Thursday, January 13, 2022

ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳರ ಹಾವಳಿ : ದೂರು ದಾಖಲು


    ಭದ್ರಾವತಿ, ಜ. ೧೩: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇದೀಗ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.
    ಪ್ರತಿದಿನ ಸಾವಿರಾರು ಮಂದಿ ಆಸ್ಪತ್ರೆಗೆ ಬಂದು ಹೋಗುತ್ತಾರೆ. ಈ ನಡುವೆ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮೊಬೈಲ್ ಕಳೆದುಕೊಂಡಿರುವ ಬಹುತೇಕ ಮಂದಿ ಪೊಲೀಸರಿಗೆ ದೂರು ನೀಡದೆ ಮೌನವಾಗಿರುವುದು ಮೊಬೈಲ್ ಕಳ್ಳರಿಗೆ ಒಂದೆಡೆ ಅಸ್ತ್ರವಾಗಿದೆ. ಆಸ್ಪತ್ರೆಯ ಬಹುತೇಕ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಆದರೂ ಸಹ ಮೊಬೈಲ್ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ.
    ತಾಲೂಕಿನ ಬೊಮ್ಮೆನಹಳ್ಳಿ ನಿವಾಸಿ ಬಿ.ವಿ ನವೀನ್‌ಕುಮಾರ್ ಎಂಬುವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವಾಗ ಕಾಲಿಗೆ ಗಾಯವಾದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಬಂದಿದ್ದು, ಚಿಕಿತ್ಸೆ ಪಡೆದುಕೊಂಡು ಹೊರಗಡೆ ಬಂದು ಮೊಬೈಲ್ ನೋಡಿಕೊಂಡಾಗ ಮೊಬೈಲ್ ಕಳುವಾಗಿರುವುದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ನವೀನ್‌ಕುಮಾರ್, ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳರಿರುವುದು ಖಚಿತವಾಗಿದೆ. ನಾನು ಮಾತ್ರವಲ್ಲ ಇದೆ ರೀತಿ ಹಲವಾರು ಜನ ಮೊಬೈಲ್ ಕಳೆದುಕೊಂಡಿರುವುದು ವಿಚರಣೆಯಿಂದ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಮೊಬೈಲ್ ಕಳವು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಮೊಬೈಲ್ ಕಳ್ಳರನ್ನು ಬಂಧಿಸಬೇಕೆಂದು ಮನವಿ ಮಾಡಿದ್ದಾರೆ.

No comments:

Post a Comment