Thursday, February 24, 2022

ಜನಪರ ಯೋಜನೆಗಳು ಜಾರಿಗೆ ಬರದಂತೆ ತಡೆಯಲು ಕಾಂಗ್ರೆಸ್ ಕುತಂತ್ರ

೨ ಕೋ. ರು. ವೆಚ್ಚದ ಅಧಿವೇಶನ ಮೊಟಕು : ಎಂ.ಪಿ ರೇಣುಕಾಚಾರ್ಯ


ಭದ್ರಾವತಿ ಹೊಸಮನೆ ಶಿವಾಜಿ ವೃತ್ತದಲ್ಲಿ ಬಿಜೆಪಿ ಮಂಡಲ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜನ ವಿರೋಧಿ ಕಾಂಗ್ರೆಸ್ ವಿರುದ್ಧ ಜನಜಾಗೃತಿ ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಫೆ. ೨೪: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನಪರ ಯೋಜನೆಗಳು ಜಾರಿಗೆ ಬರದಂತೆ ತಡೆಯುವ ಉದ್ದೇಶದಿಂದ ವಿಧಾನಸಭೆ ಅಧಿವೇಶನ ಮೊಟಕುಗೊಳ್ಳುವಂತೆ ವಿರೋಧ ಪಕ್ಷವಾದ ಕಾಂಗ್ರೆಸ್ ಈ ಬಾರಿ ಕುತಂತ್ರ ನಡೆಸಿತು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಆರೋಪಿಸಿದರು.
    ಅವರು ಗುರುವಾರ ಹೊಸಮನೆ ಶಿವಾಜಿ ವೃತ್ತದಲ್ಲಿ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನ ವಿರೋಧಿ ಕಾಂಗ್ರೆಸ್ ವಿರುದ್ಧ ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಹಿಜಾಬ್ ಸಂಬಂಧ ಕಾಂಗ್ರೆಸ್ ಅನುಸರಿಸುತ್ತಿರುವ ಗೊಂದಲದ ನಿಲುವಿನಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ವಿನಾಕಾರಣ ಸುಮಾರು ೨ ಕೋ. ರು. ವೆಚ್ಚದ ಅಧಿವೇಶನ ಹಾಳು ಮಾಡಲಾಗಿದೆ. ಸರ್ಕಾರಕ್ಕೆ ಸೂಕ್ತ ಸಲಹೆ, ಸಹಕಾರ ನೀಡುವ ಮೂಲಕ ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ವಿರೋಧ ಪಕ್ಷ ಅಸಭ್ಯ ಘೋಷಣೆಗಳ ಮೂಲಕ ಕೀಳುಮಟ್ಟದ ಸಂಸ್ಕೃತಿಯನ್ನು ಪ್ರದರ್ಶಿಸಿದೆ. ಮತ್ತೊಂದೆಡೆ ಹಿಜಾಬ್ ಸಂಬಂಧ ಹೋರಾಟ ನಡೆಸುವ ಕೆಲವೇ ಕೆಲವು ಮಂದಿಗೆ ಕಾನೂನು ಹೋರಾಟ ನಡೆಸಲು ಎಲ್ಲಾ ರೀತಿಯ ಸಿದ್ದತೆಯನ್ನು ಕಾಂಗ್ರೆಸ್ ಪಕ್ಷ ಮಾಡಿ ಕೊಟ್ಟಿದೆ ದೂರಿದರು.
    ಶಿವಮೊಗ್ಗದಲ್ಲಿ ಹಿಜಾಬ್ ಸಂಬಂಧ ನಡೆದ ಗಲಭೆ ಹಿನ್ನಲೆಯಲ್ಲಿ ಡಿ.ಕೆ ಶಿವಕುಮಾರ್‌ರವರು ನೀಡಿದ ಪ್ರಚೋದನಾಕಾರಿ ಹೇಳಿಕೆಯೇ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡಿದೆ. ಬದಲಾದ ಮನಸ್ಥಿತಿಯೇ ಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಕಾರಣ ಎಂದು ಆರೋಪಿಸಿ ಹತ್ಯೆಗೈದವರನ್ನು ತಕ್ಷಣ ಬಂಧಿಸ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್, ಸೂಡಾ ಸದಸ್ಯ ವಿ. ಕದಿರೇಶ್, ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಆರ್.ಎಸ್ ಶೋಭಾ, ರಾಮನಾಥ್ ಬರ್ಗೆ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಪಕ್ಷದ ಪ್ರಮುಖರಾದ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಪಿ. ರಂಗಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಯುವ ಘಟಕದ ಅಧ್ಯಕ್ಷ ವಿಜಯ್, ಎಸ್.ಸಿ ಘಟಕದ ಅಧ್ಯಕ್ಷ ಗಣೇಶ್ ರಾವ್, ಎಂ. ಮಂಜುನಾಥ್, ಕೃಷ್ಣ ಛಲವಾದಿ, ಬಿ.ಎಸ್ ಶ್ರೀನಾಥ್, ಅವಿನಾಶ್, ಮಲ್ಲೇಶ್, ಸುಲೋಚನಾ ಪ್ರಕಾಶ್, ಎಸ್.ಎನ್ ನಾಗಮಣಿ, ಮಂಜುಳ, ಶ್ಯಾಮಲ, ಕವಿತಾ ಸುರೇಶ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

No comments:

Post a Comment