Tuesday, July 12, 2022

ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಎಪಿ ಸಂಘಟನೆಗೆ ಒತ್ತು : ಜು.೧೪ರಂದು ಕಾರ್ಯಾಲಯ ಉದ್ಘಾಟನೆ


ಭದ್ರಾವತಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಎಪಿ ಪಕ್ಷದ ಮುಖಂಡ ಹಾಗು ಚುನಾವಣಾ ಆಕಾಂಕ್ಷಿ ಮಾರುತಿ ಮೆಡಿಕಲ್ ಆನಂದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  
    ಭದ್ರಾವತಿ, ಜು. ೧೨: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಲು ಮುಂದಾಗಿದೆ ಎಂದು ಪಕ್ಷದ ಮುಖಂಡ ಹಾಗು ಚುನಾವಣಾ ಆಕಾಂಕ್ಷಿ ಮಾರುತಿ ಮೆಡಿಕಲ್ ಆನಂದ್ ತಿಳಿಸಿದರು.
      ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಮ್ ಆದ್ಮಿ ಪಾರ್ಟಿ ವಿಭಿನ್ನವಾಗಿದ್ದು, ಭ್ರಷ್ಟಾಚಾರ ಮುಕ್ತ ಪಕ್ಷವಾಗಿದೆ. ಈ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧನಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಆದರೆ ಈ ಎರಡು ಪಕ್ಷವನ್ನು ನನ್ನನ್ನು ಆರ್ಥಿಕವಾಗಿ ದುರ್ಬಳಕೆ ಮಾಡಿಕೊಳ್ಳುವ ಜೊತೆಗೆ ಚುನಾವಣೆ ಸಂದರ್ಭದಲ್ಲಿ ಕಡೆಗಣಿಸಿವೆ ಎಂದು ಆರೋಪಿಸಿದರು.
      ಕ್ಷೇತ್ರದಲ್ಲಿ ಭ್ರಷ್ಟಾಚಾರ, ಅನೈತಿಕತೆ ಹೆಚ್ಚಾಗಿದ್ದು, ಪ್ರಾಮಾಣಿಕವಾಗಿ ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಆಶಯ ಹೊಂದಿದ್ದೇನೆ. ಕ್ಷೇತ್ರದಲ್ಲಿ ನಾನು ಕೈಗೊಂಡಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ಆಮ್ ಆದ್ಮಿ ಪಾರ್ಟಿ ಗುರುತಿಸಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಲಭಿಸುವ ವಿಶ್ವಾಸವಿದೆ ಎಂದರು.
      ಜು.೧೪ರಂದು ಕಾರ್ಯಾಲಯ ಉದ್ಘಾಟನೆ :
      ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಕಾರ್ಯಾಲಯ ನಗರದ ರಂಗಪ್ಪ ವೃತ್ತದ ಸಮೀಪದಲ್ಲಿರುವ ಮಾರುತಿ ಮೆಡಿಕಲ್ಸ್ ಬಿಲ್ಡಿಂಗ್‌ನಲ್ಲಿ ಆರಂಭಗೊಳ್ಳಲಿದ್ದು, ಈ ಸಂಬಂಧ ಜು.೧೪ರಂದು ಸಂಜೆ ೪ ಗಂಟೆಗೆ ಹಮ್ಮಿಕೊಳ್ಳಲಾಗಿರುವ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ದೆಹಲಿ ಶಾಸಕ ದಿಲೀಪ್ ಪಾಂಡೆ, ಪಂಜಾಬ್ ಶಾಸಕ ಪುನೀತ್ ಸಿಂಗ್, ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ರಾಜ್ಯ ಉಪಾಧ್ಯಕ್ಷರಾದ ಭಾಸ್ಕರ್‌ರಾವ್, ವಿಜಯಶರ್ಮ, ರಾಜ್ಯ ವಕ್ತಾರ ಮಥಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜೀವ ಸಹನಿ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, ಶಿವಮೊಗ್ಗ-ಚಿಕ್ಕಮಗಳೂರು-ಹಾಸನ ಜಿಲ್ಲಾ ವಲಯ ಉಸ್ತುವಾರಿ ದಿವಾಕರ, ಜಿಲ್ಲಾ ವಲಯ ಉಸ್ತುವಾರಿ ಗೋಪಾಲ, ಜಿಲ್ಲಾ ಮುಖಂಡ ಎಚ್. ರವಿಕುಮಾರ್, ತಾಲೂಕು ಅಧ್ಯಕ್ಷ ಬಿ.ಕೆ ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದರು.
       ಪಕ್ಷದ ತಾಲೂಕು ಬಿ.ಕೆ ರಮೇಶ್, ಪ್ರಮುಖರಾದ ಪರಮೇಶ್ವರಚಾರ್, ಎನ್.ಪಿ ಜೋಸೆಫ್, ಎ. ಮಸ್ತಾನ್, ಅಬ್ದುಲ್ ಖದೀರ್, ಜಾವಿದ್, ರೇಷ್ಮಬಾನು, ನಾಗಮಣಿ, ಜ್ಯೋತಿ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

No comments:

Post a Comment