Saturday, February 4, 2023

೧೭ನೇ ದಿನ ಪೂರೈಸಿದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ : ವಿವಿಧ ಸಂಘಟನೆಗಳಿಂದ ಬೆಂಬಲ

ಎಎಪಿಯಿಂದ ಪಾದಯಾತ್ರೆ, ಎಂಪಿಎಂ ನಿವೃತ್ತ ಕಾರ್ಮಿಕರ ಬೆಂಬಲ, ವಿದ್ಯಾರ್ಥಿಗಳಿಂದ ಪತ್ರ ಬರವಣಿಗೆ

ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಆಮ್ ಆದ್ಮಿ ಪಾರ್ಟಿ ಆಕಾಂಕ್ಷಿ ಅಭ್ಯರ್ಥಿ ಟಿ. ನೇತ್ರಾವತಿಯವರ ನೇತೃತ್ವದಲ್ಲಿ ಶನಿವಾರ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶಿವಮೊಗ್ಗದಿಂದ ಪಾದಯಾತ್ರೆ ನಡೆಸಲಾಯಿತು.
    ಭದ್ರಾವತಿ, ಫೆ. ೪ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಶನಿವಾರ ೧೭ನೇ ದಿನ ಪೂರೈಸಿತು. ಹೋರಾಟಕ್ಕೆ ವಿವಿಧೆಡೆಗಳಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
    ಆಮ್ ಆದ್ಮಿ ಪಾರ್ಟಿ ವತಿಯಿಂದ ಪಾದಯಾತ್ರೆ :
    ಶಿವಮೊಗ್ಗ ವಿಧಾನಸಭಾ ಕ್ಷೇತ್ರ ಆಮ್ ಆದ್ಮಿ ಪಾರ್ಟಿ ಆಕಾಂಕ್ಷಿ ಅಭ್ಯರ್ಥಿ ಟಿ. ನೇತ್ರಾವತಿಯವರ ನೇತೃತ್ವದಲ್ಲಿ ಶನಿವಾರ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶಿವಮೊಗ್ಗದಿಂದ ಪಾದಯಾತ್ರೆ ನಡೆಸಲಾಯಿತು.
    ಬೆಳಿಗ್ಗೆ ಶಿವಮೊಗ್ಗದಲ್ಲಿ ಸರ್.ಎಂ ವಿಶ್ವೇಶ್ವರಾಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಆರಂಭಗೊಂಡ ಪಾದಯಾತ್ರೆ ಬಿ.ಎಚ್ ರಸ್ತೆಯಲ್ಲಿ ಸಾಗಿತು. ಮಧ್ಯಾಹ್ನ ೪ ಗಂಟೆ ವೇಳೆಗೆ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಸ್ಥಳ ತಲುಪಿತು. ಗುತ್ತಿಗೆ ಕಾರ್ಮಿಕರು ಪಾದಯಾತ್ರೆ ನಗರದ ಹುತ್ತಾಕಾಲೋನಿ ಬಸ್ ನಿಲ್ದಾಣದ ಬಳಿ ಸ್ವಾಗತಿಸಿದರು.
    ಪಕ್ಷದ ಪ್ರಮುಖರಾದ ಶಿವಮೊಗ್ಗ ನಗರ ಅಧ್ಯಕ್ಷ ಸುರೇಶ್ ಕೌಟೆಕರ, ಮುಕಬುಲ್ ಅಹಮದ್, ಪುಷ್ಪಲತಾ, ದಿಲ್‌ಶಾದ್ ಬಾನು, ಮಂಜುಳ, ಶ್ರೀನಿವಾಸ್, ಖಲಂದರ್, ಪ್ರದೀಪ್, ಪ್ರವೀಣ, ಹಾಲಸ್ವಾಮಿ, ರೇಷ್ಮಬಾನು, ರುಬೀನ ಬಾನು, ರಾಮಕೃಷ್ಣ, ಗಾಂಧಿ, ಶಿವಕುಮಾರ್, ಶಿವಾನಂದ, ರಮೇಶ್ ಸಿಂಧೆ, ಪರಮೇಶ್ವರನಾಯ್ಕ ಸೇರಿದಂತೆ ಇನ್ನಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
    ಎಂಪಿಎಂ ನೊಂದ ನಿವೃತ್ತ ಕಾರ್ಮಿಕರಿಂದ ಬೆಂಬಲ :
    ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಪ್ರಮುಖರು, ಈಗಾಗಲೇ ರಾಜ್ಯ ಸರ್ಕಾರ ಎಂಪಿಎಂ ಕಾರ್ಖಾನೆಯನ್ನು ೨೦೨೧ರಲ್ಲಿ ಮುಚ್ಚಿರುವುದಾಗಿ ಘೋಷಿಸಿದೆ. ಇದೀಗ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸಹ ಮುಚ್ಚುವುದಾಗಿ ಆದೇಶ ಹೊರಡಿಸಿರುವುದು ತಿಳಿದು ಬಂದಿದ್ದು, ವೇದಿಕೆ ಇದನ್ನು ವಿರೋಧಿಸುವ ಜೊತೆಗೆ ತಕ್ಷಣ ಎಂಪಿಎಂ ಮತ್ತು ವಿಐಎಸ್‌ಎಲ್ ಎರಡು ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವಂತೆ ಒತ್ತಾಯಿಸುತ್ತದೆ. ಅಲ್ಲದೆ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವ ಜೊತೆಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
    ವೇದಿಕೆ ಪ್ರಮುಖರಾದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಸಲಹೆಗಾರ ಕೆ.ಜಿ ವೆಂಕಟೇಶ್‌ಮೂರ್ತಿ, ಸಂಚಾಲಕರಾದ ವಿ. ಗೋವಿಂದಪ್ಪ, ಎನ್. ರಘುನಾಥರಾವ್ ಮತ್ತು ಶಿವಲಿಂಗಯ್ಯ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಸೇರಿದಂತೆ ನಿವೃತ್ತ ಕಾರ್ಮಿಕರು ಉಪಸ್ಥಿತರಿದ್ದರು.


ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿತು.
    ಕಾರ್ಖಾನೆ ಉಳಿವಿಗಾಗಿ ವಿದ್ಯಾರ್ಥಿಗಳಿಂದ ಪತ್ರ ಬರವಣಿಗೆ :  
    ಯುವ ಮುಖಂಡ ಬಿ.ಎಸ್ ಗಣೇಶ್ ಮಾರ್ಗದರ್ಶನದಲ್ಲಿ ಜೀವಸ್ವರ ಚಾರಿಟಬಲ್ ಟ್ರಸ್ಟ್ ಹಾಗು ಕುವೆಂಪು ಪ್ರವಾಸಿ ವಾಹನ ಚಾಲಕರ ಹಾಗು ಮಾಲೀಕರ ಸಂಘದ ಸಹಯೋಗದೊಂದಿಗೆ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗು ಬೊಮ್ಮನಕಟ್ಟೆ ಸರ್.ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಂದ 'ಸೇವ್ ವಿಐಎಸ್‌ಎಲ್, ಸೇವ್ ಭದ್ರಾವತಿ' (Save VISL, Save Bhadravathi) ಎಂಬ ಘೋಷಣೆಯ ಪತ್ರ ಬರವಣಿಗೆ ನಡೆಯಿತು.
    ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗು ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಪತ್ರ ಬರೆವಣಿಗೆ ಬರೆಯುವ ಮೂಲಕ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ  ಬೆಂಬಲ ವ್ಯಕ್ತಪಡಿಸಲಾಯಿತು.
    ಜೀವಸ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಫ್ರಾನ್ಸಿಸ್,  ಕಾರ್ಯದರ್ಶಿ ಪ್ರಸನ್ನ ಕುಮಾರ್, ಸತೀಶ್, ಪ್ರದೀಪ್, ವಾಸು, ಶಿವಣ್ಣ, ವೆಂಕಟ್, ಸೈಯದ್ ಅಲಿ, ರವಿ, ದಾಸ್, ಅಪ್ಪು, ಐಸಾಕ್, ವಿನ್ಸೆಂಟ್, ಚಂದ್ರಣ್ಣ ಹಾಗು ಕುವೆಂಪು ಪ್ರವಾಸಿ ವಾಹನ ಚಾಲಕರ ಹಾಗು ಮಾಲೀಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ ಬೆಂಬಲಿಸಿ ಕಾರ್ಖಾನೆ ಉಳಿವಿಗಾಗಿ ಕಾಲೇಜು ವಿದ್ಯಾರ್ಥಿಗಳಿಂದ ಪತ್ರ ಬರವಣಿಗೆ  ನಡೆಯಿತು.
    ತಮಿಳುನಾಡು ಸೇಲಂ ಕಾರ್ಖಾನೆಯಲ್ಲಿ ಪ್ರತಿಭಟನೆ:
    ನಗರದ ವಿಐಎಸ್‌ಎಲ್ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಗೊಳಿಸುವಂತೆ ಆಗ್ರಹಿಸಿ ಕಳೆದ ೪ ದಿನಗಳ ಹಿಂದೆ ತಮಿಳುನಾಡು ಸೇಲಂ ಸ್ಟೀಲ್ ಕಾರ್ಖಾನೆಯಲ್ಲಿ ಅಲ್ಲಿನ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿರುವುದು ತಿಳಿದು ಬಂದಿದೆ.
    ಕಾರ್ಮಿಕ ಸಂಘಟನೆಗಳ ಮುಖಂಡರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆಗಳನ್ನು ಖಂಡಿಸುವ ಜೊತೆಗೆ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಆಗ್ರಹಿಸಿ ಕಾರ್ಮಿಕರ ಹಾಗು ಅವರ ಅವಲಂಬಿತರ ಹಿತಕಾಪಾಡುವಂತೆ ಒತ್ತಾಯಿಸಿದ್ದಾರೆ.  


ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ತಮಿಳುನಾಡು ಸೇಲಂ ಸ್ಟೀಲ್ ಕಾರ್ಖಾನೆಯಲ್ಲಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.

No comments:

Post a Comment