Thursday, March 9, 2023

ವಿಐಎಸ್‌ಎಲ್ ಕಾರ್ಖಾನೆಯಿಂದ ‘ಭದ್ರಾವತಿ’ ಅಸ್ತಿತ್ವ : ಬಿ.ಎಂ ಸಂತೋಷ್

ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಕುರುಬರ ಸಂಘ ಬೆಂಬಲ  

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಸುಮಾರು ೫೦ ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ತಾಲೂಕು ಕುರುಬರ ಸಂಘದಿಂದ ಅವರು ಗುರುವಾರ ಬೆಂಬಲ ಸೂಚಿಸಿ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಮಾತನಾಡಿದರು.
    ಭದ್ರಾವತಿ, ಮಾ. ೯: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದಾಗಿ ಭದ್ರಾವತಿ ಪ್ರಪಂಚದ ಭೂಪುಟದಲ್ಲಿ ಗುರುತಿಸಿಕೊಂಡಿದೆ. ಇಂತಹ ಭವ್ಯ ಪರಂಪರೆ ಹೊಂದಿರುವ ಕಾರ್ಖಾನೆ ಉಳಿಯಬೇಕೆಂಬುದು ಕ್ಷೇತ್ರದ ಪ್ರತಿಯೊಬ್ಬರ ಆಶಯವಾಗಿದೆ ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಹೇಳಿದರು.
    ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಸುಮಾರು ೫೦ ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ತಾಲೂಕು ಕುರುಬರ ಸಂಘದಿಂದ ಅವರು ಗುರುವಾರ ಬೆಂಬಲ ಸೂಚಿಸಿ ಮಾತನಾಡಿದರು.
    ವಿಐಎಸ್‌ಎಲ್ ಕಾರ್ಖಾನೆ ಪರಂಪರೆ, ವೈಭವ ನಾವೆಲ್ಲರೂ ಪುಸ್ತಕದಲ್ಲಿ ಓದಿ ತಿಳಿದುಕೊಳ್ಳುವ ಜೊತೆಗೆ ನಮ್ಮ ಬದುಕಿನಲ್ಲೂ ನೋಡಿದ್ದೇವೆ. ಇಂತಹ ಅದ್ಭುತವಾದ ಕಾರ್ಖಾನೆ ಇಲ್ಲದ ಭದ್ರಾವತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕಾರ್ಖಾನೆಯಿಂದ ಭದ್ರಾವತಿ ಉಳಿದುಕೊಂಡಿದೆ. ನಮ್ಮೆಲ್ಲರ ಹೋರಾಟ ಕಾರ್ಖಾನೆ ಉಳಿಯುವುದಾಗಿ ಭವಿಷ್ಯದಲ್ಲಿ ಹೋರಾಟ ಅಥವಾ ಇನ್ಯಾವುದೋ ರೀತಿಯ ಪ್ರಯತ್ನದಿಂದ ಕಾರ್ಖಾನೆ ಉಳಿಯುವ ವಿಶ್ವಾಸವಿದೆ ಎಂದರು.
    ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೫೦ ದಿನಗಳಿಂದ ನಿರಂತರವಾಗಿ ವಿವಿಧ ರೀತಿಯ ಹೋರಾಟ ನಡೆಸುವ ಜೊತೆಗೆ ಪ್ರಧಾನಿ, ಕೇಂದ್ರ ಸಚಿವರು ಹಾಗು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಗಮನ ಸೆಳೆಯುವ ನಿಟ್ಟಿನಲ್ಲೂ ಪ್ರಯತ್ನಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇಂದಿಗೂ ಹೋರಾಟ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಕ್ಷೇತ್ರದಲ್ಲಿರುವ ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಸಮಸ್ತ ನಾಗರೀಕರು ನಿಮ್ಮ ಜೊತೆಗಿದ್ದು, ನಿಮ್ಮ ಎಲ್ಲಾ ಹೋರಾಟಕ್ಕೂ ಕುರುಬರ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
    ಈಗಾಗಲೇ ಸಮಾಜದ ಮುಖಂಡರು, ವಿಧಾನಪರಿಷತ್ ಸದಸ್ಯರಾದ ವಿಶ್ವನಾಥ್‌ರವರು ಹೋರಾಟ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದಾರೆ. ಇವರು ಬೆಂಬಲ ಸೂಚಿಸಿದ ನಂತರ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಕಾರ್ಖಾನೆ ಉಳಿಸಿಕೊಳ್ಳುವ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಶ್ರೀ ಕ್ಷೇತ್ರ ಕಾಗಿನೆಲೆ ಪೀಠದ ಸಮಾಜದ ಗುರುಗಳೊಂದಿಗೂ ಸಹ ಈಗಾಗಲೇ ಈ ಸಂಬಂಧ ಚರ್ಚಿಸಲಾಗಿದ್ದು, ಗುರುಗಳು ಸಹ ಇಲ್ಲಿಗೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆಂದು ಭರವಸೆ ನೀಡಿದರು.
    ನಗರಸಭಾ ಸದಸ್ಯ ಕಾಂತರಾಜ್ ಹಾಗು ಕುರುಬರ ಸಂಘದ ನಿರ್ದೇಶಕರು, ಸಮಾಜದ ಮುಖಂಡರು, ಕುರುಬ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು.

No comments:

Post a Comment