ನೂತನ ಕುಲಸಚಿವರಾಗಿ ಮಂಗಳೂರಿನ ಪ್ರೊ. ಎಸ್.ಕೆ ನವೀನ್‌ಕುಮಾರ್ ನೇಮಕ
ಕುವೆಂಪು ವಿಶ್ವವಿದ್ಯಾನಿಲಯ
ಭದ್ರಾವತಿ, ಮಾ. ೨: ಕುವೆಂಪು ವಿಶ್ವ ವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಕೊನೆಗೂ ಸರ್ಕಾರ ಎಚ್ಚೆತ್ತುಕೊಂಡಿದ್ದು, ಈ ವಿಭಾಗದ ಕುಲಸಚಿವ(ಮೌಲ್ಯಮಾಪನ)ರನ್ನು ಎತ್ತಂಗಡಿ ಮಾಡಿದೆ.
ದೂರ ಶಿಕ್ಷಣ ನಿರ್ದೇಶನಾಲಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸಿರುವ ಸಂಬಂಧ ಸಿಂಡಿಕೇಟ್ ಹಾಗು ವಿದ್ಯಾವಿಷಯಕ ಪರಿಷತ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಸಬಂಧ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡಿದ್ದರು. ಈ ನಡುವೆ ಪರೀಕ್ಷೆ ನಡೆಸಲು ಅವಕಾಶವಿದ್ದರೂ ಸಹ ವಿನಾಕಾರಣ ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸಿರುವ ಹಿಂದೆ ಸಾಕಷ್ಟು ಅಕ್ರಮ, ಅವ್ಯವಹಾರಗಳು ನಡೆದಿರುವ ಬಗ್ಗೆ ಆರೋಪಿಸಿ ವಿಶ್ವ ವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗು ಉನ್ನತ ಶಿಕ್ಷಣ ಸಚಿವರಿಗೆ ದೂರು ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ಬುಧವಾರ ಸರ್ಕಾರ ನಿರ್ಣಯ ಕೈಗೊಂಡು ದೂರ ಶಿಕ್ಷಣ ನಿರ್ದೇಶನಾಲಯದ ಕುಲಸಚಿವರು(ಮೌಲ್ಯಮಾಪನ) ಹುದ್ದೆಗೆ ಮಂಗಳೂರು ವಿಶ್ವ ವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಅಧ್ಯಯನ ವಿಭಾಗದ ಪ್ರೊ. ಎಸ್.ಕೆ ನವೀನ್‌ಕುಮಾರ್‌ರವರನ್ನು ನೇಮಕಗೊಳಿಸಿದೆ. ಅಲ್ಲದೆ ಪ್ರಸ್ತುತ ಈ ಹುದ್ದೆಯಲ್ಲಿರುವ ಪ್ರೊ. ಸಿ.ಎಂ ತ್ಯಾಗರಾಜರವರನ್ನು ಪುನಃ ಅವರ ಹಿಂದಿನ ಹುದ್ದೆಯಾದ ರಾಣಿಚೆನ್ನಮ್ಮ ವಿಶ್ವ ವಿದ್ಯಾಲಯದ ವ್ಯವಹಾರ ನಿರ್ವಹಣೆ ವಿಭಾಗಕ್ಕೆ ವರ್ಗಾಹಿಸಿ ಆದೇಶಿಸಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಶೀತಲ್ ಎಂ. ಹಿರೇಮಠ ಸರ್ಕಾರ ಕೈಗೊಂಡಿರುವ ನಡವಳಿಗಳ ಪ್ರತಿಯಲ್ಲಿ ತಿಳಿಸಿದ್ದಾರೆ.
ನಿರ್ದೇಶಕರಾಗಿ ಡಾ.ಬಿ.ಎಸ್ ಬಿರಾದಾರ ಮುಂದುವರಿಕೆ:
ದೂರ ಶಿಕ್ಷಣ ನಿರ್ದೇಶನಾಲಯದಿಂದ ವಿಶ್ವ ವಿದ್ಯಾಲಯಕ್ಕೆ ಬರಬೇಕಾದ ಕೋಟ್ಯಾಂತರ ರು. ಬಾಕಿ ವಸೂಲಿ ಮಾಡದೆ ನಿರ್ಲಕ್ಷ್ಯ ವಹಿಸಿರುವ ಸಂಬಂಧ ಹಾಗು ಇನ್ನಿತರ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಂಡಿಕೇಟ್ ಹಾಗು ವಿದ್ಯಾ ವಿಷಯಕ ಪರಿಷತ್ ಸದಸ್ಯರಿಂದ ಆರೋಪಗಳು ಕೇಳಿ ಬರುತ್ತಿದ್ದವು. ಅಲ್ಲದೆ ಈ ಸಂಬಂಧ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವರು ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಎನ್ ಯೋಗೀಶ್‌ರವರನ್ನು ಬಿಡುಗೊಳಿಸಿ ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಎಸ್ ಬಿರಾದಾರ ಅವರನ್ನು ನೇಮಕಗೊಳಿಸಿದ್ದರು. ಆದರೆ ಕುಲಸಚಿವರ ಆದೇಶವನ್ನು ತಡೆಯಲಾಗಿತ್ತು.
ಈ ಹಿನ್ನಲೆಯಲ್ಲಿ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯರು ಈ ಸಂಬಂಧ ಸಹ ವಿಶ್ವ ವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗು ಉನ್ನತ ಶಿಕ್ಷಣ ಸಚಿವರಿಗೆ ದೂರು ಸಲ್ಲಿಸಿದ್ದರು.
ಸರ್ಕಾರ ಬುಧವಾರ ಈ ದೂರಿನ ಬಗ್ಗೆ ಸಹ ನಿರ್ಣಯ ಕೈಗೊಂಡಿದ್ದು, ಕುಲಸಚಿವರ ಆದೇಶವನ್ನು ಎತ್ತಿ ಹಿಡಿದಿದೆ. ಡಾ. ಬಿ.ಎಸ್ ಬಿರಾದಾರ ಅವರನ್ನು ಮುಂದುವರೆಸುವಂತೆ ನಿರ್ದೇಶಿಸಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಶೀತಲ್ ಎಂ. ಹಿರೇಮಠ ಕುಲಸಚಿವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
No comments:
Post a Comment