ಮೇ.೩ರಿಂದ ೬ ದಿನಗಳ ಕಾಲ ಜಾತ್ರಾ ಮಹೋತ್ಸವ
ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಹಳದಮ್ಮ ದೇವಿ ದೇವಸ್ಥಾನ.
* ಅನಂತಕುಮಾರ್
ಭದ್ರಾವತಿ: ೩೩ ಗ್ರಾಮ ದೇವತೆಗಳಿಗೆ ಅದಿದೇವತೆ ಎಂಬ ಹೆಗ್ಗಳಿಕೆಗೆ ಪಾತ್ರಳಾದವಳು ಹಳೇನಗರದ ಶ್ರೀ ಹಳದಮ್ಮ ದೇವಿ. ಭವ್ಯ ಪರಂಪರೆ ಹೊಂದಿರುವ ಶ್ರೀ ಹಳದಮ್ಮ ದೇವಿ ಇಂದಿಗೂ ಜನಮಾನಸದಲ್ಲಿ ನೆಲೆ ನಿಂತಿದ್ದಾಳೆ. ಪ್ರತಿ ೨ ವರ್ಷಕ್ಕೊಮ್ಮೆ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಭಕ್ತರು ಜಾತ್ರಾ ಮಹೋತ್ಸವವನ್ನು ಊರ ಹಬ್ಬವನ್ನಾಗಿಸಿಕೊಂಡು ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡುತ್ತಿದ್ದಾರೆ.
ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿ ಹಳೇನಗರದ ಹೃದಯ ಭಾಗದಲ್ಲಿರುವ ದೇವಸ್ಥಾನದ ಸುತ್ತಮುತ್ತ ಪ್ರಸ್ತುತ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿನಿಂತಿವೆ. ದೇವಸ್ಥಾನವು ತನ್ನದೇ ಆದ ವಿಶಿಷ್ಟತೆಯಿಂದ ಕೂಡಿದ್ದು, ಇಂದಿಗೂ ತಲಾ ತಲಾಂತರಗಳಿಂದ ಶ್ರೀ ದೇವಿಯನ್ನು ಆರಾಧಿಸಿಕೊಂಡು ಬಂದಿರುವ ಭಕ್ತಾಧಿಗಳು ದೇವಸ್ಥಾನದ ಸುತ್ತಮುತ್ತ ನೆಲೆಸಿದ್ದಾರೆ. ದೇವಸ್ಥಾನದ ಸ್ವಲ್ಪ ದೂರದಲ್ಲಿ ೧೨ನೇ ಶತಮಾನದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನವಿದ್ದು, ಶ್ರೀ ಹಳದಮ್ಮ ದೇವಸ್ಥಾನಕ್ಕೆ ಮುಕುಟ ಕಳಶದಂತಿದೆ.
ಶಕ್ತಿ ದೇವತೆ:
ಶ್ರೀ ಹಳದಮ್ಮ ದೇವಿ ಶಕ್ತಿ ದೇವತೆಯಾಗಿದ್ದು, ೩೩ ಗ್ರಾಮಗಳ ರಕ್ಷಣೆಯನ್ನು ಮಾಡುವ ಕಾಯಕದಲ್ಲಿ ಶ್ರೀ ದೇವಿ ತೊಡಗಿದ್ದಾಳೆ. ಶ್ರೀ ದೇವಿಯ ಶಕ್ತಿ ಆಪಾರವಾದದ್ದು, ಮೊರೆ ಹೋದವರ ಕಷ್ಟ ಕಾರ್ಪಣ್ಯಗಳು ಕ್ಷಣಾರ್ಧದಲ್ಲಿ ನಿವಾರಣೆಯಾಗುತ್ತದೆ ಎಂದು ತಲಾ ತಲಾಂತರಗಳಿಂದ ಆರಾಧಿಸಿಕೊಂಡು ಬರುತ್ತಿರುವ ಶ್ರೀ ದೇವಿಯ ಭಕ್ತಾಧಿಗಳಿಂದ ಕೇಳಿ ಬರುವ ಮಾತು. ಅಂದು ಗ್ರಾಮಗಳಲ್ಲಿ ಭೀಕರ ರೋಗ, ಬರಗಾಲ, ಕ್ಷಾಮ, ಶತ್ರುಗಳ ದಾಳಿ ಸೇರಿದಂತೆ ಇನ್ನಿತರೆ ಗಂಡಾಂತಗಳಿಂದಾಗಿ ಮುಕ್ತಿ ಹೊಂದಲು ಗ್ರಾಮಸ್ಥರು ಶ್ರೀ ದೇವಿಯ ಮೋರೆ ಹೋಗುತ್ತಿದ್ದರು ಎನ್ನಲಾಗಿದೆ.
ದೇವಸ್ಥಾನದ ವೈಶಿಷ್ಟ್ಯಗಳು:
ದೇವಸ್ಥಾನವು ಪೂರ್ವಾಭಿಮುಖವಾಗಿದ್ದು, ಶ್ರೀ ಹಳದಮ್ಮ ದೇವಿಯ ಅಕ್ಕ-ಪಕ್ಕ ಕೆರೆಕೋಡಮ್ಮ, ಕೆಂಪಮ್ಮ ಮತ್ತು ಮಾತಂಗಮ್ಮ ದೇವಿಯರು ನೆಲೆನಿಂತಿದ್ದಾರೆ. ಶಿಥಿಲಗೊಂಡಿದ್ದ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ೧೯೮೩ರಿಂದ ಆರಂಭಗೊಂಡಿದ್ದು, ಸಮಾಜ ಸೇವಕ ಸಿ.ಮಹೇಶ್ ಕುಮಾರ್ ನೇತೃತ್ವದಲ್ಲಿ ನಿರ್ಮಾಣಗೊಂಡು ಶ್ರೀ ಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳಿಂದ ೨೦೧೦ರಲ್ಲಿ ಲೋಕಾರ್ಪಣೆಗೊಂಡ ೫೭ ಅಡಿ ಎತ್ತರದ ರಾಜ ಗೋಪುರವು ಜಿಲ್ಲೆಯಲ್ಲಿಯೇ ಅತಿ ಎತ್ತರದ ರಾಜಗೋಪುರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೇವಸ್ಥಾನಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವ ಜೊತೆಗೆ ಪ್ರತಿ ೨ ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ನಗರಸಭೆ ವತಿಯಿಂದ ಅನುದಾನ ಬಿಡುಗಡೆಗೊಳಿಸುವಂತೆ ಈಗಾಗಲೇ ಸಾಮಾನ್ಯಸಭೆಯಲ್ಲಿ ಒತ್ತಾಯಿಸಲಾಗಿದೆ.
- ಆರ್. ಶ್ರೇಯಸ್, ನಗರಸಭಾ ಸದಸ್ಯರು, ಭದ್ರಾವತಿ.
ಊರಹಬ್ಬವಾಗಿ ಬದಲಾದ ಜಾತ್ರಾ ಮಹೋತ್ಸವ :
ಪ್ರತಿ ೨ ವರ್ಷಕ್ಕೊಮ್ಮೆ ಶ್ರೀ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಸಿಡಿ ಉತ್ಸವ ಎಲ್ಲರನ್ನು ಆಕರ್ಷಿಸುತ್ತದೆ. ನಗರ ಹಾಗು ಗ್ರಾಮಾಂತರ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಇದರೊಂದಿಗೆ ಸಾಂಪ್ರದಾಯಿಕ ಕುಸ್ತಿ ಪಂದ್ಯಾವಳಿ ಸಹ ಆಯೋಜಿಸಿಕೊಂಡು ಬರಲಾಗುತ್ತಿದೆ. ರಾಷ್ಟ್ರ ಹಾಗು ರಾಜ್ಯಮಟ್ಟದ ಕುಸ್ತಿಪಟುಗಳು ಪಾಲ್ಗೊಳ್ಳುವುದು ವಿಶೇಷವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಾತ್ರಾ ಮಹೋತ್ಸವವನ್ನು ಊರಹಬ್ಬವನ್ನಾಗಿಸಿಕೊಂಡು ಸಂಭ್ರಮಾಚರಣೆ ನಡೆಸಲಾಗುತ್ತಿದೆ.
ಮೂಲ ಸೌಕರ್ಯ ಕೊರತೆ:
ದೇವಸ್ಥಾನಕ್ಕೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸುತ್ತಾರೆ. ಆದರೆ ಮೂಲ ಸೌಕರ್ಯ ಕೊರತೆ ಕಂಡು ಬರುತ್ತಿದೆ. ಭಕ್ತರಿಗೆ ಶುದ್ಧ ಕುಡಿಯುವ ನೀರು ಹಾಗು ಸಭೆ-ಸಮಾರಂಭಗಳನ್ನು ನಡೆಸಲು ಸಮುದಾಯ ಭವನ ಅಗತ್ಯವಿದೆ. ಅಲ್ಲದೆ ಗ್ರಾಮ ದೇವತೆಗೆ ಇದುವರೆಗೂ ಎಲ್ಲಿಯೂ ಸ್ವಾಗತ ದ್ವಾರ (ಕಮಾನು) ನಿರ್ಮಾಣ ಮಾಡಿಲ್ಲ. ದೇವಿಯ ಭವ್ಯ ಪರಂಪರೆ ಕುರಿತ ಮಾಹಿತಿ ಸಹ ಅನಾವರಣಗೊಳಿಸಿಲ್ಲ. ಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ.
ಮೇ.೩ ರಿಂದ ಜಾತ್ರಾ ಮಹೋತ್ಸವ :
ಜಾತ್ರಾಮಹೋತ್ಸವ ಮೇ.೩ ರಿಂದ ೮ರವರೆಗೆ ೬ ದಿನಗಳ ಕಾಲ ನಡೆಯಲಿದ್ದು, ಮೇ. ೩ರಂದು ಬೆಳಗ್ಗೆ ೯ ಗಂಟೆಗೆ ಅಭಿಷೇಕ, ಮಹಾಮಂಗಳಾರತಿ ಹಾಗೂ ರಾತ್ರಿ ೮ ಗಂಟೆಗೆ ರಾಜಬೀದಿ ಉತ್ಸವ ನಡೆಯಲಿದ್ದು, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಸದಸ್ಯರಾದ ಶಶಿಕಲಾ ನಾರಾಯಣಪ್ಪ, ಅನುಪಮ ಚನ್ನೇಶ್, ಆರ್. ಶ್ರೇಯಸ್(ಚಿಟ್ಟೆ), ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ದೇವಸ್ಥಾನಕ್ಕೆ ಅಮ್ಮನವರ ಕಮಾನು, ಸಮುದಾಯ ಭವನ ಅಗತ್ಯವಿದ್ದು, ಈ ಕುರಿತು ದೇವಸ್ಥಾನ ಸೇವಾ ಸಮಿತಿ ಗಮನ ಹರಿಸುವಂತೆ ಮನವಿ ಮಾಡುತ್ತೇನೆ. ಅಲ್ಲದೆ ಭಕ್ತರು, ದಾನಿಗಳು ಹಾಗು ಜನಪ್ರತಿನಿಧಿಗಳು ಹೆಚ್ಚಿನ ಸಹಕಾರ ನೀಡುವಂತೆ ಕೋರುತ್ತೇನೆ.
- ಗಿರೀಶ್, ಅಧ್ಯಕ್ಷರು, ಕೇಸರಿಪಡೆ, ಭದ್ರಾವತಿ
ಮೇ.೪ರಂದು ಬೆಳಗ್ಗೆ ೫ ಗಂಟೆಗೆ ಗಂಗಾಪೂಜೆ ಹಾಗೂ ಗದ್ದುಗೆ ಪೂಜೆಯೊಂದಿಗೆ ಅಮ್ಮನವರ ದೇವಸ್ಥಾನ ಪ್ರವೇಶ ಹಾಗು ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. ಮೆ.೫ ರಂದು ಬೆಳಗ್ಗೆ ೫.೩೦ಕ್ಕೆ ದೇವಸ್ಥಾನದ ಆವರಣದಲ್ಲಿ ಸಿಡಿ ಉತ್ಸವ ನಡೆಯಲಿದ್ದು, ದೇವಸ್ಥಾನ ಸೇವಾ ಸಮಿತಿ ಗೌರವಾಧ್ಯಕ್ಷ ಸಿ. ಮಹೇಶ್‌ಕುಮಾರ್, ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಕುಮಾರ್, ಎಸ್. ಮಣಿಶೇಖರ್, ಮಾರುತಿ ಮೆಡಿಕಲ್ ಆನಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
ಮೇ. ೬ರಂದು ಮಧ್ಯಾಹ್ನ ೩ ಗಂಟೆಗೆ ಕನಕ ಮಂಟಪ ಮೈದಾನದಲ್ಲಿ ಅಂತರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಮೇ.೮ರ ವರೆಗೆ ೩ ದಿನಗಳ ಕಾಲ ನಡೆಯಲಿದೆ.
ಮೇ.೭ರಂದು ಬೆಳಿಗ್ಗೆ ಅಮ್ಮನವರ ಉತ್ಸವ ಮೂರ್ತಿಗಳ ಮೆರವಣಿಗೆ ಹಾಗು ಓಕಳಿ ನಡೆಯಲಿದ್ದು, ನಂತರ ಧಾರ್ಮಿಕ ಆಚರಣೆಗಳಿಗೆ ತೆರೆ ಬೀಳಲಿದೆ.
No comments:
Post a Comment