ಭದ್ರಾವತಿ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ತಾಲೂಕು ಕಾಂಗ್ರೆಸ್ ಸೇವಾದಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸೇವಾದಳ ಅಧ್ಯಕ್ಷ ರಾಮಚಂದ್ರಪ್ಪ ಉದ್ಘಾಟಿಸಿದರು.
ಭದ್ರಾವತಿ, ಮಾ. ೨೦: ರಾಜ್ಯದಲ್ಲಿ ಪುನಃ ಸೇವಾದಳ ಸಂಘಟಿಸುವ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಲಾಗುತ್ತಿದೆ. ಸೇವಾದಳದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಪ್ರತಿಯೊಬ್ಬರು ಮುನ್ನಡೆಯಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸೇವಾದಳ ಅಧ್ಯಕ್ಷ ರಾಮಚಂದ್ರಪ್ಪ ಹೇಳಿದರು.
ಅವರು ಭಾನುವಾರ ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಕಾಂಗ್ರೆಸ್ ಸೇವಾದಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಭೆ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ರಾಜ್ಯದಲ್ಲಿ ಸೇವಾದಳ ಹೆಚ್ಚು ಸಂಘಟಿತವಾಗಬೇಕಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸೇವಾದಳದ ಕೊಡುಗೆ ಹೆಚ್ಚಿನದ್ದಾಗಿದ್ದು, ಈ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ನೀಡುವ ಸ್ಥಾನಮಾನಗಳನ್ನು ಸೇವಾದಳದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೂ ನೀಡಬೇಕು ಹಾಗು ಈ ಸಂಬಂಧ ಎಲ್ಲಾ ಜಿಲ್ಲೆಗಳಲ್ಲಿರುವ ಸೇವಾದಳ ಸಂಘಟಕರೊಂದಿಗೆ ಚರ್ಚಿಸಬೇಕೆಂದು ಕೋರಲಾಗಿದೆ. ಇದಕ್ಕೆ ಡಿ.ಕೆ ಶಿವಕುಮಾರ್ ಸಹ ಒಪ್ಪಿಗೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸೇವಾದಳದಲ್ಲಿ ಸೇವೆ ಸಲ್ಲಿಸುತ್ತಿರುವವರು ಇನ್ನೂ ಹೆಚ್ಚಿನ ಕ್ರಿಯಾಶೀಲರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
ದೇಶದಲ್ಲಿ ಸೇವಾದಳ ಜಾತಿ, ಮತ, ಭಾಷೆ ಬೇಧಭಾವಗಳಿಲ್ಲದ ತನ್ನದೇ ಆದ ತತ್ವ, ಸಿದ್ದಾಂತಗಳನ್ನು ಒಳಗೊಂಡಿರುವ ಸಂಘಟನೆಯಾಗಿದ್ದು, ಇದಕ್ಕೆ ಪ್ರತಿಯೊಬ್ಬರು ಚಿರಋಣಿಯಾಗಿರಬೇಕು. ಒಳ್ಳೆಯ ನಂಬಿಕೆ, ಅಭಿಪ್ರಾಯಗಳಿಗೆ ಬದ್ಧರಾಗಿ ಕೆಲಸ ಮಾಡಬೇಕು. ಆಗ ಮಾತ್ರ ಯಶಸ್ಸು ನಿರೀಕ್ಷಿಸಲು ಸಾಧ್ಯ. ಅಲ್ಲದೆ ಭವಿಷ್ಯದಲ್ಲಿ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿದೆ. ಸೇವಾದಳ ಪುನಃ ಸಂಘಟಿಸುವ ನಿಟ್ಟಿನಲ್ಲಿ ಪ್ರತಿಯೊಂದು ಜಿಲ್ಲೆಗಳಲ್ಲಿ ಶಿಬಿರಗಳನ್ನು ಆಯೋಜಿಸಲಾಗುವುದು. ಈ ಶಿಬಿರಕ್ಕೆ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ನಾಯಕರು ಸಹ ಪಾಲ್ಗೊಳ್ಳಲಿದ್ದಾರೆ. ಸೇವಾದಳ ಬಲಪಡಿಸುವ ನಿಟ್ಟಿನಲ್ಲಿ ತಮ್ಮೊಂದಿಗೆ ಕೈಜೋಡಿಸಲಿದ್ದಾರೆ ಎಂದರು.
ರಾಜ್ಯ ಮುಖ್ಯ ಸಂಘಟಕಿ ಸ್ಟ್ಯಾನ್ಲಿ ಡಿಸೋಜಾ ಮಾತನಾಡಿ, ತನ್ನದೇ ಆದ ತತ್ವ, ಸಿದ್ದಾಂತಗಳನ್ನು ಹೊಂದಿರುವ ಸೇವಾದಳ ತನ್ನ ಆಶಯಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ದೇಶದಲ್ಲಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರ ನಿಧನದ ನಂತರ ಸೇವಾದಳಕ್ಕೆ ನೀಡುತ್ತಿರುವ ಮಾನ್ಯತೆ ಸ್ವಲ್ಪಮಟ್ಟಿಗೆ ಕಡಿಯಾಗಿದೆ. ಈ ಹಿನ್ನಲೆಯಲ್ಲಿ ಇದೀಗ ರಾಜ್ಯಾಧ್ಯಕ್ಷರಾಗಿರುವ ರಾಮಚಂದ್ರಪ್ಪನವರು ಸೇವಾದಳ ಹೆಚ್ಚಿನ ರೀತಿಯಲ್ಲಿ ಸಂಘಟಿಸಲು ಮುಂದಾಗಿದ್ದಾರೆ. ಅವರು ಕೈಗೊಂಡಿರುವ ಕಾರ್ಯ ಯಶಸ್ವಿಯಾಗಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.
ಕೆಪಿಸಿಸಿ ಸೇವಾದಳ ಉಪಾಧ್ಯಕ್ಷ ವಿನಾಯಕಮೂರ್ತಿ, ಜಿಲ್ಲಾಧ್ಯಕ್ಷ ವೈ.ಎಚ್ ನಾಗರಾಜ್ ಮಾತನಾಡಿದರು. ಕೆಪಿಸಿಸಿ ಮುಖ್ಯ ಸಂಘಟನಾ ಕಾರ್ಯದರ್ಶಿ ಸ್ಟ್ಯಾನ್ಲಿ, ಶ್ರೀ ಕ್ಷೇತ್ರ ಭದ್ರಗಿರಿ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂದ್ರಘೋಷನ್, ತಾಲೂಕು ಅಧ್ಯಕ್ಷ ಡಿ. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪ್ರಮುಖರಾದ ನಾಗೇಶ್, ರವಿನಾಯ್ಕ ಸೇರಿದಂತೆ ಇನ್ನಿತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಜೀವ ಸ್ವಾಗತಿಸಿದರು. ಶಶಿಕಲಾ ವಂದಿಸಿದರು.
No comments:
Post a Comment