Friday, September 23, 2022

ರಾಜ್ಯದಲ್ಲಿರುವ ಜೆಸಿಬಿ ಪಕ್ಷಗಳನ್ನು ಅಧಿಕಾರದಿಂದ ದೂರವಿಡಿ : ಮುಖ್ಯಮಂತ್ರಿ ಚಂದ್ರು

ಭದ್ರಾವತಿ ರಂಗಪ್ಪ ವೃತ್ತದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ  ಎಎಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಆನಂದ್(ಮಾರುತಿ ಮೆಡಿಕಲ್) ಅವರ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿದರು.
    ಭದ್ರಾವತಿ, ಸೆ. ೨೩: ರಾಜ್ಯದಲ್ಲಿರುವ ಜೆಸಿಬಿ ಪಕ್ಷಗಳನ್ನು ಅಧಿಕಾರದಿಂದ ದೂರವಿಟ್ಟು, ಆಮ್ ಆದ್ಮಿ ಪಾರ್ಟಿ ಬೆಂಬಲಿಸುವಂತೆ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
    ಅವರು ನಗರದ ರಂಗಪ್ಪ ವೃತ್ತದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಆಕಾಂಕ್ಷಿ ಅಭ್ಯರ್ಥಿ ಆನಂದ್(ಮಾರುತಿ ಮೆಡಿಕಲ್) ಅವರ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ರಾಜ್ಯದಲ್ಲಿ ಪ್ರಮುಖವಾಗಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿದ್ದು, ನಾನು ಈ ೩ ಪಕ್ಷಗಳ ರಾಜಕೀಯ ಸಿದ್ದಾಂತಗಳನ್ನು ಚನ್ನಾಗಿ ಅರಿತುಕೊಂಡಿದ್ದೇನೆ. ಇವು ಸರ್ವಾಧಿಕಾರಿ ಧೋರಣೆಯೊಂದಿಗೆ ಭ್ರಷ್ಟಾಚಾರ, ಸ್ವಾರ್ಥ ರಾಜಕಾರಣ ನಡೆಸುತ್ತಿವೆ. ಅಲ್ಲದೆ ಜನರ ಹಿತಾಸಕ್ತಿಗಳನ್ನು ಕಡೆಗಣಿಸಿವೆ. ಸುಳ್ಳು ಭರವಸೆಗಳನ್ನು ನೀಡಿ ವಂಚಿಸುತ್ತಿವೆ ಎಂದು ಆರೋಪಿಸಿದರು.
    ಆಮ್ ಆದ್ಮಿ ಪಾರ್ಟಿ ಜನರ ಪಕ್ಷವಾಗಿದೆ. ಉಚಿತ ಶಿಕ್ಷಣ, ಆರೋಗ್ಯ, ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಿರುವ ದೇಶದ ಏಕೈಕ ಪಕ್ಷ ಇದಾಗಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಇದಕ್ಕೆ ಉದಾಹರಣೆಯಾಗಿದೆ. ರಾಜ್ಯದ ಜನರು ಜೆಸಿಬಿ ಪಕ್ಷಗಳನ್ನು ತಿರಸ್ಕಾರ ಮಾಡಿ ಆಮ್ ಆದ್ಮಿ ಪಾರ್ಟಿ ಬೆಂಬಲಿಸುವಂತೆ ಮನವಿ ಮಾಡಿದರು.
    ಪಕ್ಷದ ರಾಜ್ಯಧ್ಯಕ್ಷ ಪೃಥ್ವಿರೆಡ್ಡಿ ಮಾತನಾಡಿ, ಪ್ರಸ್ತುತ ಬೆಂಗಳೂರಿನ ಸ್ಥಿತಿ ಚಿಂತಾಜನಕವಾಗಿದೆ. ಕೆರೆಗಳ ಮೇಲೆ, ರಾಜಕಾಲುವೆಗಳ ಮೇಲೆ ಅಕ್ರಮವಾಗಿ ಮನೆ, ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಪರಿಣಾಮ ಎದುರಾಗಿರುವ ಸಮಸ್ಯೆಗಳಿಂದ ಜನರು ರೋಸಿ ಹೋಗಿದ್ದಾರೆ. ಮತ್ತೊಂದೆಡೆ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಬಡವರು ಬದುಕುವುದು ಅಸಾಧ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯಕ್ಕೆ ಆಶಾಕಿರಣವಾಗಿದೆ ಎಂದರು.
    ರಾಜ್ಯದಲ್ಲಿ ಪರ್ಯಾಯ ರಾಜಕಾರಣಕ್ಕೆ ಎಎಪಿ ನಾಂದಿ ಹಾಡಲಿದೆ. ರಾಜ್ಯದಲ್ಲೆಡೆ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕಳೆದ ಸುಮಾರು ೧ ತಿಂಗಳಿನಿಂದ ಗ್ರಾi ಸಂಪರ್ಕ ಅಭಿಯಾನ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಉತ್ತಮ ಭವಿಷ್ಯ ನಿರೀಕ್ಷಿಸುವ ಪ್ರತಿಯೊಬ್ಬರಿಗೂ ಪಕ್ಷದಲ್ಲಿ ಅವಕಾಶವಿದೆ ಎಂದರು.
    ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಸ್ಥಳೀಯ ಪ್ರಮುಖರಾದ ಆನಂದ್(ಮೆಡಿಕಲ್), ಎಚ್. ರವಿಕುಮಾರ್, ರೇಷ್ಮಾಬಾನು, ಎ. ಮಸ್ತಾನ್, ಡಿ.ಎಂ ಚಂದ್ರಪ್ಪ, ಪರಮೇಶ್ವರಚಾರ್, ಎನ್.ಪಿ ಜೋಸೆಫ್, ಪರಮೇಶ್ವರನಾಯ್ಕ್, ಭಾಗ್ಯಮ್ಮ, ಜೋಸೆಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment