Friday, April 1, 2022

ತಕ್ಷಣ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ : ತಾಲೂಕು ಆಡಳಿತಕ್ಕೆ ಮನವಿ

ವಿಳಂಬವಾದಲ್ಲಿ ಅಮರಣಾಂತರ ಉಪವಾಸ ಸತ್ಯಾಗ್ರಹ


ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ವಿಳಂಬವಾಗಿರುವುದನ್ನು ಖಂಡಿಸಿ ಶುಕ್ರವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಏ. ೧: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ವಿಳಂಬವಾಗಿರುವುದನ್ನು ಖಂಡಿಸಿ ಶುಕ್ರವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಅವರಿಗೆ ಮನವಿ ಸಲ್ಲಿಸಲಾಯಿತು.
    ನಿರಂತರವಾಗಿ ಹೋರಾಟ ನಡೆಸಿದ ಹಿನ್ನಲೆಯಲ್ಲಿ ಹಾಗು ಈ ಹಿಂದಿನ ನಗರಸಭೆ ಪೌರಾಯುಕ್ತರಾದ ಮನೋಹರ್‌ರವರ ಪರಿಶ್ರಮದಿಂದ ನಗರಸಭೆ ವ್ಯಾಪ್ತಿಯಲ್ಲಿ ೭೦ ಕೆರೆಗಳ ಬೌಂಡರಿ ನಿಗದಿಪಡಿಸುವ ಕಾರ್ಯಕ್ಕೆ ತಾಲೂಕು ಆಡಳಿತದಿಂದ ಆದೇಶವಾಗಿರುತ್ತದೆ. ಈ ಪೈಕಿ ಈಗಾಗಲೇ ಉಜ್ಜನಿಪುರದ ಬಳಸೋಕಟ್ಟೆ ಕೆರೆ, ಬಳಕಟ್ಟೆ ಕೆರೆ, ಜನ್ನಾಪುರ ಕೆರೆ, ಬುಳ್ಳಾಪುರದ ಸರ್ಕಾರಿ ಚಿಕ್ಕಯ್ಯನ ಕೆರೆ ಮತ್ತು ಗೌಡನಕಟ್ಟೆ ಕೆರೆ, ಸಿದ್ದಾಪುರದ ಬಳಸೋಕೆರೆ, ಬಿದಿರೊಡ್ಡು ಕೆರೆ ಮತ್ತು ಚಿಕ್ಕಯ್ಯನ ಕೆರೆ, ಬುಳ್ಳಾಪುರದ ಸರ್ಕಾರಿ ಕೆರೆ ಮತ್ತು ಬಾಳೆಕಟ್ಟೆ ಕೆರೆ, ಕಡದಕಟ್ಟೆ ಸರ್ಕಾರಿ ಕೆರೆ, ಬೊಮ್ಮನಕಟ್ಟೆ ಕೆರೆ, ದೊಡ್ಡಗೊಪ್ಪೇನಹಳ್ಳಿ ಸರ್ಕಾರಿ ಕೆರೆ, ಹೆಬ್ಬಂಡಿ ಕೆರೆ, ಕಣಕಟ್ಟೆ ಕೆರೆ, ಆನೆಕೊಪ್ಪ ಕೆರೆ, ಕವಲಗುಂದಿ ಯಳವಪ್ಪನಕೆರೆ, ಸೀಗೆಬಾಗಿ ಕೆರೆ, ಹೆಬ್ಬಂಡಿ ಕೆರೆ ಮತ್ತು ಹೊಸಮನೆ ಕೆರೆ ಸೇರಿದಂತೆ ಒಟ್ಟು ೨೩ ಕೆರೆಗಳ ಬೌಂಡರಿ ನಿಗದಿಪಡಿಸುವ ಕಾರ್ಯ ಮುಕ್ತಾಯಗೊಂಡಿರುತ್ತದೆ. ಆದರೆ ಇದುವರೆಗೂ ಒತ್ತುವರಿ ತೆರವು ಕಾರ್ಯ ನಡೆದಿರುವುದಿಲ್ಲ.
    ಇದೆ ರೀತಿ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಿಕೆರೆ, ಬಳಸೋಕೆರೆ, ಸಿರಿಯೂರು ಕೆರೆ ಹಾಗು ಹಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಬಳಸೋಕೆರೆ, ಕೆಂಚವೀರಪ್ಪನ ಕೆರೆ, ಬಸವನಕಟ್ಟೆ ಕೆರೆ ಮತ್ತು ನಾಯಕನ ಕೆರೆ ಸೇರಿದಂತೆ ಒಟ್ಟು ೭ ಕೆರೆಗಳ ಬೌಂಡರಿ ನಿಗದಿಪಡಿಸುವ ಕಾರ್ಯ ಮುಕ್ತಾಯಗೊಂಡಿರುತ್ತದೆ. ಆದರೆ ತೆರವು ಕಾರ್ಯಾಚರಣೆ ನಡೆದಿರುವುದಿಲ್ಲ. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಕೆರೆಗಳ ಒತ್ತುವರಿ ಕಾರ್ಯ ಬಿರುಸಿನಿಂದ ನಡೆದಿದೆ. ಆದರೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಳಂಬವಾಗುತ್ತಿದ್ದು, ಇದರಿಂದಾಗಿ ಕೇಂದ್ರ ಸರ್ಕಾರದ ಮಹತ್ವಾಂಕ್ಷೆ ಯೋಜನೆಗಳಲ್ಲಿ ಒಂದಾದ ಕ್ಯಾಚ್ ದ ರೈನ್(ಮಳೆ ನೀರು ಹಿಡಿಯಿರಿ) ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಯಿತು.
    ಮುಂದಿನ ವರ್ಷ ಮಾರ್ಚ್ ೨೨ರಂದು ಕ್ಷೇತ್ರದಲ್ಲಿ ಕೆರೆ ಕಟ್ಟೆಗಳ ಉತ್ಸವ ನಡೆಯುತ್ತಿದ್ದು, ಉತ್ಸವಕ್ಕೆ ಪೂರಕವೆಂಬಂತೆ ಹಾಗು ಕ್ಯಾಚ್ ದ ರೈನ್ ಯೋಜನೆಗೆ ಹಿಂಬುಕೊಡಲು ತಕ್ಷಣ ತಾಲೂಕು ಆಡಳಿತ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ತುರ್ತಾಗಿ ನಡೆಸಬೇಕು. ಒಂದು ವೇಳೆ ವಿಳಂಬವಾದಲ್ಲಿ ಮುಂದಿನ ದಿನಗಳಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಮುಖಂಡರುಗಳಾದ ಆರ್. ವೇಣುಗೋಪಾಲ್, ಮುರುಗೇಶ್, ಚಂದ್ರಶೇಖರ್, ಇಂದ್ರಾಣಿ, ಶೈಲಜಾ ಮಹೇಶ್, ಮೊಹಮ್ಮದ್ ಹನೀಫ್, ಪ್ರಸನ್ನ, ವೆಂಕಟೇಶ್, ಶಂಭೂಗೌಡ, ನಾಗೇಶ್, ಉಮೇಶ್‌ನಾಯ್ಕ, ಕುಮಾರನಾಯ್ಕ, ಕಸ್ನಾನಾಯ್ಕ, ಪಾಂಡುರಂಗೇಗೌಡ ಸೇರಿದಂತೆ ಇನ್ನೂ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

No comments:

Post a Comment