'ಮತ್ತೆ ಹುಟ್ಟಿ ಬನ್ನಿ' ಅದ್ಭುತ ಕಲ್ಪನೆಯೊಂದಿಗೆ ಪ್ರತಿಮೆ ಪ್ರತಿಷ್ಠಾಪನೆ
ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೭ರ ಆಂಜನೇಯ ಅಗ್ರಹಾರ(ಕೂಲಿ ಬ್ಲಾಕ್ ಶೆಡ್)ದ ೫ನೇ ಕ್ರಾಸ್ ಶ್ರೀ ವಿಷ್ಣು ಅಭಿಮಾನಿಗಳ ಸಂಘದ ವತಿಯಿಂದ ಈ ಅದ್ಭುತ ಕಲ್ಪನೆ ಮೂಡಿ ಬಂದಿದೆ.
ಭದ್ರಾವತಿ, ಸೆ. ೧೪: ಕ್ಷೇತ್ರದಲ್ಲಿ ೩ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಜನರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದುಕೊಂಡಿರುವ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರು ನಿಧನ ಹೊಂದಿ ೨ ವರ್ಷಗಳು ಕಳೆದಿವೆ. ಕಳೆದ ಕೆಲವು ದಿನಗಳ ಹಿಂದೆ ಅವರ ಪುಣ್ಯಸ್ಮರಣೆ ಸಹ ಆಚರಣೆ ಮಾಡಲಾಗಿದೆ. ಇದೀಗ ಅವರ ಅಭಿಮಾನಿಗಳು ದೇವರ ಸ್ಥಾನದಲ್ಲಿ ಅಪ್ಪಾಜಿ ಅವರನ್ನು ಪ್ರತಿಷ್ಠಾಪಿಸಿ ದೇವರೇ ಅವರನ್ನು ಪುನಃ ಹುಟ್ಟಿಬನ್ನಿ ಎಂದು ಹಾರೈಸುವ ಅದ್ಭುತ ಕಲ್ಪನೆಯನ್ನು ನಿರ್ಮಾಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೭ರ ಆಂಜನೇಯ ಅಗ್ರಹಾರ(ಕೂಲಿ ಬ್ಲಾಕ್ ಶೆಡ್)ದ ೫ನೇ ಕ್ರಾಸ್ ಶ್ರೀ ವಿಷ್ಣು ಅಭಿಮಾನಿಗಳ ಸಂಘದ ವತಿಯಿಂದ ಈ ಅದ್ಭುತ ಕಲ್ಪನೆ ಮೂಡಿ ಬಂದಿದೆ. ಈ ಬಾರಿ ವಿನಾಯಕ ಚತುರ್ಥಿಯಂದು ಸಣ್ಣ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಹಬ್ಬದ ಆಚರಣೆಗೆ ಚಾಲನೆ ನೀಡಿದ ಸಂಘ ಸೋಮವಾರ ರಾತ್ರಿ ಅಪ್ಪಾಜಿಯವರ ಪ್ರತಿಮೆ ಹಾಗು ಮತ್ತೆ ಹುಟ್ಟಿಬನ್ನಿ ಎಂದು ಬರೆಯುವ ರೀತಿ ಗಣೇಶ ಮೂರ್ತಿ ಮತ್ತು ಜೈಕಾರ ಕೂಗುವ ಹಾಗೆ, ನಮಸ್ಕಾರಿಸುವ ಹಾಗೆ, ಪೂಜೆ ಮಾಡುವ ಹಾಗೆ ಮೊಶಿಕನನ್ನು ಪ್ರತಿಷ್ಠಾಪಿಸಲಾಗಿದೆ.
ರಾಕೇಶ್(ಗೊಂಬೆ) ಮತ್ತು ಗೆಳೆಯರ ಸಹಕಾರದಿಂದ ಕಲಾವಿದ ವಿಷ್ಣು ಅವರ ಪ್ರತಿಭೆಯಲ್ಲಿ ಅಪ್ಪಾಜಿ ಅವರ ಪ್ರತಿಮೆ ಆಕರ್ಷಕವಾಗಿ ರೂಪುಗೊಂಡಿದೆ. ಪ್ರತಿಷ್ಠಾಪನೆಗಾಗಿಯೇ ವಿಶಿಷ್ಟವಾದ ವೇದಿಕೆಯನ್ನು ಸಿದ್ದಪಡಿಸಲಾಗಿದೆ. ಅಪ್ಪಾಜಿ ಭದ್ರಕೋಟೆ ಎಂಬ ಮಹಾದ್ವಾರದ ಜೊತೆಗೆ ಆಕರ್ಷಕವಾದ ಕೋಟೆ ಮಾದರಿ ವೇದಿಕೆ ರೂಪಿಸಲಾಗಿದೆ. ಒಟ್ಟಾರೆ ಈ ಅದ್ಭುತ ಕಲ್ಪನೆ ನೋಡುಗರ ಗಮನ ಸೆಳೆಯುತ್ತಿದೆ.
ಪ್ರತಿಷ್ಠಾಪನೆಗೂ ಮೊದಲು ಪಂಬೆ ವಾದ್ಯ, ಡೊಳ್ಳು ಕುಣಿತ ಸೇರಿದಂತೆ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಅಪ್ಪಾಜಿ ಪ್ರತಿಮೆ ಹಾಗು ಗಣೇಶ ಮೂರ್ತಿಯನ್ನು ವೇದಿಕೆಗೆ ತರಲಾಯಿತು. ಅಪ್ಪಾಜಿ ಅವರ ಪತ್ನಿ ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್ ಹಾಗು ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರು, ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು, ಸ್ಥಳೀಯರು ಪಾಲ್ಗೊಂಡಿದ್ದರು.
ಮತ್ತೊಂದು ವಿಶೇಷತೆ ಎಂದರೆ ಈ ಪರಿಕಲ್ಪನೆ ೫೧ ದಿನಗಳವರೆಗೆ ಇರಲಿದೆ. ಅಪ್ಪಾಜಿಯವರು ಕ್ಷೇತ್ರದ ಜನರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ ಎಂಬುದಕ್ಕೆ ಇದೆ ಸಾಕ್ಷಿಯಾಗಿದೆ. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಅವರನ್ನು ಈ ಅದ್ಭುತ ಕಲ್ಪನೆ ಪುನಃ ಜೀವಂತಿಕೆಯನ್ನು ತಂದುಕೊಟ್ಟಂತೆ ಭಾಸವಾಗುತ್ತಿದೆ. ಇದನ್ನು ರೂಪಿಸಿರುವ ಅಪ್ಪಾಜಿ ಅಭಿಮಾನಿಗಳಿಗೆ, ಕಲಾವಿದರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಕ್ಷೇತ್ರದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಅದ್ಭುತ ಕಲ್ಪನೆಯನ್ನು ಕಣ್ತುಂಬಿಕೊಳ್ಳುವಂತೆ ಸ್ಥಳೀಯರು ಕೋರಿದ್ದಾರೆ.
No comments:
Post a Comment