ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಬುಧವಾರ ರಾಜ್ಯ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ನೇತೃತ್ವದಲ್ಲಿ ಭದ್ರಾವತಿಯಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಆ. ೧೭ : ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕೆಂದು ರಾಜ್ಯ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ಮನವಿ ಮಾಡಿದರು.
ಅವರು ನಗರದಲ್ಲಿ ಬುಧವಾರ ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಪಥಸಂಚಲನದಲ್ಲಿ ಪಾಲ್ಗೊಂಡು ಮಾತನಾಡಿದರು.
ಪೊಲೀಸ್ ಇಲಾಖೆ ಸದಾ ಕಾಲ ನಿಮ್ಮ ರಕ್ಷಣೆಗೆ ಇದೆ ಎಂಬ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸುವ ಉದ್ದೇಶದಿಂದ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಲ್ಲಿ ಪಥಸಂಚಲನ ನಡೆಸಲಾಗುತ್ತಿದೆ. ಇದು ೩ನೇ ಪಥಸಂಚಲನವಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ಎಲ್ಲಾ ವರ್ಗದ ನೌಕರರಿಗೆ ಹಾಗು ಸಮಸ್ತ ನಾಗರೀಕರಿಗೆ ಯಾವುದೇ ರೀತಿ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಚ್ಚರವಹಿಸಿದ್ದು, ಅಗತ್ಯವಿರುವ ಸಿಬ್ಬಂದಿಗಳನ್ನು ಸಹ ನಿಯೋಜನೆಗೊಳಿಸಿದೆ. ಇದಕ್ಕೆ ಪೂರಕವೆಂಬಂತೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕೆಂದರು.
ತಪ್ಪು ಮಾಡಿದವರು ಯಾರೇ ಇರಲಿ ಅವರನ್ನು ಬಿಡುವುದಿಲ್ಲ :
ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟುಮಾಡಿರುವ ಯಾರೇ ಇರಲಿ, ಯಾವುದೇ ಸಂಘಟನೆಗೆ ಸೇರಿದವರಾಗಿರಲಿ ಅವರನ್ನು ಪೊಲೀಸರು ಬಿಡುವುದಿಲ್ಲ. ಅಲ್ಲದೆ ತಪ್ಪು ಮಾಡದವರಿಗೆ ವಿನಾಕಾರಣ ತೊಂದರೆ ನೀಡುವುದಿಲ್ಲ. ನಗರದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಇನ್ನೂ ವಿಚಾರಣೆ ಬಾಕಿ ಇದ್ದು, ಅಧಿಕೃತವಾಗಿ ಏನನ್ನು ಹೇಳಲು ಸಾಧ್ಯವಿಲ್ಲ. ಪ್ರಸ್ತುತ ೧೪೪ ಕಲಂರನ್ವಯ ವಿಧಿಸಲಾಗಿರುವ ನಿಷೇಧಾಜ್ಞೆ ಗುರುವಾರದವರೆಗೂ ಮುಂದುವರೆಯಲಿದ್ದು, ಆ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ರಂಗಪ್ಪ ವೃತ್ತದಿಂದ ಆರಂಭಗೊಂಡ ಪಥಸಂಚಲನ ಮಾಧವಚಾರ್ ವೃತ್ತದ ಮೂಲಕ ಭೂತನಗುಡಿ ಪ್ರವೇಶಿಸಿ ನಂತರ ಹೊಳೆಹೊನ್ನೂರು ವೃತ್ತ ತಲುಪಿ ರಂಗಪ್ಪ ವೃತ್ತದಲ್ಲಿ ಅಂತ್ಯಗೊಂಡಿತು.
ಪಥ ಸಂಚಲನದಲ್ಲಿ ೩ ಕೆಎಸ್‌ಆರ್‌ಪಿ ವಾಹನ, ೩ ರ್‍ಯಾಪಿಡ್ ಆಕ್ಷನ್ ಪೊಲೀಸ್ ಹಾಗು ನಾಗರೀಕ ಪೊಲೀಸ್ ಪಡೆ ಸೇರಿದಂತೆ ಒಟ್ಟು ಸುಮಾರು ೨೦೦ ಮಂದಿಯೊಂದಿಗೆ ಪೂರ್ವವಲಯ ಪೊಲೀಸ್ ಮಹಾನಿರ್ದೇಶಕ ತ್ಯಾಗರಾಜನ್, ಜಿಲ್ಲಾ ರಕ್ಷಣಾಧಿಕಾರಿ ಡಾ. ಲಕ್ಷ್ಮೀಪ್ರಸಾದ್, ಹೆಚ್ಚುವರಿ ರಕ್ಷಣಾಧಿಕಾರಿ ವಿಕ್ರಮ್ ಅಮತೆ, ವೈರ್‌ಲೆಸ್ ವಿಭಾಗದ ರಕ್ಷಣಾಧಿಕಾರಿ ಕಾರ್ತಿಕ್‌ರೆಡ್ಡಿ, ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಪೌರಾಯುಕ್ತ ಮನುಕುಮಾರ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ, ನಗರ ವೃತ್ತ ನಿರೀಕ್ಷಕರಾದ ರಾಘವೇಂದ್ರ ಕಾಂಡಿಕೆ, ಗ್ರಾಮಾಂತರ ವೃತ್ತ ನಿರೀಕ್ಷಕ ಗುರುರಾಜ್, ಆರ್‌ಎಎಫ್ ಅಧಿಕಾರಿಗಳು, ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣಾಧಿಕಾರಿಗಳು ಹೆಜ್ಜೆ ಹಾಕಿದರು.
No comments:
Post a Comment