ಬುಧವಾರ, ಡಿಸೆಂಬರ್ 7, 2022

ಅಂಬೇಡ್ಕರ್ ವಿಶ್ವದ ಮಹಾನ್ ವ್ಯಕ್ತಿ, ಜ್ಞಾನದ ಸಂಕೇತ : ಸತ್ಯ ಭದ್ರಾವತಿ

ಭದ್ರಾವತಿ ರಂಗಪ್ಪವೃತ್ತ, ಜೈಭೀಮ ನಗರದಲ್ಲಿರುವ ಸಮಿತಿ ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್‌ರವರ ಪರಿನಿರ್ವಾಣ ದಿನಾಚರಣೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ  ಸತ್ಯ ಭದ್ರಾವತಿ ನೇತೃತ್ವವಹಿಸಿ ಮಾತನಾಡಿದರು.
    ಭದ್ರಾವತಿ, ಡಿ. ೭: ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರು ಪ್ರಪಂಚದ ಎಲ್ಲಾ ದೇಶಗಳು ಗೌರವಿಸುವ ಮಹಾನ್ ವ್ಯಕ್ತಿಯಾಗಿದ್ದಾರೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ  ಸತ್ಯ ಭದ್ರಾವತಿ ಬಣ್ಣಿಸಿದರು.
    ಅವರು ನಗರದ ರಂಗಪ್ಪವೃತ್ತ, ಜೈಭೀಮ ನಗರದಲ್ಲಿರುವ ಸಮಿತಿ ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್‌ರವರ ಪರಿನಿರ್ವಾಣ ದಿನಾಚರಣೆ ನೇತೃತ್ವವಹಿಸಿ ಮಾತನಾಡಿದರು..
ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿಬೆಳೆದ ಅಂಬೇಡ್ಕರ್‌ರವರು ಸಮಾಜದ ಎಲ್ಲಾ ಸಂಕಷ್ಟಗಳನ್ನು ಕಂಡಿದ್ದು, ನೋವು, ಅಪಮಾನಗಳನ್ನು ಅನುಭವಿಸಿ ಉನ್ನತ ಸ್ಥಾನಕ್ಕೆ ಏರಿದವರು. ಈ ಹಿನ್ನಲೆಯಲ್ಲಿ ಅವರು ದೇಶದಲ್ಲಿನ ಎಲ್ಲಾ ಧರ್ಮ, ಎಲ್ಲಾ ಜಾತಿ-ಜನಾಂಗದವರಿಗೆ ಅನ್ವಯವಾಗುವ, ಸರ್ವ ಸಮಾನತೆಯಿಂದ ಕೂಡಿರುವ ಶ್ರೇಷ್ಠ ಸಂವಿಧಾನವನ್ನು ರಚಿಸುವ ಮೂಲಕ ಎಲ್ಲರೂ ಸೌಹಾರ್ದತೆಯಿಂದ ಬದುಕಲು ಕಾರಣಕರ್ತರಾಗಿದ್ದಾರೆ ಎಂದರು.
    ದೇಶದ ಪ್ರತಿಯೊಬ್ಬರೂ ಸಹ ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ಅಂಬೇಡ್ಕರ್‌ರವರು ಜ್ಞಾನದ ಸಂಕೇತವಾಗಿ ಪ್ರಜ್ವಲಿಸುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಪಂಚದ ಎಲ್ಲಾ ದೇಶಗಳು ಸಹ ಅಂಬೇಡ್ಕರ್‌ರವರನ್ನು ಗೌರವಿಸುತ್ತಿವೆ. ಇಂತಹ ಮಹಾನ್ ವ್ಯಕ್ತಿಯ ದಾರಿಯಲ್ಲಿ ನಾವುಗಳು ಸಹ ಸಾಗುವಂತಾಗಬೇಕೆಂದರು.
    ತಾಲೂಕು ಸಂಚಾಲಕ ಕೆ. ರಂಗನಾಥ್, ಪ್ರಮುಖರಾದ ಶಾಂತಮ್ಮ, ಎನ್. ಗೋವಿಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ