ಭದ್ರಾವತಿ ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಸೋಮವಾರ ರಮಾಬಾಯಿ ಅಂಬೇಡ್ಕರ್‌ರವರ ೧೨೪ನೇ ಜನ್ಮದಿನ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಫೆ. ೭: ರಮಾಬಾಯಿ ಅಂಬೇಡ್ಕರ್‌ರವರು ಓರ್ವ ಆದರ್ಶ ಮಹಿಳೆ ಮಾತ್ರವಲ್ಲದೆ, ವಿಶ್ವಜ್ಞಾನಿ, ಮಹಾಚೇತನ ಡಾ. ಬಿ.ಆರ್ ಅಂಬೇಡ್ಕರವರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು ಎಂದು ಎಂಪಿಎಂಇಎಸ್ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಹೇಳಿದರು.
ಅವರು ಸೋಮವಾರ ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಮಾಬಾಯಿ ಅಂಬೇಡ್ಕರ್‌ರವರ ೧೨೪ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂಬೇಡ್ಕರ್‌ರವರ ಸಾಧನೆ ಹಿಂದೆ ರಮಾಬಾಯಿಯವರ ಕೊಡುಗೆ ಅಪಾರವಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದ ರಮಾಬಾಯಿಯವರು ತಮ್ಮ ಸಂಪೂರ್ಣ ಬದುಕನ್ನು ಅಂಬೇಡ್ಕರ್‌ರವರ ಉಜ್ವಲ ಭವಿಷ್ಯಕ್ಕಾಗಿ ಮುಡುಪಾಗಿಟ್ಟರು. ಆ ಕಾಲದಲ್ಲಿಯೇ ತಮ್ಮ ಬದುಕಿನ ವೈಯಕ್ತಿಕ ಸಮಸ್ಯೆಗಳಿಗೆ ಅಂಬೇಡ್ಕರ್‌ರವರ ಶಿಕ್ಷಣ ಮೊಟಕಾಗದಂತೆ ಎಚ್ಚರವಹಿಸಿದರು. ಅಂಬೇಡ್ಕರ್‌ರವರು ವಿದೇಶದಲ್ಲಿ ವ್ಯಾಸಂಗ ಮುಗಿಸಿಕೊಂಡು ಹಿಂದಿರುಗವರೆಗೂ ಅನುಭವಿಸಿದ ನೋವು, ದುಃಖ ಎಲ್ಲವನ್ನು ನುಂಗಿಕೊಂಡು ಕೇವಲ ಸತಿಯಾಗಿರದೆ ಮಾತೆಯ ಸ್ವರೂಪಿಣಿಯಾಗಿದ್ದರು. ಇಂತಹ ಮಹಾನ್ ಮಾತೆಯ ಜನ್ಮದಿನ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇವರ ದಾರಿಯಲ್ಲಿ ನಾವೆಲ್ಲರೂ ಸಾಗುವಂತಾಗಬೇಕೆಂದರು.
ನಗರಸಭೆ ಇಂಜಿನಿಯರ್ ರಂಗರಾಜಪುರೆ, ಶಾರದಕುಮಾರಿ ಸೇರಿದಂತೆ ಇನ್ನಿತರರು ಮಾತನಾಡಿದರು. ಸಮಾಜದ ಹಿರಿಯ ಮಹಿಳೆ ಲಕ್ಷ್ಮಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಮೆಸ್ಕಾಂ ನಿವೃತ್ತ ಇಂಜಿನಿಯರ್ ಜಯರಾಜ್, ಶಿಕ್ಷಕಿ ವಿಜಯಲಕ್ಷ್ಮೀ, ಭಾಗ್ಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪುಟ್ಟರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮಹೇಶ್ ವಂದಿಸಿದರು.
No comments:
Post a Comment