮ ಬೇಡಿಕೆಯನ್ನು ಜಿಲ್ಲಾಧಿಕಾರಿಗಳೇ ಈಡೇರಿಸಿಕೊಡಬೇಕು. ಅವರು ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ ಎಂದರು.
No comments:
Post a Comment