Saturday, March 26, 2022

ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ಹೂಡಿ, ನಿವೃತ್ತ ಕಾರ್ಮಿಕರ ವಸತಿ ಗೃಹಗಳ ಸಮಸ್ಯೆ ಬಗೆಹರಿಸಿ

ಮಾಜಿ ಪ್ರಧಾನಿ ದೇವೇಗೌಡರಿಂದ ಉಕ್ಕು ಸಚಿವ ರಾಮ್ ಚಂದ್ರ ಪ್ರಸಾದ್ ಸಿಂಗ್‌ಗೆ ಮನವಿ


ಭಾರತೀಯ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಬಂಡವಾಳ ಹೂಡುವ ಜೊತೆಗೆ ನಿವೃತ್ತ ಕಾರ್ಮಿಕರ ವಸತಿ ಗೃಹಗಳ ಸಮಸ್ಯೆ ಬಗೆಹರಿಸುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಉಕ್ಕು ಸಚಿವರಿಗೆ ಮನವಿ ಮಾಡಿದರು.
    ಭದ್ರಾವತಿ, ಮಾ. ೨೬ : ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಬಂಡವಾಳ ಹೂಡುವ ಜೊತೆಗೆ ನಿವೃತ್ತ ಕಾರ್ಮಿಕರ ವಸತಿ ಗೃಹಗಳ ಸಮಸ್ಯೆ ಬಗೆಹರಿಸುವಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಉಕ್ಕು ಸಚಿವರಿಗೆ ಮನವಿ ಮಾಡಿದ್ದು, ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ.
    ಕೇಂದ್ರ ಉಕ್ಕು ಸಚಿವ ರಾಮ್ ಚಂದ್ರ ಪ್ರಸಾದ್ ಸಿಂಗ್‌ರವರನ್ನು ಮಾ.೨೩ರಂದು ಭೇಟಿ ಮಾಡಿರುವ ಎಚ್.ಡಿ ದೇವೇಗೌಡರು, ಪ್ರಸ್ತುತ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದ್ದು, ಜೊತೆಗೆ ಅಧಿಕಾರಿಗಳು ಮತ್ತು ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಹೆಚ್ಚಿನ ಶ್ರಮವಹಿಸಿ ಹಗಲಿರುಳು ದುಡಿಯುತ್ತಿದ್ದಾರೆ. ಇದರಿಂದಾಗಿ ಅತಿ ಕಡಿಮೆ ಬಂಡವಾಳದಲ್ಲಿ ಕಾರ್ಖಾನೆ ಲಾಭದತ್ತ ಸಾಗುತ್ತಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದ್ದಾರೆ.
    ಶಿಥಿಲಗೊಂಡಿರುವ ಕಾರ್ಖಾನೆಯ ವಸತಿ ಗೃಹಗಳನ್ನು ಆಡಳಿತ ಮಂಡಳಿ ನಿವೃತ್ತ ಕಾರ್ಮಿಕರಿಗೆ ಲೈಸೆನ್ಸಿಂಗ್ ಸ್ಕೀಂ, ತಾತ್ಕಾಲಿಕ ರಿಟನ್ಷನ್ ಸ್ಕೀಂ ಮತ್ತು ಲಾಂಗ್ ಲೀಸ್ ಸೇರಿದಂತೆ ಇತರೆ ಸ್ಕೀಂಗಳ ಆಧಾರದಲ್ಲಿ ನೀಡಿದೆ. ಇದರಿಂದಾಗಿ ನಿವೃತ್ತ ಕಾರ್ಮಿಕರು ಬಾಡಿಗೆ ಪಾವತಿಸುವಾಗ ಮತ್ತು ಸ್ಕೀಂಗಳ ನವೀಕರಣ ಸಮಯದಲ್ಲಿ ಗೊಂದಲ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಗೊಂದಲಗಳ ನಿವಾರಣೆಗೆ ಲಾಂಗ್ ಲೀಸ್ ಜೊತೆಗೆ ಯೂನಿಫಾರಂ ಲೀಸ್ ನೀಡುವ ಮೂಲಕ ನಿವೃತ್ತ ಕಾರ್ಮಿಕರ ಹಿತ ಕಾಪಾಡುವಂತೆ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿರುವ ಸಚಿವರು ನಿವೃತ್ತ ಕಾರ್ಮಿಕರ ವಸತಿ ಗೃಹಗಳ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.  
    ಕೆಲವು ದಿನಗಳ ಹಿಂದೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ನೇತೃತ್ವದಲ್ಲಿ ಪದಾಧಿಕಾರಿಗಳಾದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಆರ್ ನಾಗರಾಜ ಹಾಗು ಇನ್ನಿತರರು ದೇವೇಗೌಡರನ್ನು ಸಂಪರ್ಕಿಸಿ ಮನವಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ದೇವೇಗೌಡರು ಉಕ್ಕು ಸಚಿವರನ್ನು ಭೇಟಿಯಾಗಿದ್ದಾರೆ.

No comments:

Post a Comment