ಭದ್ರಾವತಿ ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಬಿ.ಎಚ್ ರಸ್ತೆಯಲ್ಲಿ ಶನಿವಾರ ವಾರಾಂತ್ಯ ಕರ್ಪ್ಯೂ ಹಿನ್ನಲೆಯಲ್ಲಿ ಅಂಗಡಿಮುಂಗಟ್ಟು ಬಂದ್ ಮಾಡಿರುವುದು.
ಭದ್ರಾವತಿ, ಜ. ೮: ಕೋವಿಡ್-೧೯ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಪ್ಯೂಗೆ ಶನಿವಾರ ನಗರದಲ್ಲಿ ಪೂರಕ ಸ್ಪಂದನೆ ವ್ಯಕ್ತವಾಗಿದೆ.
ನಗರದ ಬಹುತೇಕ ವಾಣಿಜ್ಯ ರಸ್ತೆಗಳಲ್ಲಿ ಅಂಗಡಿಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ದಿನ ಬಳಕೆ ಅಗತ್ಯ ವಸ್ತುಗಳಾದ ದಿನಸಿ ಸಾಮಗ್ರಿ, ಮಾಂಸ, ಹಣ್ಣು-ತರಕಾರಿ, ಹಾಲು, ಔಷಧ, ಗೊಬ್ಬರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೋಟೆಲ್ ಹಾಗು ರೆಸ್ಟೋರೆಂಟ್‌ಗಳಲ್ಲಿ ಕೇವಲ ಪಾರ್ಸಲ್‌ಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿತ್ತು. ಪ್ರತಿದಿನ ಜನಸಂದಣಿಯಿಂದ ಕೂಡಿರುತ್ತಿದ್ದ ನಗರದ ಪ್ರಮುಖ ಮಾರುಕಟ್ಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ನಗರದ ಪ್ರಮುಖ ವಾಣಿಜ್ಯ ರಸ್ತೆಗಳಾದ ಬಿ.ಎಚ್ ರಸ್ತೆ, ಹೊಸ ಸೇತುವೆ ರಸ್ತೆ, ಸಿ.ಎನ್ ರಸ್ತೆ, ತರೀಕೆರೆ ರಸ್ತೆ, ಚಿನ್ನಾಬೆಳ್ಳಿ ರಸ್ತೆ ಹಾಗು ಹೊಸಮನೆ ಮುಖ್ಯ ರಸ್ತೆ ಮತ್ತು ತಾಲೂಕು ಕಛೇರಿ ರಸ್ತೆಗಳಲ್ಲಿ ಜನರ ಸಂಚಾರ ವಿರಳವಾಗಿತ್ತು. ಕೆಎಸ್‌ಆರ್‌ಟಿಸಿ ಹಾಗು ಖಾಸಗಿ ಬಸ್‌ಗಳು ಎಂದಿನಂತೆ ಸಂಚರಿಸಿದವು. ಬಸ್‌ಗಳ ಸಂಖ್ಯೆ ಕಡಿತಗೊಳಿಸಿದ್ದರೂ ಸಹ ಪ್ರಯಾಣಿಕರಿಲ್ಲದಿರುವುದು ಕಂಡು ಬಂದಿತು.
ಉಳಿದಂತೆ ಶಾಲಾ-ಕಾಲೇಜುಗಳು, ಬಹುತೇಕ ಸರ್ಕಾರಿ ಕಛೇರಿಗಳು ರಜೆ ಘೋಷಿಸಿದ್ದವು. ತಾಲೂಕು ಆಡಳಿತ ಸೌಧ, ನಗರಸಭೆ ಕಛೇರಿ, ತಾಲೂಕು ಪಂಚಾಯಿತಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಬಳಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ನಗರಸಭೆ, ಪೊಲೀಸ್ ಹಾಗು ಆರೋಗ್ಯ ಇಲಾಖೆ ಕರ್ಪ್ಯೂ ಹಿನ್ನಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದವು.
ಪ್ರತಿದಿನ ಜನಸಂದಣಿಯಿಂದ ಕೂಡಿರುತ್ತಿದ್ದ ಭದ್ರಾವತಿ ತಾಲೂಕು ಕಛೇರಿ ರಸ್ತೆ ಶನಿವಾರ ವಾರಾಂತ್ಯ ಕರ್ಪ್ಯೂ ಹಿನ್ನಲೆಯಲ್ಲಿ ಜನರಲ್ಲದೆ ಬಿಕೋ ಎನ್ನುತ್ತಿರುವುದು.
No comments:
Post a Comment