ಮೈನವಿರೇಳಿಸಿದ ಕಾವಡಿ ಹರಕೆ ಭಕ್ತಿ
ಪ್ರತಿವರ್ಷದಂತೆ ಈ ಬಾರಿ ಸಹ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಹಾಗು ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾವಡಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಭಕ್ತರ ಕಾವಡಿ ಹರಕೆ ಸಮರ್ಪಿಸುವ ಪರಿ ನೋಡುಗರ ಮೈನವಿರೇಳಿಸಿತು.
ಭದ್ರಾವತಿ, ಏ. ೬ : ಪ್ರತಿವರ್ಷದಂತೆ ಈ ಬಾರಿ ಸಹ ತಾಲೂಕಿನ ಕೂಡ್ಲಿಗೆರೆ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಹಾಗು ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾವಡಿ ಉತ್ಸವ ವಿಜೃಂಭಣೆಯಿಂದ ಜರುಗಿತು.
ಚನ್ನಗಿರಿ ರಸ್ತೆಯ ಕೂಡ್ಲಿಗೆರೆ ಗ್ರಾಮದಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷ ಕಾವಡಿ ಉತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು, ಸಾವಿರಾರು ಭಕ್ತಾಧಿಗಳು ಈ ಉತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಅದರಲ್ಲೂ ಕಾವಡಿ ಹರಕೆ ಹೊತ್ತ ಭಕ್ತರನ್ನು ನೋಡುವುದೇ ಮತ್ತೊಂದು ವಿಶೇಷವಾಗಿದೆ. ಕಾವಡಿ ಹರಕೆ ಹೊತ್ತ ಭಕ್ತರು ತಾಲೂಕಿನ ವಿವಿಧ ಮೂಲೆಗಳಿಂದ ಮಾತ್ರವಲ್ಲದೆ ಶಿವಮೊಗ್ಗ, ಚನ್ನಗಿರಿ ತಾಲೂಕುಗಳಿಂದಲೂ ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದರು. ಕೆಲ ಭಕ್ತರು ಬಾಯಿ, ನಾಲಿಗೆಗೆ ಲೋಹದ ತ್ರಿಶೂಲ ಚುಚ್ಚಿಕೊಂಡು, ಮತ್ತೆ ಕೆಲವು ಭಕ್ತರು ಲೋಹದ ಕೊಕ್ಕೆಗಳನ್ನು ಬೆನ್ನಿಗೆ ಸಿಕ್ಕಿಸಿಕೊಂಡು ಬೃಹತ್ ಗಾತ್ರದ ಅಲಂಕೃತಗೊಂಡ ಕಲ್ಲು ಬಂಡಿಯ ತೇರುಗಳನ್ನು ಹಾಗು ಇನ್ನೂ ಕೆಲ ಭಕ್ತರು ಲೋಹದ ಕೊಕ್ಕೆಗಳನ್ನು ಬೆನ್ನು ಹಾಗು ಕಾಲುಗಳಿಗೆ ಚುಚ್ಚಿಕೊಂಡು ಕ್ರೇನ್‌ಗಳ ನೆರವಿನಿಂದ ಪಕ್ಷಿಗಳಂತೆ ಜೋತು ಬಿದ್ದು ಕಾವಡಿ ಹರಕೆ ಸಮರ್ಪಿಸುವ ಪರಿ ನೋಡುಗರ ಮೈನವಿರೇಳಿಸಿತು.
ಇದಕ್ಕೂ ಮೊದಲು ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿರುವ ಭದ್ರಾ ಕಾಲುವೆ ಬಳಿ ಶ್ರೀ ಸುಬ್ರಮಣ್ಯ ಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಅಲಂಕೃತಗೊಳಿಸಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಭಕ್ತರಿಗೆ ಮಜ್ಜಿಗೆ, ಪಾನಕ ಹಾಗು ಪ್ರಸಾದ ವಿತರಣೆ ನಡೆಯಿತು.
ಭದ್ರಗಿರಿಯಲ್ಲೂ ಹರಿದು ಬಂದ ಭಕ್ತ ಸಮೂಹ :
ಶ್ರೀ ಕ್ಷೇತ್ರ ಭದ್ರಗಿರಿಯಲ್ಲೂ ಶಿವಮೊಗ್ಗ ಹಾಗು ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ತಾಲೂಕುಗಳಿಂದ ಭಕ್ತರು ಆಗಮಿಸಿದ್ದರು. ದೂರದ ಪ್ರದೇಶಗಳಿಂದ ಕಾಲ್ನಡಿಗೆಯಲ್ಲಿ ಆಗಮಿಸಿದ್ದ ಕಾವಡಿ ಹರಕೆ ಹೊತ್ತ ಭಕ್ತರು ಗಮನ ಸೆಳೆದರು. ಶ್ರೀ ಕ್ಷೇತ್ರದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ಜರುಗಿದವು. ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗು ಅನ್ನಸಂತರ್ಪಣೆ ನೆರವೇರಿತು.
No comments:
Post a Comment