ಭದ್ರಾವತಿ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಸ್ವಾಮಿಯ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿರುವ ಭಕ್ತರು.
ಭದ್ರಾವತಿ, ಫೆ. ೧೮: ಮಹಾಶಿವರಾತ್ರಿ ಈ ಬಾರಿ ಎಲ್ಲೆಡೆ ವೈಭವಯುತವಾಗಿ ಜರುಗುತ್ತಿದ್ದು. ವಿಶೇಷವಾಗಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಸ್ವಾಮಿಯ ದರ್ಶನ ಪಡೆಯಲು ಶನಿವಾರ ಬೆಳಿಗ್ಗೆಯಿಂದಲೇ ಭಕ್ತಾಧಿಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು.
ಪ್ರತಿ ವರ್ಷದಂತೆ ಈ ಬಾರಿ ಸಹ ವೀರಶೈವ ಸೇವಾ ಸಮಿತಿವತಿಯಿಂದ ಧಾರ್ಮಿಕ ಆಚರಣೆಗಳು ಜರುಗಿದವು. ಶುಕ್ರವಾರ ಸಂಜೆ ಗಣಹೋಮ, ರುದ್ರಹೋಮ, ನವಗ್ರಹ ಪೂಜೆ ಜರುಗಿದವು. ಶನಿವಾರ ಬೆಳಿಗ್ಗೆ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ, ಶ್ರೀ ಸಂಗಮೇಶ್ವರಸ್ವಾಮಿ, ನಂದಿ, ನಾಗದೇವತೆ ದೇವರುಗಳಿಗೆ ರುದ್ರಾಭಿಷೇಕ ನೆರವೇರಿತು.
ತರೀಕೆರೆ ಹಿರೇಮಠದ ಶ್ರೀ ಷ||ಬ್ರ|| ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ವೇದಬ್ರಹ್ಮ ಸಿ.ಎಂ ಮಹೇಶ್ವರಮೂರ್ತಿ ಶಾಸ್ತ್ರಿಗಳು, ಚಿನ್ನಯ್ಯ ಶಾಸ್ತ್ರಿ, ಎಸ್.ಆರ್ ವಿಶ್ವನಾಥಯ್ಯ, ವಾಗೀಶಯ್ಯ, ರುದ್ರಸ್ವಾಮಿ ಶಾಸ್ತ್ರಿ, ಎಂ.ಬಿ ಕಿರಣ್ ಶಾಸ್ತ್ರಿ ಮತ್ತು ಶಂಕರಯ್ಯ ಹಿರೇಮಠ್ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಟ್ಟರು. ವೀರಶೈವ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಶಿವರಾತ್ರಿ ಆಚರಣಾ ಉಸ್ತುವಾರಿ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಫೆ.೧೯ರ ಭಾನುವಾರ ಹಳೇನಗರದ ಶ್ರೀ ಕೋಟೆ ಬಸವಣ್ಣ, ಶ್ರೀ ವೀರಭದ್ರಸ್ವಾಮಿ, ಶ್ರೀ ಬನಶಂಕರಿದೇವಿ ಮತ್ತು ಶ್ರೀ ಸದಾನಂದಸ್ವಾಮಿ ಗದ್ದುಗೆಯಲ್ಲಿ ಮಹಾಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ ಸೇರಿದಂತೆ ಇನ್ನಿತರ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ ೭ ಗಂಟೆಗೆ ಕೋಟೆ ಬಸವಣ್ಣ ದೇವಸ್ಥಾನದಲ್ಲಿ ಕೆಂಡಾರ್ಚನೆ ಗುಗ್ಗಳ ಮಹೋತ್ಸವ ನಡೆಯಲಿದ್ದು, ದೇವಸ್ಥಾನದಿಂದ ಆರಂಭಗೊಳ್ಳುವ ಉತ್ಸವ ಮೆರವಣಿಗೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಕಂಚಿಬಾಗಿಲು, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮುಖಾಂತರ ಪುನಃ ಕೋಟೆ ಬಸವಣ್ಣ ದೇವಸ್ಥಾನ ತಲುಪಲಿದೆ.
ದೇವಸ್ಥಾನದ ಸಮೀಪ ಸೇವಾಕರ್ತರಿಂದ ಭಕ್ತರಿಗೆ ಕಲ್ಲಂಗಡಿ ಹಣ್ಣು, ಕೋಸಂಬರಿ, ಪಾನಕ ವಿತರಣೆ ನೆರವೇರಿತು. ಸ್ಥಳೀಯ ಸಂಘ-ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಕೃಪೆಗೆ ಪಾತ್ರರಾದರು.
ಭದ್ರಾವತಿ ಹೃದಯ ಭಾಗದಲ್ಲಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
No comments:
Post a Comment