ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ೬೨೩ನೇ ವಚನಮಂಟಪ ಮತ್ತು ಕವಿ ಸುವರ್ಣಮ್ಮ ಕೆ. ಸದಾಶಿವಪ್ಪ ದತ್ತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಮಾ. ೨೧: ೧೨ನೇ ಶತಮಾನ ಕೇವಲ ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣೆ ಮಾತ್ರವಲ್ಲ. ಅದು ಮಾನವನ ಇತಿಹಾಸದ ಮಹತ್ತರ ಬದಲಾವಣೆಯಾಗಿದೆ ಎಂದು ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.
ಅವರು ಸೋಮವಾರ ಹೊಸಮನೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೨೩ನೇ ವಚನಮಂಟಪ ಮತ್ತು ಕವಿ ಸುವರ್ಣಮ್ಮ ಕೆ. ಸದಾಶಿವಪ್ಪ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತ್ಯಾತೀತ ನೆಲೆಗಟ್ಟಿನಲ್ಲಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಬುನಾದಿ ೧೨ನೇ ಶತಮಾನ ಎಂದರೆ ತಪ್ಪಾಗಲಾರದು. ಶರಣರ ಸ್ವಂತ ಜ್ಞಾನ, ಅನುಭವದ ಮೇಲೆ ಬರೆದ ವಚನಗಳ ಸಾಲು ಜೀವನದ ಮೌಲ್ಯಗಳನ್ನು ತಿಳಿಸುತ್ತವೆ. ಅಂದು ಜಾರಿಗೆ ತಂದ ಧಾರ್ಮಿಕ ಹಾಗು ಸಾಮಾಜಿಕ ಸುಧಾರಣೆಗಳ ಪರಿಣಾಮ ಶಿವಶರಣರು ಇಂದಿಗೂ ನಮ್ಮೊಂದಿಗೆ ಉಳಿದುಕೊಂಡಿದ್ದಾರೆ. ಇವರು ತೋರಿಸಿಕೊಟ್ಟಿರುವ ದಾರಿಯಲ್ಲಿ ಪ್ರಸ್ತುತ ನಾವೆಲ್ಲರೂ ಸಾಗಬೇಕಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ. ದತ್ತಿದಾನಿ ಜಗದೀಶ್ ಕವಿ, ಕತ್ತಲಗೆರೆ ತಿಮ್ಮಪ್ಪ, ಪ್ರಾಧ್ಯಾಪಕ ಮಲ್ಲಪ್ಪ ಸೇರಿದಂತೆ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ ವರ್ಗದವರು, ಕದಳಿ ಮಹಿಳಾ ವೇದಿಕೆ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸುಮಿಯಾ ತಾಜ್. ಆಯಿಶಾ ಸಿದ್ದಿಕಾ. ರೇವತಿ, ಕಾವ್ಯ ಸೇರಿದಂತೆ ಇನ್ನಿತರರು ವಚನಗಳ ವಿಶ್ಲೇಷಣೆ ಹಾಗೂ ಶರಣರ ಚಿಂತನೆ ಕುರಿತು ಮಾತನಾಡಿದರು.
No comments:
Post a Comment