ನೋಂದಣಿ ಮತ್ತು ಮುದ್ರಾಂಕ ಇಲಾಖೆ ಭದ್ರಾವತಿ ಕಛೇರಿಯಲ್ಲಿ ಪತ್ರಬರಹಗಾರರಿಗೆ, ದಸ್ತಾವೇಜುಗಾರರಿಗೆ, ವಕೀಲರಿಗೆ ಮತ್ತು ಸೈಬರ್ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಕಾವೇರಿ ೨.೦ ಜಾಲತಾಣ ನಿರ್ವಹಿಸುವ ಕುರಿತ ಮಾಹಿತಿ ಸಭೆ ನಡೆಯಿತು.
ಭದ್ರಾವತಿ ಏ ೧೩ : ನೋಂದಣಿ ಮಾಡಿಸಲು ಬರುವವರಿಗೆ ಪ್ರಸ್ತುತ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿ ಹೆಚ್ಚಿನ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಸರ್ಕಾರ ಕಾವೇರಿ ೨.೦ ಎಂಬ ಜಾಲತಾಣ ಅರಂಭಿಸಿದೆ ಎಂದು ಜಿಲ್ಲಾ ನೋಂದಣಿ ಅಧಿಕಾರಿ ಮತ್ತು ಕಾವೇರಿ ೨.೦ ಜಾಲತಾಣದ ನೋಡಲ್ ಅಧಿಕಾರಿ ಗಿರೀಶ್ ಬಸ್ತನ್ ಗೌಡರ್ ತಿಳಿಸಿದರು.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಛೇರಿಯಲ್ಲಿ ಪತ್ರಬರಹಗಾರರಿಗೆ, ದಸ್ತಾವೇಜುಗಾರರಿಗೆ, ವಕೀಲರಿಗೆ ಮತ್ತು ಸೈಬರ್ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಕಾವೇರಿ ೨.೦ ಜಾಲತಾಣ ನಿರ್ವಹಿಸುವ ಕುರಿತ ಮಾಹಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಮೇ.೧೫ ರಿಂದ ಈ ಜಾಲತಾಣ ಪ್ರಾರಂಭಿಸಲಾಗುತ್ತಿದ್ದು, ಅದರಲ್ಲೂ ಭದ್ರಾವತಿಯನ್ನು ಪ್ರಥಮ ಹಂತವಾಗಿ ಅಯ್ಕೆ ಮಾಡಿಕೊಳ್ಳಲಾಗಿದೆ. ಪತ್ರ ಬರಹಗಾರರು ಇಂದಿನಿಂದಲೇ ಈ ಜಾಲತಾಣ ಬಳಸಿಕೊಂಡು ನೋಂದಣಿ ಕಾರ್ಯ ಆರಂಭಿಸಬಹುದು ಎಂದರು.
ಈ ಹಿಂದೆ ಪತ್ರಗಳನ್ನು ನೋಂದಣಿ ಮಾಡಿಸಲು ಹೆಚ್ಚಿನ ಸಮಯ, ಶ್ರಮ ವ್ಯಯವಾಗುತ್ತಿತ್ತು. ಸಾಕ್ಷಿಗಳು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಕಛೇರಿಯಲ್ಲಿ ಜನದಟ್ಟಣೆ ಅಧಿಕವಾಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಸರ್ಕಾರ ಕಾವೇರಿ ೧.೦ ಜಾಲತಾಣ ಜಾರಿಗೆ ತಂದಿತ್ತು, ಅದರಲ್ಲಿನ ಕೆಲ ನ್ಯೂನತೆ ಕಂಡು ಕಾವೇರಿ ೧.೦ನ್ನು ಸರಳೀಕರಿಸಿ ಕಾವೇರಿ ೨.೦ ಜಾರಿಗೆ ತರಲಾಗಿದೆ ಎಂದರು.
ಕಾವೇರಿ ೨.೦ ಜಾಲತಾಣದ ವಿವಿಧ ಹಂತಗಳ ಬಗ್ಗೆ ಸಾಗರದ ಉಪನೋಂದಣಾಧಿಕಾರಿ ಚೇತನ್‌ರಾಜ್ ಗುತ್ತಲ್ ಮಾಹಿತಿ ನೀಡಿದರು. ಈ ಜಾಲತಾಣದ ಮೂಲಕ ತಮ್ಮ ಸ್ವಂತ ಖಾತೆ ತೆರೆದು ನೋಂದಣಿ ಮಾಡಿಸಬಹುದು. ಪತ್ರಬರಹಗಾರರು ಪ್ರಾಯೋಗಿಕ ಪ್ರಾತ್ಯಕ್ಷತೆ ಪಡೆಯುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು. ಹಿರಿಯ ನೋಂದಣಾಧಿಕಾರಿ ಲಕ್ಷ್ಮೀಕಾಂತ ಉಪಸ್ಥಿತರಿದ್ದರು.
No comments:
Post a Comment