Friday, November 18, 2022

ಮಾಜಿ ಪ್ರಧಾನಿ ದೇವೇಗೌಡರಿಗೆ ಅವಮಾನ, ರಾಜ್ಯದ ಜನತೆಗೆ ಮಾಡಿರುವ ಅವಮಾನ

ರಾಜ್ಯ ಸರ್ಕಾರದ ವಿರುದ್ಧ ಅಭಿಮಾನಿಗಳು, ಮುಖಂಡರಿಂದ ಆಕ್ರೋಶ

ನಾಡಹಬ್ಬ ಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಸರಿಯಾದ ರೀತಿಯಲ್ಲಿ ಆಹ್ವಾನಿಸದಿರುವುದನ್ನು ಖಂಡಿಸಿ ಶುಕ್ರವಾರ ಭದ್ರಾವತಿ ತಾಲೂಕು ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ನ. ೧೮ : ನಾಡಹಬ್ಬ ಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಸರಿಯಾದ ರೀತಿಯಲ್ಲಿ ಆಹ್ವಾನಿಸದಿರುವುದನ್ನು ಖಂಡಿಸಿ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಪ್ರಮುಖರು ಮಾತನಾಡಿ, ಬೆಂಗಳೂರಿನಲ್ಲಿ ಪ್ರತಿಷ್ಠಾಪಿಸಲಾಗಿರುವ ನಾಡಹಬ್ಬ ಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಆಹ್ವಾನಿಸದೆ ನಿರ್ಲಕ್ಷ್ಯತನದಿಂದ ವರ್ತಿಸುವ ಮೂಲಕ ಅವಮಾನಗೊಳಿಸಿದೆ ಎಂದು ಆರೋಪಿಸಿದರು.
    ಇದು ರಾಜ್ಯದ ಸಮಸ್ತ ಜನತೆಗೆ ಮಾಡಿರುವ ಅವಮಾನವಾಗಿದೆ. ದೇವೇಗೌಡರು ಕೇವಲ ಒಂದು ಜಾತಿಗೆ, ಒಂದು ಸಮುದಾಯಕ್ಕೆ, ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಅವರು ರಾಷ್ಟ ನಾಯಕರಾಗಿದ್ದು, ರಾಜ್ಯದ ಹಿರಿಯ ಮುತ್ಸದ್ದಿ ಹಾಗು ದೇಶದ ಮಾಜಿ ಪ್ರಧಾನಿಗೆ ಗೌರವ ನೀಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಕ್ಷೇತ್ರದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಇಂದಿಗೂ ಕಾರ್ಯಾರಂಭ ನಡೆಸುತ್ತಿರುವುದು ದೇವೇಗೌಡರ ಪರಿಶ್ರಮದಿಂದ ಎಂಬುದನ್ನು ಯಾರು ಸಹ ಮರೆಯಬಾರದು. ರಾಜ್ಯ ಮತ್ತು ರಾಷ್ಟ್ರಕ್ಕೆ ದೇವೇಗೌಡರ ಕೊಡುಗೆ ಅನನ್ಯವಾಗಿದೆ. ತಕ್ಷಣ ರಾಜ್ಯ ಸರ್ಕಾರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
    ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಯುಕ್ತ ಕರ್ನಾಟಕ ಜನತಾದಳ(ಜೆಡಿಯು) ರಾಜ್ಯ ಕಾರ್ಯದರ್ಶಿ ಶಶಿಕುಮಾರ್‌ಗೌಡ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಯರಾಮ್ ಗೊಂದಿ,  ಕರುನಾಡು ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್, ಸಾವಿತ್ರಿ ಪುಟ್ಟೇಗೌಡ, ಸುಬ್ಬೇಗೌಡ, ಎಸ್. ರಾಜು, ಧರ್ಮರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಎಚ್.ಡಿ ದೇವೇಗೌಡರ ಅಭಿಮಾನಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

No comments:

Post a Comment