ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಸದಸ್ಯರ ಆಕ್ರೋಶ
ಭದ್ರಾವತಿ ನಗರಸಭೆಯಲ್ಲಿ ಶನಿವಾರ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆ ಆರಂಭಗೊಂಡ ಸಾಮಾನ್ಯಸಭೆಯಲ್ಲಿ ನೂತನ ಉಪಾಧ್ಯಕ್ಷೆ ಸರ್ವಮಂಗಳಮ್ಮ ಬೈರಪ್ಪ ಅವರಿಗೆ ನಗರಸಭೆ ವತಿಯಿಂದ ಮಾಲಾರ್ಪಣೆ ಮಾಡಿ ಸ್ವಾಗತಿಸಲಾಯಿತು.
ಭದ್ರಾವತಿ, ಮಾ. ೧೮: ನಗರದ ಹೃದಯ ಭಾಗದಲ್ಲಿ ಭದ್ರಾ ನದಿ ಹರಿಯುತ್ತಿದ್ದರೂ ಸಹ ನಗರಸಭೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಸಮಸ್ಯೆ ಇದುವರೆಗೂ ಬಗೆಹರಿಯದಿರುವ ಕುರಿತು ನಗರಸಭಾ ಸದಸ್ಯರು ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಆರಂಭದಲ್ಲಿ ಮಾತನಾಡಿದ ಸದಸ್ಯರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಮಣಿ ಎಎನ್‌ಎಸ್, ಉದಯ್ ಕುಮಾರ್ ಮತ್ತು ಬಸವರಾಜ್, ಪ್ರಸ್ತುತ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಹೃದಯ ಭಾಗದಲ್ಲಿ ಭದ್ರಾ ನದಿ ಹರಿಯುತ್ತಿದ್ದರೂ ಸಹ ವರ್ಷಪೂರ್ತಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತಿದೆ. ಇದೀಗ ಬೇಸಿಗೆ ಆರಂಭವಾಗಿರುವ ಹಿನ್ನಲೆಯಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಕುಡಿಯುವ ನೀರಿಗಾಗಿ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ನಿರ್ವಹಣೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಇಂಜಿನಿಯರ್‌ಗಳು, ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ಸಹ ಸಮರ್ಪಕವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದಿರುವುದು ವಿಪರ್ಯಾಸದ ಬೆಳವಣಿಗೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯೆ ವಿಜಿಯಮ್ಮ ಮಾತನಾಡಿ, ನಮ್ಮ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹಲವಾರು ಬಾರಿ ದೂರು ಕೊಟ್ಟರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ನಾನು ವಾರ್ಡಿನಲ್ಲಿ ಇರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋರ್ಪಡಿಸಿಕೊಂಡರು.
ಇದಕ್ಕೆ ಎಂದಿನಂತೆ ಇಂಜಿನಿಯರ್‌ಗಳು ಉತ್ತರಿಸಿ ಪ್ರಸ್ತುತ ಎದುರಾಗಿರುವ ಸಮಸ್ಯೆಗಳನ್ನು ತೋರ್ಪಡಿಸಿಕೊಂಡರು. ಇದರಿಂದಾಗಿ ಮತ್ತಷ್ಟು ಆಕ್ರೋಶಗೊಂಡ ಸದಸ್ಯರು ಪ್ರತಿಬಾರಿ ಸಮಸ್ಯೆ ತೋರ್ಪಡಿಸಿಕೊಳ್ಳುವ ಬದಲು ಮೊದಲು ಬಗೆಹರಿಸುವ ನಿಟ್ಟಿನಲ್ಲಿ ಗಮನ ಹರಿಸಿ. ಇಂಜಿನಿಯರ್‌ಗಳು, ಸಿಬ್ಬಂದಿಗಳ ಕೊರತೆ ಇಲ್ಲದಿದ್ದರೂ ಸಹ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದಿವುದು ನಾಚಿಗೇಡಿನ ಸಂಗತಿಯಾಗಿದೆ ಎಂದರು.
ಪೌರಾಯುಕ್ತ ಮನುಕುಮಾರ್ ಮಾತನಾಡಿ, ಹೊರಗುತ್ತಿಗೆ ನೌಕರರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಇದರ ಬಗ್ಗೆ ಪರಿಶೀಲನೆ ನಡೆಲು ಹೋದಾಗ ಅವರುಗಳ ಪರಿಸ್ಥಿತಿ ಹೇಗೆ ಇರುತ್ತದೆ ಎಂಬುದನ್ನು ಇಲ್ಲಿ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಇರುತ್ತಾರೆ. ನಾವು ಸಂಬಂಧಿಸಿದ ಕೆಲಸವನ್ನು ಹೇಳಿ ಆ ರೀತಿಯಲ್ಲಿ ಮಾಡಬೇಕು ಎಂದಾಗ ಅವರು ಬೇರೆ ರೀತಿ ಮಾಡುತ್ತಾರೆ. ಹೀಗಾದರೆ ಏನು ಮಾಡುವುದು. ಏನು ಕೆಲಸ ಮಾಡಬೇಕೋ ಅದನ್ನು ಮಾಡುವುದಿಲ್ಲ. ಬೇರೆ ಏನೂ ಮಾಡುತ್ತಾರೆ ಎಂದು ತಮ್ಮ ಅಸಾಹಕತೆ ವ್ಯಕ್ತಪಡಿಸಿದರು.
ನಗರದ ಚನ್ನಗಿರಿ ಮುಖ್ಯರಸ್ತೆ ಅಗಲೀಕರಣಗೊಳಿಸಿ ನಂತರ ಅಭಿವೃಧ್ಧಿ ಕಾಮಗಾರಿಗಳನ್ನು ಕೈಗೊಳ್ಳಿ ಎಂದು ಸದಸ್ಯ ಬಿ.ಟಿ ನಾಗರಾಜ್ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿ ಪೌರಾಯುಕ್ತರು, ರಸ್ತೆ ಆಗಲೀಕರಣದ ವಿಚಾರ ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ. ಇದಕ್ಕೆ ಸಂಬಂಧಪಟ್ಟ ಇಲಾಖೆ ಬೇರೆ ಇದ್ದು, ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಪ್ರಸ್ತಾವನೆ ಮಂಡಿಸಿರುವ ಹಿನ್ನಲೆಯಲ್ಲಿ ಇದನ್ನು ಪರಿಗಣನೆಗೆ ತೆಗೆದುಕೊಂಡು ಸಂಬಂಧಿಸಿದ ಇಲಾಖೆಗೆ ಕಳುಹಿಸಿಕೊಡಲಾಗುವುದು ಎಂದರು.
ಈ ಹಿಂದೆ ಅಸ್ತಿತ್ವದಲ್ಲಿದ್ದ ಪುರಸಭೆ ನಗರಸಭೆಯಾಗಿ ರಚನೆಯಾದ ನಂತರ ಹೊಸದಾಗಿ ಕೆಲ ಗ್ರಾಮಾಂತರ ಪ್ರದೇಶಗಳು ನಗರಸಭೆಗೆ ಸೇರ್ಪಡೆಗೊಂಡವು. ಆ ಸಮಯದಲ್ಲಿ ಆ ಪ್ರದೇಶಗಳ ದಾಖಲಾತಿಗಳನ್ನು ಆಯಾ ಗ್ರಾಮ ಪಂಚಾಯಿತಿಯಿಂದ ನಗರಸಭೆಗೆ ಹಸ್ತಾಂತರ ಮಾಡಲಾಯಿತು. ಆದರೆ ಇಂದಿಗೂ ನಗರಸಭೆಯಲ್ಲಿ ಆ ಜಾಗಗಳನ್ನು ಅಳತೆ ಮಾಡಿ ದಾಖಖೆ ಮಾಡಿಕೊಟ್ಟಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಕ್ರಮ ಕೈಗೊಂಡು ದಾಖಲು ನೀಡುವಂತೆ ಸದಸ್ಯರಾದ ಚನ್ನಪ್ಪ, ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಕೋಟೇಶ್ವರ ರಾವ್ ಸೇರಿದಂತೆ ಇನ್ನಿತರರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ನಗರಸಭೆಯಲ್ಲಿ ಸೂಕ್ತ ದಾಖಲೆಗಳು ಲಭ್ಯವಾದಲ್ಲಿ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಯಾವುದಾರೂ ದಾಖಲೆ ಲಭ್ಯವಿದ್ದರೆ ಅಳತೆ ಮಾಡಿ ಖಾತೆ ಮಾಡಬಹುದು ಎಂದರು.
ಈ ಬಾರಿ ಸಾಮಾನ್ಯಸಭೆಯಲ್ಲಿ ಬಹುತೇಕ ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳಿದ್ದು, ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡರು. ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಉಪಸ್ಥಿತರಿದ್ದರು. ಸಭೆ ಆರಂಭದಲ್ಲಿ ನೂತನ ಉಪಾಧ್ಯಕ್ಷೆ ಸರ್ವಮಂಗಳಮ್ಮ ಬೈರಪ್ಪ ಅವರಿಗೆ ನಗರಸಭೆ ವತಿಯಿಂದ ಮಾಲಾರ್ಪಣೆ ಮಾಡಿ ಸ್ವಾಗತಿಸಲಾಯಿತು.
No comments:
Post a Comment