Thursday, July 14, 2022

ಧಾನ್ಯಕ್ಕೆ ಶೇ.5 ಜಿಎಸ್ ಟಿ ವಿರೋಧಿಸಿ 2 ದಿನ ಹೋರಾಟ

 


ಭದ್ರಾವತಿ, ಜು. ೧೪: ಕೇಂದ್ರ ಸರ್ಕಾರ ಧಾನ್ಯಕ್ಕೆ ಶೇ.೫ರಷ್ಟು ಜಿಎಸ್‌ಟಿ ವಿಧಿಸಿರುವುದು ಸರಿಯಲ್ಲ. ತಕ್ಷಣ ಹಿಂಪಡೆದುಕೊಳ್ಳುವಂತೆ ಆಗ್ರಹಿಸಿ ದೇಶಾದ್ಯಂತ ಜು.೧೫ ಮತ್ತು ೧೬ ಎರಡು ದಿನ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರೈಸ್‌ಮಿಲ್ ಮಾಲೀಕರ ಸಂಘ ಹಾಗು ದವಸ ಧಾನ್ಯ, ಅಕ್ಕಿ ವರ್ತಕರ ಸಂಘದ ಪ್ರಮುಖರು ತಿಳಿಸಿದರು.

      ಗುರುವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೇ.೫ರಷ್ಟು ಜಿಎಸ್‌ಟಿ ಪರಿಣಾಮ ರೈತರು, ವರ್ತಕರು ಮತ್ತು ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಈ ಹಿಂದೆ ಧಾನ್ಯಕ್ಕೆ ಯಾವುದೇ ಜಿಎಸ್‌ಟಿ ವಿಧಿಸದ ಕಾರಣ ಅಕ್ಕಿ, ಬೇಳೆಕಾಳು ಸೇರಿದಂತೆ ಜನಸಾಮಾನ್ಯರಿಗೆ ಅತಿ ಅಗತ್ಯವಿರುವ ಧ್ಯಾನ ಕಡಿಮೆ ಬೆಲೆಯಲ್ಲಿ ತಲುಪಿಸಲು ಸಾಧ್ಯವಾಗುತ್ತಿತ್ತು. ಇದೀಗ ಜಿಎಸ್‌ಟಿ ವಿಧಿಸಿರುವುದರಿಂದ ಧಾನ್ಯ ಮಾರಾಟ ಉದ್ಯಮಗಳು, ಧಾನ್ಯ ಉತ್ಪಾದಿಸುವ ರೈತರು ಹಾಗು ಧಾನ್ಯ ಕೊಂಡುಕೊಳ್ಳುವ ಜನ ಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ ಎಂದರು.

       ಜಿಎಸ್‌ಟಿ ಪರಿಣಾಮ ಈಗಾಗಲೇ ರೈಸ್‌ಮಿಲ್ ಮಾಲೀಕರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದು, ಬಹಳಷ್ಟು ರೈಸ್ ಮಿಲ್‌ಗಳು ಮುಚ್ಚಿ ಹೋಗಿವೆ. ಇದೀಗ ರೈತರು, ಜನಸಾಮಾನ್ಯರು ಸಹ ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ಹಿನ್ನಲೆಯಲ್ಲಿ ವರ್ತಕರು ಹಾಗು ಮಿಲ್ ಮಾಲೀಕರು ಸ್ವಯಂ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
      ಪ್ರಮುಖರಾದ ರೈಸ್ ಮಾಲೀಕರ ಸಂಘದ ಅಧ್ಯಕ್ಷ ಡಾ. ಎನ್‌ಟಿಸಿ ನಾಗೇಶ್, ಗಿರಿರಾಜ್, ಹರೀಶ್‌ಬಾಬು, ಅಭಯ್‌ರಾಜ್, ಮಹಮದ್ ಖಲೀಲ್, ದಿಲೀಪ್‌ಕುಮಾರ್ ಜೈನ್, ಸಂದೇಶ್ ಮೆಹ್ತಾ, ಭರತ್‌ಕುಮಾರ್, ಶಂಕರ್, ಸತ್ಯನಾರಾಯಣ್, ಧನಂಜಯ ಮತ್ತು ರಂಗನಾಥ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

No comments:

Post a Comment