ಸೋಮವಾರ, ಜೂನ್ 13, 2022

ಆಶ್ರಯ ಬಡಾವಣೆ ಸರ್ಕಾರಿ ಶಾಲೆ ಪುಂಡ-ಪೋಕರಿಗಳ ಆಶ್ರಯ ತಾಣ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.
    ಭದ್ರಾವತಿ, ಜೂ. ೧೩ : ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಹಳೇಯ ವಿದ್ಯಾರ್ಥಿಗಳು, ದಾನಿಗಳು ಹಾಗು ಪೋಷಕರು ಮುಂದೆ ಬರುತ್ತಿದ್ದಾರೆ. ಆದರೆ ಇಲ್ಲೊಂದು ಸರ್ಕಾರಿ ಶಾಲೆ ಪುಂಡ-ಪೋಕರಿಗಳಿಗೆ ಆಶ್ರಯ ತಾಣವಾಗಿ ಮಾರ್ಪಾಡಾಗಿದೆ. ಈ ಶಾಲೆಯ ಸ್ಥಿತಿ ಕೇಳುವವರು ಯಾರು ಇಲ್ಲವಾಗಿದೆ.


ಭದ್ರಾವತಿ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುಂಡ-ಪೋಕರಿಗಳ ಆಶ್ರಯ ತಾಣವಾಗಿರುವುದು.
    ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ಸಮೀಪದಲ್ಲಿರುವ ಆಶ್ರಯ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸ್ಥಿತಿ ಕೇಳುವವರು ಯಾರು ಇಲ್ಲವಾಗಿದ್ದು, ಪುಂಡ-ಪೋಕರಿಗಳ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ರೂಪುಗೊಂಡಿದೆ. ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಸಹ ಶಾಲೆ ಸುತ್ತ ಕಾಂಪೌಂಡ್ ಇಲ್ಲವಾಗಿದೆ. ಇದರಿಂದಾಗಿ ಪುಂಡ-ಪೋಕರಿಗಳು ಶಾಲೆಯನ್ನು ಪ್ರವೇಶಿಸಿ ಶಾಲೆ ಕೊಠಡಿಗಳ ಮುಂಭಾಗದಲ್ಲಿಯೇ ಮದ್ಯಪಾನ, ಧೂಮಪಾನ ಸೇವನೆ ನಡೆಸುತ್ತಿದ್ದಾರೆ. ಜೊತೆಗೆ ಎಲೆ ಅಡಕೆ, ಗುಟ್ಕಾ, ಪಾನ್‌ಮಸಾಲ ಜಗಿದು ಅಲ್ಲಿಯೇ ಉಗಿಯುತ್ತಿದ್ದಾರೆ. ಇದರಿಂದಾಗಿ ಶಾಲಾ ಪರಿಸರ ಹಾಳಾಗುತ್ತಿದೆ.


ಭದ್ರಾವತಿ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶೌಚಾಲಯಕ್ಕೆ ಅನಧಿಕೃತವಾಗಿ ಪ್ರವೇಶಿಸಿ ಪರಿಕರಗಳನ್ನು ನಾಶಪಡಿಸಿರುವುದು.
    ಅಲ್ಲದೆ ಅನಧಿಕೃತವಾಗಿ ಶೌಚಾಲಯಗಳಿಗೆ ಪ್ರವೇಶಿಸಿ ಪರಿಕರಗಳನ್ನು ನಾಶಪಡಿಸುತ್ತಿದ್ದಾರೆ. ಶೌಚಾಲಯದಲ್ಲೂ ಸ್ವಚ್ಚತೆ ಇಲ್ಲದಂತೆ ಮಾಡುತ್ತಿದ್ದಾರೆ. ಇದರಿಂದಾಗಿ ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ, ಸಿಬ್ಬಂದಿಗಳಿಗೆ ಕಿರಿಕಿರಿಯಾಗುತ್ತಿದೆ. ಈ ಶಾಲೆ ಆವರಣದಲ್ಲಿ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಸಾಧ್ಯತೆ ಹೆಚ್ಚಾಗಿದ್ದು, ಈ ಶಾಲೆಗೆ ಚಿಕ್ಕಮಕ್ಕಳು ಹೆಚ್ಚಾಗಿ ಬರುವ ಹಿನ್ನಲೆಯಲ್ಲಿ ಈ ರೀತಿಯ ಅನೈತಿಕ ಚಟುವಟಿಕೆಗಳು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರು ಸಾಧ್ಯತೆ ಕಂಡು ಬರುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
.

 ಯಾರೋ ಕೆಲವರು ರಾತ್ರಿ ವೇಳೆ ಬಂದು ಮದ್ಯಪಾನ, ಧೂಮಪಾನ ಸೇವನೆಯಲ್ಲಿ ತೊಡಗುತ್ತಾರೆಂಬ ಬಗ್ಗೆ ಮಾಹಿತಿ ಇದೆ. ಆದರೆ ಈ ಕುರಿತು ಅಧಿಕೃತವಾಗಿ ಯಾರು ದೂರು ನೀಡಿಲ್ಲ. ಆದರೂ ಸಹ ಪೊಲೀಸ್ ಇಲಾಖೆ ವತಿಯಿಂದ ಕೈಗೊಳ್ಳಬೇಕಾಗಿರುವ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
                                                                             - ರಾಘವೇಂದ್ರ ಕಾಂಡಿಕೆ, ನಗರ ಪೊಲೀಸ್ ವೃತ್ತ ನಿರೀಕ್ಷಕ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ