Wednesday, April 20, 2022

ವಿಕಲಚೇತನರಿಗೂ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಕೊಡಿ : ಗೀತಾ ರಾಜ್‌ಕುಮಾರ್

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಖಾನೆಗಳಲ್ಲಿ ಉತ್ಪಾದನೆಗೊಂಡ ಅಡಕೆ ತಟ್ಟೆಗಳನ್ನು ಮಾರಾಟಕ್ಕೆ ಸಿದ್ದಗೊಳಿಸುವ ತರಬೇತಿಗೆ ಬುಧವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಏ. ೨೦: ವಿಕಲಚೇತನರು ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಹಾಗು ಆರ್ಥಿಕವಾಗಿ ಬಲಗೊಳ್ಳಲು ಸ್ವಯಂ ಉದ್ಯೋಗಗಳು ಅವಶ್ಯಕವಾಗಿವೆ ಎಂದು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಹೇಳಿದರು.
    ಅವರು ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಖಾನೆಗಳಲ್ಲಿ ಉತ್ಪಾದನೆಗೊಂಡ ಅಡಕೆ ತಟ್ಟೆಗಳನ್ನು ಮಾರಾಟಕ್ಕೆ ಸಿದ್ದಗೊಳಿಸುವ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
    ವಿಕಲಚೇತನರು ಸಹ ಪ್ರತಿಭಾವಂತರಿದ್ದು, ಇವರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕೆಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಪೌರಾಯುಕ್ತ ಕೆ. ಪರಮೇಶ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ಅಂಧ ವಿಕಲಚೇತನರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ಮೂಲಕ ನೆರವಿಗೆ ಮುಂದಾಗಬೇಕೆಂದರು.  
    ತಮಿಳುನಾಡಿನ ವಿ.ಎಲ್ ವೆಂಚರ್‍ಸ್ ತಿರುಪ್ಪೂರು ಕಂಪನಿ ವ್ಯವಸ್ಥಾಪಕ ಸತ್ಯ ಪ್ರಭು, ಶಿಕ್ಷಣ ಇಲಾಖೆಯ ಸಿಆರ್‌ಪಿ ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು.
    ತರಬೇತಿ ಹೇಗೆ?
    ಕಾರ್ಖಾನೆಯಲ್ಲಿ ಉತ್ಪಾದನೆಗೊಂಡು ಬರುವ ತಟ್ಟೆಗಳಲ್ಲಿ ಬಳಕೆಗೆ ಯೋಗ್ಯವಾದ ತಟ್ಟೆಗಳನ್ನು ಆಯ್ಕೆಮಾಡಿ, ಅವುಗಳನ್ನು ಸ್ವಚ್ಛಗೊಳಿಸಿ ನಂತರ ಎಣಿಕೆ ಮಾಡಿ ಅವುಗಳನ್ನು ಮಾರಾಟಕ್ಕೆ ಸಿದ್ದಗೊಳಿಸುವುದಾಗಿದೆ. ಈ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಇದರ ಆಧಾರದ ಮೇಲೆ ಸ್ವಯಂ ಉದ್ಯೋಗ ಕೈಗೊಳ್ಳಲು ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯ ಸಹ ಲಭ್ಯವಾಗಲಿದೆ.
    ನೆರವಿಗೆ ಮುಂದಾದ ವಿ.ಎಲ್ ವೆಂಚರ್‍ಸ್ ತಿರುಪ್ಪೂರು ಕಂಪನಿ :
    ಅಂಧ ವಿಕಲಚೇತನರ ನೆರವಿಗೆ ಮುಂದಾಗಬೇಕೆಂಬ ಉದ್ದೇಶದೊಂದಿಗೆ ತಮಿಳುನಾಡಿನ ವಿ.ಎಲ್ ವೆಂಚರ್‍ಸ್ ತಿರುಪ್ಪೂರು ಕಂಪನಿ ವ್ಯವಸ್ಥಾಪಕ ಸತ್ಯ ಪ್ರಭು ಜಿಲ್ಲೆಯ ಸುತ್ತಮುತ್ತಲಿನ ಭಾಗಗಳಲ್ಲಿ ಅಡಕೆ ತಟ್ಟೆ ಉತ್ಪಾದನಾ ಕಂಪನಿಗಳಿಂದ ತಟ್ಟೆಗಳನ್ನು ಖರೀದಿಸಿ ಅವುಗಳನ್ನು ಮಾರಾಟಕ್ಕೆ ಸಿದ್ದಪಡಿಸಲು ಅಂಧ ವಿಕಲಚೇನರಿಗೆ ನೀಡುತ್ತಿದ್ದಾರೆ. ಕಳೆದ ಸುಮಾರು ೩ ದಿನಗಳಿಂದ ಸುಮಾರು ೧ ಲಕ್ಷ ತಟ್ಟೆಗಳನ್ನು ಮಾರಾಟಕ್ಕೆ  ಸಿದ್ದಗೊಳಿಸುವಲ್ಲಿ ೧೨ ಅಂಧ ವಿಕಲಚೇತನರು ಯಶಸ್ವಿಯಾಗಿದ್ದಾರೆ. ತರಬೇತಿ ಸುಮಾರು ೩ ತಿಂಗಳವರೆಗೆ ನಡೆಯಲಿದೆ.

No comments:

Post a Comment